ADVERTISEMENT

ಸ್ವಾಭಿಮಾನದ ಪ್ರತೀಕ ಸ್ಪರ್ಧೆ: ಎಂ.ಎಸ್‌.ಲೋಣಿ

ವಿಜಯಪುರ–ಬಾಗಲಕೋಟೆ ವಿಧಾನ ಪರಿಷತ್‌ ಚುನಾವಣೆ ಪ್ರಚಾರ ಸಭೆ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2021, 13:22 IST
Last Updated 4 ಡಿಸೆಂಬರ್ 2021, 13:22 IST
ಚಡಚಣದ ಸಂಗಮೇಶ್ವರ  ಮಂಗಲ ಕಾರ್ಯಾಲಯದಲ್ಲಿ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಡೆದ ಸ್ಥಳೀಯ ಸಂಸ್ಥೆಗಳ ಸದಸ್ಯರ ಪ್ರಚಾರ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು 
ಚಡಚಣದ ಸಂಗಮೇಶ್ವರ  ಮಂಗಲ ಕಾರ್ಯಾಲಯದಲ್ಲಿ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಡೆದ ಸ್ಥಳೀಯ ಸಂಸ್ಥೆಗಳ ಸದಸ್ಯರ ಪ್ರಚಾರ ಸಭೆಯಲ್ಲಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಮಾತನಾಡಿದರು    

ಚಡಚಣ: ವಿಧಾನ ಪರಿಷತ್‌ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳ ಸದಸ್ಯರ ಸ್ವಾಭಿಮಾನದ ಪ್ರತೀಕವಾಗಿ ಕಣಕಿಳಿದಿದ್ದೇನೆ ಎಂದುಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ಹೇಳಿದರು.

ಪಟ್ಟಣದ ಸಂಗಮೇಶ್ವರ ಮಂಗಲ ಕಾರ್ಯಾಲಯದಲ್ಲಿ ವಿಧಾನ ಪರಿಷತ್‌ ಚುನಾವಣೆ ಹಿನ್ನೆಲೆಯಲ್ಲಿ ಶನಿವಾರ ನಡೆದ ಸ್ಥಳಿಯ ಸಂಸ್ಥೆಗಳ ಸದಸ್ಯರ ಸಭೆಯಲ್ಲಿ ಅವರು ಮಾತನಾಡಿದರು.

ಬಿಜೆಪಿ-ಕಾಂಗ್ರೆಸ್‌ ಪಕ್ಷಗಳ ಅಭ್ಯರ್ಥಿಗಳು ಒಳ ಒಪ್ಪಂದ ಮಾಡಿಕೊಂಡು ಚುನಾವಣೆ ಪ್ರಕ್ರಿಯೆಯಿಂದ ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಹೊರಗಿಡಲು ಯತ್ನಿಸಿದರು. ಅವರ ಹಕ್ಕನ್ನು ಮೊಟಕುಗೊಳಿಸಲು ನಾಟಕನಡೆಸಿದ್ದರು. ಆದರೆ, ನಾನು ಅದಕ್ಕೆ ಅವಕಾಶ ನೀಡಿಲಿಲ್ಲ ಎಂದರು.

ADVERTISEMENT

ಯಾವುದೇ ಆಸೆ, ಆಮಿಷಗಳಿಗೆ ಬಲಿಯಾಗದೇ, ಸದಸ್ಯರ ಶಕ್ತಿಯಾಗಿ, ಅವರ ಬಲದ ಮೇಲೆ ಕಣಕ್ಕೆ ಧುಮುಕ್ಕಿದ್ದೇನೆ. ಇದರಿಂದಾಗಿ ಎರಡೂ ಪಕ್ಷಗಳ ಅಭ್ಯರ್ಥಿಗಳಲ್ಲಿ ನಡುಕ ಹುಟ್ಟಿದೆ ಎಂದು ಹೇಳಿದರು.

ಗ್ರಾಮ ಪಂಚಾಯ್ತಿ, ಪಟ್ಟಣ ಪಂಚಾಯ್ತಿ ಸೇರಿದಂತೆ ಎಲ್ಲ ಸ್ಥಳೀಯ ಸಂಸ್ಥೆಗಳ ಸದಸ್ಯರ ಸ್ವಾಭಿಮಾನದ ಕಿಚ್ಚಿನ ಮುಂದೆ ಅವರ ಹಣ ಬಲ, ತೋಳ್ಬಲ, ಅಪ ಪ್ರಚಾರಗಳ ಆಟ ನಡೆಯುವದಿಲ್ಲ ಎಂದರು.

ಪಂಚಾಯತ್‌ ರಾಜ್ ಬಲಪಡಿಸುವುದು, ಸ್ಥಳೀಯ ಸಂಸ್ಥೆಗಳ ಸದಸ್ಯರ ಹಕ್ಕುಗಳಿಗಾಗಿ ಹಾಗೂ ಅವರ ಸಮಸ್ಯೆಗಳ ನಿವಾರಣೆಗಾಗಿ ಹೋರಾಟ ಮಾಡುವೆ. ಸಾಮಾಜಿಕ ನ್ಯಾಯಕ್ಕಾಗಿ ಹೋರಾಟ ಮಾಡಲು ನನಗೊಂದು ಬಾರಿ ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಅತ್ಯಧಿಕ ಮತಗಳಿಂದ ಆಯ್ಕೆ ಮಾಡಬೇಕು ಎಂದು ಮನವಿ ಮಾಡಿದರು.

ವಿಧಾನ ಪರಿಷತ್ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳ ಅಭ್ಯರ್ಥಿಗಳಿಗೆ ಪಕ್ಷದ ಕಾರ್ಯಕರ್ತರ ಪಡೆ ಹಾಗೂ ಆಡಳಿತ ಯಂತ್ರದ ಶ್ರೀರಕ್ಷೆಯಿದ್ದರೆ ನನಗೆ ಸ್ಥಳೀಯ ಸಂಸ್ಥೆಗಳ ಸ್ವಾಭಿಮಾನಿ ಸದಸ್ಯರೇ ನನ್ನ ಕಾರ್ಯಪಡೆ ಹಾಗೂ ಶ್ರೀರಕ್ಷೆಯಾಗಿದ್ದಾರೆ ಎಂದರು.

ಗ್ರಾಮ ಪಂಚಾಯ್ತ ಮಾಜಿ ಅಧ್ಯಕ್ಷ ಶ್ರೀಮಂತ ಕಾಪಸೆ ಮಾತನಾಡಿ, ಹುಟ್ಟು ಹೋರಾಟಗಾರ, ಶಿಕ್ಷಣ ಪ್ರೇಮಿ ಹಾಗೂ ಸರಳ ರಾಜಕಾರಿಣಿಯಾದ ಮಲ್ಲಿಕಾರ್ಜುನ ಲೋಣಿ ಅವರಿಗೆ ಒಂದು ಬಾರಿ ಪರಿಷತ್‌ಗೆ ಅವಕಾಶ ನೀಡಲು ಸದಸ್ಯರು ಪ್ರಥಮ ಪ್ರಾಶಸ್ತ್ಯದ ಮತ ನೀಡಿ ಎಂದು ವಿನಂತಿ ಮಾಡಿದರು.

ದೇವರ ನಿಂಬರಗಿ ಗ್ರಾಮ ಪಂಚಾಯ್ತಿ ಸದಸ್ಯ ಮಹಾದೇವ ಕರ್ಲಮಳ, ಕನ್ನೂರಿನ ರಾಜುಗೌಡ ಪಾಟೀಲ, ಹಲಸಂಗಿ ಗ್ರಾಮ ಪಂಚಾಯ್ತಿ ಸದಸ್ಯರಾದ ಸಿದ್ಧಾರಾಮ ಕೊಟ್ಟಲಗಿ, ಬಸಗೊಂಡ ಪಾಟೀಲ, ಮಹಾದೇವ ಮಾಶ್ಯಾಳ ಮಾತನಾಡಿ ಬೆಂಬಲ ವ್ಯಕ್ತಪಡಿಸಿದರು.

ಚಡಚಣ ತಾಲ್ಲೂಕಿನ 13 ಗ್ರಾಮ ಪಂಚಾಯ್ತಿಗಳ ಸದಸ್ಯರು, ಬೆಂಬಲಿಗರುಸಭೆಯಲ್ಲಿ ಪಾಲ್ಗೊಂಡಿದ್ದರು.

****

ಹಣ ಹಾಗೂ ಅಧಿಕಾರ ದರ್ಪದಿಂದ ಮಾತ್ರ ರಾಜಕಾರಣ ಸಾಧ್ಯ ಎಂಬ ಭ್ರಮೆಯಲ್ಲಿರುವವರಿಗೆ ಈ ಬಾರಿಯ ಚುನಾವಣೆಯಲ್ಲಿ ತಕ್ಕಪಾಠ ಕಲಿಸಿ

–ಮಲ್ಲಿಕಾರ್ಜುನ ಲೋಣಿ

ಪಕ್ಷೇತರ ಅಭ್ಯರ್ಥಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.