ADVERTISEMENT

ಅಂಜೂರ ಬೆಳೆದು ಕೈತುಂಬ ಆದಾಯ: ಮುದ್ದೇಬಿಹಾಳದ ರೈತನ ಯೋಶೋಗಾಥೆ

ಜಮ್ಮಲದಿನ್ನಿ ರೈತ ಸಿದ್ರಾಮರೆಡ್ಡಿ ಬಾಪೂಗೌಡ ಮಾಲೀಪಾಟೀಲ

ಮಹಾಬಲೇಶ್ವರ ಶಿ.ಗಡೇದ
Published 12 ಮೇ 2022, 19:30 IST
Last Updated 12 ಮೇ 2022, 19:30 IST
ಜಮ್ಮಲದಿನ್ನಿ ಗ್ರಾಮದಲ್ಲಿ ಅಂಜೂರ ತೋಟದಲ್ಲಿ ಹಣ್ಣು ಹರಿಯುತ್ತಿರುವ ಪ್ರಗತಿಪರ ರೈತ ಸಿದ್ರಾಮರೆಡ್ಡಿ ಬಾಪೂಗೌಡ ಮಾಲೀಪಾಟೀಲ 
ಜಮ್ಮಲದಿನ್ನಿ ಗ್ರಾಮದಲ್ಲಿ ಅಂಜೂರ ತೋಟದಲ್ಲಿ ಹಣ್ಣು ಹರಿಯುತ್ತಿರುವ ಪ್ರಗತಿಪರ ರೈತ ಸಿದ್ರಾಮರೆಡ್ಡಿ ಬಾಪೂಗೌಡ ಮಾಲೀಪಾಟೀಲ    

ಮುದ್ದೇಬಿಹಾಳ(ವಿಜಯಪುರ): ತಮ್ಮ ಎರಡು ಎಕರೆ ಭೂಮಿಯಲ್ಲಿ ಅಂಜೂರ ಬೆಳೆ ಬೆಳೆದು ಸಂತೃಪ್ತಿಯ ಜೊತೆಗೆ ಲಾಭವನ್ನೂ ಪಡೆಯುವ ಮೂಲಕ ಇತರೆ ರೈತರಿಗೆ ಮಾದರಿಯಾಗಿದ್ದಾರೆ ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದ ಪ್ರಗತಿಪರ ರೈತ ಸಿದ್ರಾಮರೆಡ್ಡಿ ಬಾಪೂಗೌಡ ಮಾಲೀಪಾಟೀಲ.

ಮೂಲತ: ರಾಯಚೂರು ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಅಂಚೆ ಸುಗೂರು ಗ್ರಾಮದವರಾದ ಸಿದ್ರಾಮರೆಡ್ಡಿ ಅವರು ಮುದ್ದೇಬಿಹಾಳ ತಾಲ್ಲೂಕಿನ ಜಮ್ಮಲದಿನ್ನಿ ಗ್ರಾಮದಲ್ಲಿ ಭೂಮಿ ಖರೀದಿಸಿ ತಮ್ಮ ಕೃಷಿ ಪ್ರಯೋಗಶಾಲೆ ಆರಂಭಿಸುವುದರ ಜೊತೆಗೆ ಉಳಿದ ರೈತರಿಗೂ ಉಚಿತ ಸಲಹೆ, ಮಾರ್ಗದರ್ಶನ ಮಾಡುವ ಮೂಲಕ ಯುವಕರಿಗೆ ಸ್ವಾವಲಂಬಿ ಜೀವನದ ಪಾಠ ಹೇಳುತ್ತಿದ್ದಾರೆ.

ಒಂದು ವರ್ಷದ ಹಿಂದೆಯಷ್ಟೇ ಆಲಮಟ್ಟಿಯಲ್ಲಿ ₹90ಕ್ಕೆ ಒಂದರಂತೆ ಅಂಜೂರ ಸಸಿ ಖರೀದಿಸಿ 10X10 ಅಡಿ ಅಂತರದಲ್ಲಿ 600 ಅಂಜೂರ ಗಿಡಗಳನ್ನು ಹಚ್ಚಿರುವ ಇವರು ಅದರಿಂದ ಅಂದಾಜು ಪ್ರತೀ ದಿನ 30 ರಿಂದ 35 ಕೆಜಿ ಅಂಜೂರ ಹಣ್ಣು ಹರಿದು ₹3500 ನಿತ್ಯ ಪಡೆಯುತ್ತಿದ್ದಾರೆ.

ADVERTISEMENT

ಅಂಜೂರ ಗಿಡಗಳು ನಿರಂತರ 25 ವರ್ಷಗಳವರೆಗೆ ಹಣ್ಣಿನ ಫಸಲು ನೀಡುವುದರಿಂದ ಇದಕ್ಕೆ ಹೆಚ್ಚಿನ ಆರೈಕೆ ಬೇಕಾಗಿಲ್ಲ ಎನ್ನುತ್ತಾರೆ ಅವರು.

ತಾವು ಹರಿದ ಹಣ್ಣುಗಳನ್ನು ಮುದ್ದೇಬಿಹಾಳ ಹಾಗೂ ತಾಳಿಕೋಟಿ ಪಟ್ಟಣದಲ್ಲಿಯೇ ಮಾರುವ ಮೂಲಕ ಸ್ವತ: ಮಾರುಕಟ್ಟೆ ಕಂಡುಕೊಂಡಿದ್ದಾರೆ.

ಅಂಜೂರ ಬೆಳೆಗೆ ಇರುವ ಬೇಡಿಕೆ ಅರಿತು ಈಗ ಅವರು ಮತ್ತೆ ಐದು ಎಕರೆ ಭೂಮಿಯಲ್ಲಿ ಅಂಜೂರ ಬೆಳೆಯಲು ಸಿದ್ಧತೆ ನಡೆಸಿದ್ದಾರೆ.

ಕೇವಲ ನಾಲ್ಕು ಎಕರೆ ಭೂಮಿ ಖರೀದಿಯಿಂದ ಕೃಷಿ ಜೀವನ ಆರಂಭಿಸಿರುವ ಅವರು ಕೃಷಿಯಿಂದಲೇ ಲಾಭ ಗಳಿಸುತ್ತ ಸದ್ಯಕ್ಕೆ 14 ಎಕರೆ ಭೂಮಿಯ ಒಡೆಯರಾಗಿದ್ದಾರೆ. ತಮ್ಮ ಎಲ್ಲ ಭೂಮಿಯಲ್ಲಿ ಯಾವುದೇ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸದೇ ಸಂಪೂರ್ಣ ಸಾವಯವ ಗೊಬ್ಬರ ಬಳಸುವ ಮೂಲಕ ಪರಿಸರಸ್ನೇಹಿ ಮಾರ್ಗ ತುಳಿಯುತ್ತಿದ್ದಾರೆ.

ಹೊಲದ ಸುತ್ತಲೂ 106 ತೆಂಗಿನ ಮರಗಳನ್ನು ಹಚ್ಚಿ ಅದರಿಂದ ಆದಾಯ, ತೋಟದಲ್ಲಿಯೇ ಐದು ಗೀರ್‌ ತಳಿಯ ಆಕಳು ಸಾಕಿ ಅದರಿಂದಲೂ ನಿತ್ಯ 40 ಲೀಟರ್ ಹಾಲು (ಪ್ರತೀ ಲೀ.ಗೆ ₹60) ಪಡೆಯುವುದರ ಜೊತೆಗೆ ಆಕಳುಗಳಿಂದ ಬರುವ ಸೆಗಣಿ, ಗೋಮೂತ್ರದಿಂದಲೇ ಕೀಟನಾಶಕ ತಯಾರಿಸಿ ಬಳಸುತ್ತಿದ್ದಾರೆ. ಇದರೊಂದಿಗೆ ಕೃಷಿಯಲ್ಲಿ ಪ್ರಯೋಗ ಮಾಡುತ್ತಾ ಹೊರಟಿರುವ ಇವರು ನಾಲ್ಕು ಎಕರೆ ಕಬ್ಬು ಬೆಳೆದು ಬೆಲ್ಲದ ಆಲೆಮನೆ ನಿರ್ಮಿಸುವ ಆಲೋಚನೆ ಹೊಂದಿದ್ದಾರೆ.

ಭೂತಾಯಿಯನ್ನು ನಂಬಿದವರಿಗೆ ಎಂದೂ ನಮಗೆ ಮೋಸ ಮಾಡುವುದಿಲ್ಲ ಎನ್ನುವ ಸಿದ್ರಾಮರೆಡ್ಡಿ, ಯುವಕರು ಸರ್ಕಾರಿ ನೌಕರಿಗೆ ಜೋತು ಬೀಳದೇ ಕೃಷಿಯತ್ತ ಮುಖ ಮಾಡಬೇಕು. ಸರ್ಕಾರ ಸಹ ಕೃಷಿ, ತೋಟಗಾರಿಕೆಗೆ ಹೆಚ್ಚು ಪ್ರೋತ್ಸಾಹ ನೀಡುತ್ತಿದ್ದು, ಅದರ ಪ್ರಯೋಜನ ಪಡೆದುಕೊಳ್ಳುವಂತೆ ಕೋರುತ್ತಾರೆ.

ಸಿದ್ರಾಮರೆಡ್ಡಿ ಮಾಲಿಪಾಟೀಲ ಸಂಪರ್ಕ ಸಂಖ್ಯೆ ಮೊ.9686753506.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.