ADVERTISEMENT

‘ಗುಮ್ಮಟನಗರಿ’ಯಲ್ಲಿ ನಾಗರಪಂಚಮಿ ಸಂಭ್ರಮ

ನಾಗರಕಲ್ಲು, ಮೂರ್ತಿ, ಹುತ್ತಕ್ಕೆ ಮುತ್ತೈದೆಯರಿಂದ ಕ್ಷೀರಾಭಿಷೇಕ, ಉಂಡೆ ನೈವೇದ್ಯ

​ಪ್ರಜಾವಾಣಿ ವಾರ್ತೆ
Published 13 ಆಗಸ್ಟ್ 2021, 14:14 IST
Last Updated 13 ಆಗಸ್ಟ್ 2021, 14:14 IST
ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳೆಯರು ನಾಗರ ಪಂಚಮಿ ಪ್ರಯುಕ್ತ ಹುತ್ತಕ್ಕೆ ಕ್ಷೀರಾಭಿಷೇಕ ಮಾಡಿದರು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಸಿದ್ದೇಶ್ವರ ದೇವಸ್ಥಾನದ ಆವರಣದಲ್ಲಿ ಮಹಿಳೆಯರು ನಾಗರ ಪಂಚಮಿ ಪ್ರಯುಕ್ತ ಹುತ್ತಕ್ಕೆ ಕ್ಷೀರಾಭಿಷೇಕ ಮಾಡಿದರು–ಪ್ರಜಾವಾಣಿ ಚಿತ್ರ   

ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಶುಕ್ರವಾರ ನಾಗರ ಪಂಚಮಿಯನ್ನು ಶ್ರದ್ಧೆ–ಭಕ್ತಿಯಿಂದ ಆಚರಿಸಲಾಯಿತು.

ಮಹಿಳೆಯರು ನಾಗ ದೇವಸ್ಥಾನಕ್ಕೆ ಭೇಟಿ ಕೊಟ್ಟು ನಾಗ ವಿಗ್ರಹ, ನಾಗರ ಕಟ್ಟೆ, ನಾಗರ ಕಲ್ಲು, ಹುತ್ತಕ್ಕೆ ಹಾಲೆರೆದು ಪೂಜೆ ಸಲ್ಲಿಸಿದರು. ಬಗೆಬಗೆಯ ಉಂಡೆ, ಅರಳನ್ನು ನೈವೇದ್ಯವಾಗಿ ಅರ್ಪಿಸಿ, ಇಷ್ಟಾರ್ಥ ಸಿದ್ಧಿಗಾಗಿ ನಾಗದೇವತೆ ಬಳಿ ಬೇಡಿಕೊಂಡರು.

ನಗರದ ಮನಗೂಳಿ ಅಗಸಿಯ ಹನುಮಾನ್‌ ದೇವಸ್ಥಾನ, ಬಾಗಲಕೋಟೆ ರಸ್ತೆಯ ರೈಲ್ವೆ ಗೇಟ್‌ ಬಳಿ ಇರುವ ಹನುಮಾನ್‌ ದೇವಸ್ಥಾನ, ಕನಕದಾಸ ಬಡಾವಣೆಯಲ್ಲಿರುವ ಅಂಬಾಭವಾನಿ ದೇವಸ್ಥಾನ, ಶಾಹಪೇಟೆ, ಸಿದ್ಧೇಶ್ವರ ಗುಡಿ ಆವರಣ, ಬುದ್ದವಿಹಾರ ಸಮೀಪದ ಆಂಜನೇಯ ದೇವಸ್ಥಾನ ಸೇರಿದಂತೆ ನಗರದ ಬಹುತೇಕ ಬಡಾವಣೆಗಳ ವಿವಿಧ ದೇವಸ್ಥಾನಗಳ ಆವರಣದಲ್ಲಿ ಇರುವ ನಾಗರಕಟ್ಟೆಗಳಲ್ಲಿ ಮುತ್ತೈದೆಯರು ಬೆಳಿಗ್ಗೆಯಿಂದ ಸಂಜೆವರೆಗೂ ನಾಗ ದೇವತೆಗೆ ಕ್ಷೀರಾಭಿಷೇಕ ಮಾಡುತ್ತಿದ್ದ ದೃಶ್ಯ ಕಂಡುಬಂದಿತು.

ADVERTISEMENT

ನಗರದ ವಜ್ರ ಹನುಮಾನ್‌ ದೇವಸ್ಥಾನದ ಆವರಣದಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ಸಣ್ಣ ಹಾಗೂ ಅತಿ ಸಣ್ಣ ಒಕ್ಕೂಟದ ಜಿಲ್ಲಾಧ್ಯಕ್ಷೆ ಭಾರತಿ ಟಂಕಸಾಲಿ ನೇತೃತ್ವದಲ್ಲಿ ನಾಗರ ಪ‍ಂಚಮಿ ಅಂಗವಾಗಿ ನಾಗರ ಕಲ್ಲಿಗೆ ಕ್ಷೀರಾಭಿಷೇಕ ಮಾಡಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ಭಾರತಿ ಟಂಕಸಾಲಿ,ಹಿಂದೂ ಧರ್ಮದಲ್ಲಿ ನಾಗರ ಪಂಚಮಿಗೆ ವಿಶೇಷ ಮಹತ್ವವಿದೆ. ನಾಗಪ್ಪನಿಗೆ ಹಾಲು ಎರೆಯುವುದರಿಂದ ಪ್ರತಿಯೊಬ್ಬ ಭಕ್ತರ ಕಷ್ಟಕಾರ್ಪಣ್ಯಗಳು ದೂರವಾಗುತ್ತವೆ ಎಂಬ ನಂಬಿಕೆ ಇದೆ ಎಂದರು.

ಕೋವಿಡ್‌ ಆತಂಕದ ನಡುವೆಯೂ ಮಹಿಳೆಯರು ಸಾಂಪ್ರದಾಯಿಕವಾಗಿ ನಾಗರ ಪಂಚಮಿಯನ್ನು ಆಚರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.