
ತಾಂಬಾ: ಗ್ರಾಮದ ಅಥರ್ಗಾ ರಸ್ತೆ ಸಂಪೂರ್ಣ ಹಾಳು ಗ್ರಾಮಸ್ಥರ ಮನವಿಗೆ ಕ್ಯಾರೇ ಎನ್ನದ ಅಧಿಕಾರಿಗಳು ಆಸ್ಪತ್ರೆಗೆ ತರಳಲು ಗರ್ಭಿಣಿಯರಿಗೆ ಮತ್ತು ಸಾರ್ವಜನಿಕರಿಗೆ ತೊಂದರೆಯಾಗಿದೆ.
ದುರಸ್ತಿಗೆ ಕ್ರಮ ಕೈಗೊಳ್ಳಬೇಕಾದ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರಯಾಣಿಕರ ಸಂಚಾರಕ್ಕೆ ಸಂಚಕಾರ ಬಂದಿದೆ. ತಾಂಬಾ ಗ್ರಾಮದಿಂದ 13 ಕಿ.ಮೀ ಅಂತರವಿದೆ. ಅಥರ್ಗಾ ಗ್ರಾಮ ಇಂಡಿ ಮತಕ್ಷೇತ್ರ, ತಾಂಬಾ ಗ್ರಾಮ ಸಿಂದಗಿ ಮತಕ್ಷೇತ್ರದಲ್ಲಿದೆ. ಈ 13 ಕಿ.ಮೀ ರಸ್ತೆಯಲ್ಲಿ 7 ಕಿ.ಮೀ. ರಸ್ತೆಯನ್ನು ಇಂಡಿ ಮತಕ್ಷೇತ್ರಕ್ಕೆ ಇನ್ನುಳಿದ 6 ಕಿ.ಮೀ ಸಿಂದಗಿ ಮತಕ್ಷೇತ್ರಕ್ಕೆ ಬರುತ್ತಿದೆ. ಈ ರಸ್ತೆಯ ಬಗ್ಗೆ ಯಾವ ಅಧಿಕಾರಿಗಳು ತಲೆಕೆಡಿಸಿಕೊಂಡಿಲ್ಲ.
ರಸ್ತೆಯು ತೆಗ್ಗು ಗುಂಡಿಗಳು ಬಿದ್ದು ಹಾಳಾಗಿದೆ. ಅಧಿಕಾರಿಗಳಿಗೆ ಸಿಂದಗಿ ಮತಕ್ಷೇತ್ರದ ತಾಂಬಾ, ಶಿವಪುರ ಇಂಡಿ ಮತಕ್ಷೇತ್ರದ ಬೆನಕನಹಳ್ಳಿ ಗ್ರಾಮಸ್ತರು ಶಾಪ ಹಾಕುವಂತೆ ಆಗಿದೆ. ದಿನನಿತ್ಯ ವಾಹನ, ರೈತರ ಎತ್ತಿನ ಗಾಡಿ, ಶಾಲಾ ವಾಹನ ಸವಾರರಿಗೆ ತೊಂದರೆಯಾಗಿದೆ.
ಕಾಲುನಡಿಗೆಯಿಂದಲೂ ತಿರುಗಾಡದಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿ ಸರ್ಕಾರಿ ಆಸ್ಪತ್ರೆ ಇರುವದರಿಂದ ಇಲ್ಲಿಗೆ ಬರುವ ಗರ್ಭಿಣಿಯರು, ರೋಗಿಗಳು ಕೂಡಾ ಪರದಾಡುವಂತೆ ಆಗಿದೆ.
ಈ ರಸ್ತೆ 2 ಮತಕ್ಷೇತ್ರಗಳಲ್ಲಿ ಬರುವುದರಿಂದ ಅಭಿವೃದ್ಧಿ ಕುಂಠಿತವಾಗಿದೆ. ಶೀಘ್ರದಲ್ಲಿಯೇ ಅಧಿಕಾರಿಗಳು ರಸ್ತೆ ದುರಸ್ತಿ ಮಾಡಿಸಿ, ಹದಗೆಟ್ಟ ರಸ್ತೆಗೆ ಡಾಂಬರೀಕರಣ ಮಾಡಿಸಬೇಕು ಎಂದು ತಾಂಬಾ, ಶಿವಪುರ, ಬೆನಕನಹಳ್ಳಿ,ಅಥರ್ಗಾ ಗ್ರಾಮಸ್ತರು ಆಗ್ರಹಿಸಿದ್ದಾರೆ.
ತಕ್ಷಣವೇ ಅಧಿಕಾರಿಗಳ ಸಭೆ ನಡೆಸಿ ರಸ್ತೆಗಳ ಕುರಿತು ಮಾಹಿತಿ ಪಡೆದು ಸರ್ಕಾರದ ಗಮನಕ್ಕೆ ತಂದು ದುರಸ್ತಿಗೆ ಕ್ರಮ ಕೈಗೊಳ್ಳಲಾಗುವುದು–ಅಶೋಕ ಮನಗೂಳಿ, ಶಾಸಕ
ಶಿವಪುರ ಗ್ರಾಮದಲ್ಲಿ ಕೂಲಿಕಾರ್ಮಿಕರು ಹೆಚ್ಚಾಗಿದ್ದು ದಿನನಿತ್ಯ ತಾಂಬಾ ಗ್ರಾಮದಿಂದಲೇ ಪಟ್ಟಣಗಳಿಗೆ ಹೊಗಬೇಕಾಗಿದೆ. ಹಾಳಾದ ರಸ್ತೆಯಿಂದ ಜೀವಕ್ಕೆ ಸಂಚಕಾರ ಬಂದಿದೆ–ವಿನಾಯಕ, ಅಂಬಲಗಿ ಗ್ರಾಮಸ್ಥ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.