ADVERTISEMENT

ಜೆಡಿಎಸ್‌ ಯಾವುದೇ ಜಾತಿ, ಪ್ರದೇಶಕ್ಕೆ ಸೀಮಿತವಲ್ಲ: ನಿಖಿಲ್ ಕುಮಾರಸ್ವಾಮಿ

​ಪ್ರಜಾವಾಣಿ ವಾರ್ತೆ
Published 27 ಫೆಬ್ರುವರಿ 2026, 14:18 IST
Last Updated 27 ಫೆಬ್ರುವರಿ 2026, 14:18 IST
   

ವಿಜಯಪುರ: ‘ಜೆಡಿಎಸ್ ಒಕ್ಕಲಿಗ ಸಮುದಾಯ ಹಾಗೂ ಹಳೇ ಮೈಸೂರು ಭಾಗಕ್ಕೆ ಸೀಮಿತವಾದ ಪಕ್ಷ ಎಂದು ವಿರೋಧಿಗಳು ಅಪಪ್ರಚಾರ ಮಾಡುತ್ತಿದ್ದಾರೆ. ಆದರೆ, ಜೆಡಿಎಸ್‌ ಯಾವುದೇ ಜಾತಿ, ಪ್ರದೇಶಕ್ಕೆ ಸೀಮಿತವಲ್ಲ.‌ ರಾಜ್ಯದ ಎಲ್ಲ ಜಾತಿ, ಸಮುದಾಯ, ಪ್ರದೇಶಗಳಲ್ಲೂ ಪಕ್ಷವು ಸುಭದ್ರ ಮತ್ತು ಶಕ್ತಿಯುತವಾಗಿದೆ’ ಎಂದು ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದರು.

ನಗರದಲ್ಲಿ ಶುಕ್ರವಾರ ಜೆಡಿಎಸ್ ಬೆಳ್ಳಿ ಹಬ್ಬದ ಅಂಗವಾಗಿ ಆಯೋಜಿಸಿದ್ದ ಜನತಾ ಸಮಾವೇಶಲ್ಲಿ ಮಾತನಾಡಿದ ಅವರು, ‘ಪಕ್ಷದ ಸಾಮಾನ್ಯ ಕಾರ್ಯಕರ್ತರೇ ಜೆಡಿಎಸ್‌ನ ವರಿಷ್ಠರು’ ಎಂದು ಹೇಳಿದರು. 

‘ಚುನಾವಣೆ ಪೂರ್ವದಲ್ಲಿ ಕಾಂಗ್ರೆಸ್ ನಡೆಗೆ ಕೃಷ್ಣಾ ಕಡೆಗೆ ಎಂದು ಹೇಳಿದ್ದ ಕಾಂಗ್ರೆಸ್‌ ನಾಯಕರು ಅಧಿಕಾರಕ್ಕೆ ಬಂದ ಮೇಲೆ ಸಂಪೂರ್ಣ ಮರೆತಿದ್ದಾರೆ. ಅವರು ನೀಡಿದ ಭರವಸೆಯಲ್ಲಿ ಅರ್ಧದಷ್ಟು ಅನುದಾನ ನೀಡಿಲ್ಲ’ ಎಂದು ಆರೋಪಿಸಿದರು.

ADVERTISEMENT

‘ಕೇವಲ ₹17 ಸಾವಿರ ಕೋಟಿಯಲ್ಲಿ ಆಗ ಬಹುದಾಗಿದ್ದ ಯುಕೆಪಿ ಮೂರನೇ ಹಂತವು ಕಾಂಗ್ರೆಸ್‌ ಸರ್ಕಾರದ ವಿಳಂಬ ನೀತಿ ಮತ್ತು ತಪ್ಪಿನಿಂದಾಗಿ ಈಗ ₹ 87 ಸಾವಿರ ಕೋಟಿಗೆ ತಲು‍ಪಿದೆ’ ಎಂದು ದೂರಿದರು.

‘ರಾಜ್ಯ ಸರ್ಕಾರದ ವೈಫಲ್ಯಗಳ ವಿರುದ್ಧ ಮುಂದಿನ ತಿಂಗಳಿಂದ ಎರಡು ವರ್ಷಗಳ ಕಾಲ ಬೀದಿಗಳಿದು ರಾಜ್ಯದಾದ್ಯಂತ ಹೋರಾಟ ರೂಪಿಸಲಾಗುವುದು’ ಎಂದರು.

‘ಮಾಜಿ ‍ಪ್ರಧಾನಿ ದೇವೇಗೌಡರು ಹಲವು ದಶಕಗಳಿಂದ ನನೆಗುದಿಗೆ ಬಿದ್ದಿದ್ದ ಆಲಮಟ್ಟಿ ಆಣೆಕಟ್ಟೆಗೆ ಮರು ಜೀವ ಕೊಟ್ಟು, ಈ ಭಾಗದಲ್ಲಿ ಹಸಿರು ಕ್ರಾಂತಿಗೆ ಕಾರಣವಾಗಿದ್ದಾರೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.