ಪಂಢರಪುರ(ಮಹಾರಾಷ್ಟ್ರ): ಆಷಾಢ ಏಕಾದಶಿ ಪ್ರಯುಕ್ತ ವಿಠಲನ ದರ್ಶನಕ್ಕೆ ಭಾನುವಾರ ಭಕ್ತ ಸಾಗರವೇ ಹರಿದು ಬಂತು. ಭೀಮೆಯ ತಟದಲ್ಲಿರುವ ಪಂಢರಪುರದ ಎಲ್ಲೆಡೆ ವಿಠಲನ ಸಂಕೀರ್ತನೆ, ಭಜನೆ ಅನುರಣಿಸಿತು.
ಕರ್ನಾಟಕ, ಮಹಾರಾಷ್ಟ್ರ, ಆಂಧ್ರಪ್ರದೇಶ, ಗೋವಾ, ತೆಲಂಗಾಣ ಸೇರಿ ದೇಶದ ಮೂಲೆಮೂಲೆಯಿಂದ ಲಕ್ಷಾಂತರ ಭಕ್ತರು ಪಾದಯಾತ್ರೆ ಮೂಲಕ ಬಂದರು. ವಿಠಲ, ರುಕ್ಮಿಣಿಯರ ದರ್ಶನ ಪಡೆದು ಪುನೀತರಾದರು.
ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ದಂಪತಿ ಬೆಳಿಗ್ಗೆಯೇ ಆಷಾಢ ಏಕಾದಶಿಯ ಸರ್ಕಾರಿ ಮಹಾಪೂಜೆ ಮತ್ತು ಕಾಕಡಾರತಿ ಸಲ್ಲಿಸಿದರು.
‘ಅನ್ನದಾತನಿಗೆ ಸುಖಃ, ಸಮೃದ್ಧಿ ನೀಡು, ರಾಜ್ಯದ ಸಂಕಟವನ್ನು ದೂರ ಮಾಡು ಸರ್ವರನ್ನು ಸನ್ಮಾರ್ಗದ ದಾರಿಯಲ್ಲಿ ಸಾಗುವಂತೆ ಸದ್ಬುದ್ಧಿ ನೀಡು’ ಎಂದು ಮುಖ್ಯಮಂತ್ರಿ ಫಡಣವೀಸ್ ಪ್ರಾರ್ಥಿಸಿದರು.
ಭಾನುವಾರ ನಸುಕಿನಿಂದಲೇ ವಿಠಲ, ರುಕ್ಮಿಣಿ ದೇವಾಲಯದ ಮುಂಭಾಗದಲ್ಲಿ ಹರಿಯುವ ಚಂದ್ರಭಾಗ(ಭೀಮಾ) ನದಿಯಲ್ಲಿ ಭಕ್ತರು ಪುಣ್ಯ ಸ್ನಾನ ಮಾಡಿದರು. ನದಿಗೆ ವಿಶೇಷ ಪೂಜೆ ಸಲ್ಲಿಸಿ, ಆರತಿ ತೇಲಿ ಬಿಟ್ಟರು.
ಸಂತ ಜ್ಞಾನೇಶ್ವರ, ಏಕನಾಥ, ತುಕಾರಾಮ, ಪುಂಡಲೀಕ, ನಾಮದೇವ, ದಾಮಾಜಿ, ಮೀರಾಬಾಯಿ, ಮುಕ್ತಾಬಾಯಿ, ಕಬೀರದಾಸ, ರಾಮದಾಸ, ತುಳಸಿದಾಸ, ಸೂರದಾಸರ ಅಭಂಗಗಳನ್ನು ವಾರಕರಿ ರಾಗದಿಂದ ಹಾಡುತ್ತಾ ಕುಣಿಯುತ್ತ, ವಿಠಲ... ವಿಠಲ..ವಿಠಲ.. ಎಂದು ಭಜನೆ, ನಾಮ ಸಂಕೀರ್ತನೆ ನಡೆದವು.
ದಿಂಡಿಯಾತ್ರೆಯಲ್ಲಿ (ಪಾದಯಾತ್ರೆ) ಬಂದ ವಾರಕಾರಿಗಳು ವಿಠಲನ ನಾಮಸ್ಮರಣೆಯಲ್ಲಿ ಹೆಜ್ಜೆ ಹಾಕಿದರು. ಪಾದಯಾತ್ರಿ ವಾರಕಾರಿಗಳಿಗೆ ಪಂಢರಪುರದ ನಾಲ್ಕೂ ದಿಕ್ಕಿನಲ್ಲಿ ಊಟೋಪಹಾರದ ವ್ಯವಸ್ಥೆ ಇತ್ತು. ಪಂಢರಪುರ ದೇವಾಲಯವೂ ಸೇರಿ ಪ್ರಮುಖ ಬೀದಿಗಳನ್ನು ವಿಶೇಷವಾಗಿ ಅಲಂಕರಿಸಲಾಗಿತ್ತು. ಬಿಗಿ ಭದ್ರತೆ ಕೈಗೊಳ್ಳಲಾಗಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.