ತಿಕೋಟಾ: ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿರುವ ಪಟ್ಟಣ, ಹೆಚ್ಚುತ್ತಿರುವ ಜನಸಂಖ್ಯೆ, ಹೆಚ್ಚುತ್ತಿರುವ ವಾಹನಗಳ ಓಡಾಟದಿಂದ ಪಟ್ಟಣದಲ್ಲಿ ಬೈಕು, ಕಾರು ಹಾಗೂ ಇತರೆ ವಾಹನಗಳಿಗೆ ನಿಲ್ಲಿಸಲು ಸೂಕ್ತ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ತೀವ್ರ ಅಡಚಣೆಯಾಗುತ್ತಿದೆ.
ಪಟ್ಟಣದ ನಡುವೆ ಹಾದು ಹೋಗಿರುವ ವಿಜಯಪುರ–ಬೆಳಗಾವಿ ರಾಷ್ಟ್ರೀಯ ಹೆದ್ದಾರಿ, ವಿಜಯಪುರ–ಜತ್ ರಾಷ್ಟ್ರೀಯ ಹೆದ್ದಾರಿ, ಕೊಟ್ಯಾಳ ಮಾರ್ಗದ ಎರಡೂ ಬದಿಯಲ್ಲಿ ಹಾಗೂ ಮೇನ್ ಬಜಾರ್ ರಸ್ತೆ, ಅಂಗಡಿ ಮುಂಗಟ್ಟು ಹೋಟೆಲ್, ಆಸ್ಪತ್ರೆಗಳ ಮುಂದೆ ಎಲ್ಲೆಂದರಲ್ಲಿ ಅಡ್ಡಾದಿಡ್ಡಿಯಾಗಿ ಬೈಕ್ ಹಾಗೂ ಕಾರು ವಾಹನಗಳು ನಿಲ್ಲಿಸುವುದರಿಂದ ಸಾರ್ವಜನಿಕರ ಸಂಚಾರಕ್ಕೆ ಬಹಳ ತೊಂದರೆಯಾಗುತ್ತಿದೆ.
ಪಟ್ಟಣಕ್ಕೆ ಅಗತ್ಯ ವಸ್ತು ಖರೀದಿಸಲು ಬರುವವರಿಗೆ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದರಿಂದ ವಾಹನ ನಿಲ್ಲಿಸಲು ಹರಸಾಹಸ ಪಡಬೇಕಾಗಿದೆ. ಅದರಲ್ಲೂ ಗುರುವಾರ ಸಂತೆ ದಿನ ಸೇರಿದಂತೆ ಕೆಲವು ದಿನ ಟ್ರಾಫಿಕ್ ಸಮಸ್ಯೆ ಉಂಟಾಗಿ ಸಂಚಾರಕ್ಕೆ ತೊಂದರೆಯಾಗುತ್ತದೆ.
ತಾಲ್ಲೂಕು ಕೇಂದ್ರವಾದ ತಿಕೋಟಾ ಪಟ್ಟಣದ ನಡುವೆ ರಾಷ್ಟ್ರೀಯ ಹೆದ್ದಾರಿಗಳು ನಿರ್ಮಾಣ ಆಗಿದ್ದರೂ ಪಟ್ಟಣದ ಹಳೆ ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತ ಹಾಗೂ ಹೊಸ ಬಸ್ ನಿಲ್ದಾಣದವರೆಗಿನ ಎರಡೂ ರಸ್ತೆ ಬದಿಯಲ್ಲಿ ಪಾದಚಾರಿಗಳ ಸಂಚಾರಕ್ಕೆ ಫುಟ್‌ಪಾತ್ ನಿರ್ಮಾಣ ಮಾಡಲಾಗಿದೆ. ಆದರೆ, ಸರ್ವಿಸ್ ರಸ್ತೆ ಮಾಡದೇ ಇರುವುದರಿಂದ ವಾಹನ ನಿಲುಗಡೆಗೆ ತೊಂದರೆಯಾಗಿದೆ. ರಸ್ತೆ ವಿಸ್ತರಣೆ ಮಾಡುವಾಗಲೇ ವಾಹನಗಳ ಪಾರ್ಕಿಂಗ್ ವ್ಯವಸ್ಥೆಗೂ ಆದ್ಯತೆ ನೀಡಿ ಸೂಕ್ತ ಸ್ಥಳ ನಿಗದಿಪಡಿಸಬೇಕಿತ್ತು ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಿರಿದಾದ ಹೆದ್ದಾರಿ:
ಮಹಾರಾಷ್ಟ್ರಕ್ಕೆ ಸಂಪರ್ಕಿಸುವ ಹೆದ್ದಾರಿಯಲ್ಲಿ ದಿನಾಲು ಬೃಹತ್ ಗಾತ್ರದ ವಾಹನಗಳು ಸಂಚರಿಸುತ್ತವೆ. ದ್ವಿಪಥ ಹೊಂದಿದ ಈ ಹೆದ್ದಾರಿ ತಿಕೋಟಾ ಪಟ್ಟಣ ಸಮೀಪಿಸುತ್ತಿದ್ದಂತೆ ರಸ್ತೆ ಕಿರಿದಾಗಿದೆ.
ಬಸ್ ನಿಲ್ದಾಣದಿಂದ ಬಸವೇಶ್ವರ ವೃತ್ತ ಮೂಲಕ ಹಳೆ ಬಸ್ ನಿಲ್ದಾಣದವರೆಗಿನ ಇಕ್ಕಟ್ಟಾದ ರಸ್ತೆಯಲ್ಲಿ ವಾಹನಗಳ ಸಂಚಾರ ವೇಳೆ ಡಿಕ್ಕಿ ಹೊಡೆದು ಸವಾರರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಸಾವು ಕೂಡ ಸಂಭವಿಸಿವೆ.
ರಸ್ತೆಯ ಬದಿಯಲ್ಲಿರುವ ವ್ಯಾಪಾರಸ್ಥರಿಗೂ ಈ ವಾಹನಗಳ ನಿಲುಗಡೆಯಿಂದ ತೊಂದರೆಯಾಗುತ್ತಿದ್ದು, ವಾಹನ ಸವಾರರು ತಾವು ವ್ಯಾಪಾರ ಮಾಡುವ ಅಂಗಡಿಯೇ ಬೇರೆ, ತಾವು ವಾಹನ ನಿಲ್ಲಿಸಿದ ಅಂಗಡಿಯೇ ಬೇರೆಯಾಗಿರುವುದರಿಂದ ಅಲ್ಲಿಯವರೆಗೆ ವಾಹನ ರಸ್ತೆ ಮೇಲೆ ಇರುವುದರಿಂದ ಸಾರ್ವಜನಿಕರಿಗೆ ತೀರಾ ತೊಂದರೆಯಾಗುತ್ತದೆ.
ಕೆಲವು ಕಡೆ ರಸ್ತೆ ಪಕ್ಕ ನಿರ್ಮಿಸಿದ ಪಾದಚಾರಿ ಮಾರ್ಗದ ಮೇಲೆ ಅಂಗಡಿಕಾರರು ಸಹ ಹಲವು ಸಾಮಾನುಗಳು ಇಟ್ಟಿದ್ದರಿಂದ ಪಾದಚಾರಿ ಮಾರ್ಗ ಸಹ ಓಡಾಟಕ್ಕೆ ತೊಂದರೆಯಾಗಿದೆ. ಅಧಿಕಾರಿಗಳು ಇಂತಹ ವ್ಯಾಪಾರಸ್ಥರ ಸೂಚನೆ ನೀಡಿ ಪಾದಚಾರಿ ಮಾರ್ಗ ಸುಗಮ ಮಾಡಬೇಕು. ವಾಹನಗಳ ನಿಲುಗಡೆಗೆ ಸೂಕ್ತ ಪಾರ್ಕಿಂಗ್ ವ್ಯವಸ್ಥೆಯನ್ನು ಮಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಪಾರ್ಕಿಂಗ್ ವ್ಯವಸ್ಥೆ ಇಲ್ಲದೇ ಇರುವುದರಿಂದ ಮನ ಬಂದಂತೆ ಎಲ್ಲೆಂದರಲ್ಲಿ ವಾಹನ ಪಾರ್ಕ್ ಮಾಡುವುದರಿಂದ ಸಂಚಾರ ತೊಂದರೆಯಾಗುತ್ತಿದ್ದು, ವಾಹನ ಸವಾರರು ಬಸ್ ನಿಲ್ದಾಣ, ಪೆಟ್ರೋಲ್ ಪಂಪ್ ಗಳಲ್ಲಿ ಬೈಕ್ ನಿಲ್ಲಿಸುತ್ತಿದ್ದಾರೆ.
ತಿಕೋಟಾ ಪಟ್ಟಣದಲ್ಲಿ ಸರ್ಕಾರಿ ಸ್ಥಳದ ಕೊರತೆ ಇದೆ. ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಸ್ಥಳ ನಿಗದಿಯಾದರೆ ಪಾರ್ಕಿಂಗ್ ವ್ಯವಸ್ಥೆ ಮಾಡುತ್ತೇವೆ.ರಘು ನಡುವಿನಮನಿ, ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ
ರಸ್ತೆ ವಿಸ್ತರಣೆ ಮಾಡುವಾಗಲೇ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕಿತ್ತು. ಫುಟ್‌ಪಾತ್ ಮೇಲೆ ಸಹ ಅಂಗಡಿಕಾರರು ಪತ್ರಾಸ್ ಆ್ಯಂಗಲ್ ಪೈಪ್ ಹಾಕಿದ್ದಾರೆ ಅವುಗಳನ್ನು ತೆಗೆಸಬೇಕುಸುರೇಶ ಕೋಣ್ಣೂರ, ನಿವಾಸಿ ತಿಕೋಟ
ರಸ್ತೆ ಮೇಲೆ ವಾಹನ ನಿಲುಗಡೆ ಸಂಪೂರ್ಣ ನಿಲ್ಲಬೇಕು. ಶುಲ್ಕ ನಿಗದಿ ಮಾಡಿದರು ಪರವಾಗಿಲ್ಲ ಸೂಕ್ತ ಸ್ಥಳದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಬೇಕು. ಸಂಚಾರಕ್ಕೆ ತೊಂದರೆಯಾಗದಂತೆ ವ್ಯವಸ್ಥೆ ಆಗಬೇಕು.ರಾಜೇಂದ್ರ ಕುಲಕರ್ಣಿ, ಸಾಮಾಜಿಕ ಕಾರ್ಯಕರ್ತ
ಪಾರ್ಕಿಂಗ್ ಸ್ಥಳ ನಿಗದಿಯಾಗುವವರೆಗೂ ಪಟ್ಟಣದಲ್ಲಿ ಪೊಲೀಸ್ ಸಿಬ್ಬಂದಿ ಯಾವುದೇ ತೊಂದರೆಯಾಗದಂತೆ ಟ್ರಾಫಿಕ್ ನಿಭಾಯಿಸುತ್ತೇವೆ. ಸಾರ್ವಜನಿಕರು ಕೂಡ ಸಹಕರಿಸಬೇಕು-ದೇವರಾಜ ಉಳ್ಳಾಗಡ್ಡಿ, ಪಿಎಸ್ಐ ತಿಕೋಟಾ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.