ADVERTISEMENT

ಆಕ್ಸಿಜನ್‌, ಲಸಿಕೆ ಸಿಗದೇ ಜನ ಸಾಯುತ್ತಿದ್ದಾರೆ; ಕೋವಿಡ್‌ನಿಂದಲ್ಲ: ಎಂ.ಬಿ.ಪಾಟೀಲ

ʼಕೊರೊನಾ ನಿಭಾಯಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣ ವಿಫಲʼ

​ಪ್ರಜಾವಾಣಿ ವಾರ್ತೆ
Published 2 ಮೇ 2021, 13:51 IST
Last Updated 2 ಮೇ 2021, 13:51 IST
ಎಂ.ಬಿ.ಪಾಟೀಲ
ಎಂ.ಬಿ.ಪಾಟೀಲ   

ವಿಜಯಪುರ: ಜನರು ಕೊರೊನಾದಿಂದ ಸಾಯುತ್ತಿಲ್ಲ. ಬದಲಿಗೆ ಆಕ್ಸಿಜನ್ ಕೊರತೆ, ರೆಮ್‌ಡಿಸಿವಿರ್ ಸಿಗದೇ ಸಾವನ್ನಪ್ಪುತ್ತಿದ್ದಾರೆ. ಇದು ತೀರಾ ನೋವಿನ ಸಂಗತಿ ಎಂದು ಶಾಸಕ ಎಂ.ಬಿ.ಪಾಟೀಲ ಆರೋಪಿಸಿದರು.

ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೊರೊನಾ ಪರಿಸ್ಥಿತಿಯನ್ನು ನಿಭಾಯಿಸುವಲ್ಲಿ ಕೇಂದ್ರ, ರಾಜ್ಯ ಸರ್ಕಾರಗಳು ಸಂಪೂರ್ಣವಾಗಿ ವಿಫಲವಾಗಿವೆ ಎಂದು ಆರೋಪಿಸಿದರು.

‘ಈ ಸಮಯದಲ್ಲಿ ನಾನು ರಾಜಕಾರಣ ಮಾಡಲು ಹೋಗುವುದಿಲ್ಲ. ಆದರೆ, ಸರ್ಕಾರ ತನ್ನ ಜವಾಬ್ದಾರಿ ಅರಿತುಕೊಳ್ಳಬೇಕಿದೆ, ಯುದ್ಧೋಪಾದಿಯಲ್ಲಿ ಕೊರೊನಾ ನಿಯಂತ್ರಣ ಕಾರ್ಯ ಮಾಡಬೇಕಿದೆ. ಆಗ ಮಾತ್ರ ಜೀವ ಉಳಿಸಲು ಸಾಧ್ಯವಾಗಲಿದೆ. ಜಾತಿ, ಧರ್ಮ, ಪಂಥ, ಪಕ್ಷ ಎಲ್ಲವನ್ನೂ ಬದಿಗಿಟ್ಟು ಸರ್ಕಾರಗಳು ಶ್ರಮಿಸಬೇಕಿದೆ’ ಎಂದು ಹೇಳಿದರು.

ADVERTISEMENT

ರೆಮ್ ಡಿಸಿವಿರ್ ಔಷಧಿಯನ್ನು ಸರ್ಕಾರ ವೈಜ್ಞಾನಿಕವಾಗಿ ಹಂಚಿಕೆ ಮಾಡಿ ಕೊರತೆ ನೀಗಿಸಬೇಕು, ಈ ಪೂರೈಕೆ ಪ್ರಕ್ರಿಯೆಗೆ ವಿನಾಕಾರಣ ಕಠಿಣ ನಿರ್ಬಂಧ ಮಾಡಿರುವುದು ಸರಿಯಲ್ಲ, ಕೂಡಲೇ ಇದನ್ನು ಸರಳೀಕರಣಗೊಳಿಸಬೇಕು ಎಂದರು.

‘ಆಕ್ಸಿಜನ್ ಘಟಕಗಳನ್ನು ತೆರೆಯಲಾಗುವುದು, ರೆಮ್‌ಡಿಸಿವಿರ್ ಪೂರೈಸಲಾಗುವುದು ಎಂದು ಸಚಿವರು ಕೇವಲ ಭವಿಷ್ಯತ್ ಕಾಲದಲ್ಲಿಯೇ ಮಾತನಾಡುತ್ತಿದ್ದಾರೆ. ಈ ರೀತಿ ಹೇಳಿಕೆ ನೀಡಿ ಪ್ರಚಾರ ಗಿಟ್ಟಿಸಿಕೊಳ್ಳುವುದು ಅವರ ಕೆಲಸವಲ್ಲ. ಈಗೇನು ಮಾಡುತ್ತಿದ್ದಾರೆ ಎಂಬುದನ್ನು ಹೇಳಲಿ’ ಎಂದರು.

ಕೊರೊನಾ ಲಸಿಕೆ ವಿಷಯದಲ್ಲಿ ಮುಖ್ಯಮಂತ್ರಿ ಹಾಗೂ ಆರೋಗ್ಯ ಸಚಿವರು ದ್ವಂದ್ವ ಹೇಳಿಕೆ ನೀಡುತ್ತಿದ್ದಾರೆ. ಇವರಲ್ಲಿ ಸಮನ್ವಯತೆ ಇಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.