
ಯಲಗೂರ(ಆಲಮಟ್ಟಿ): ಕೊಳಲು ವಾದಕ ಪ್ರವೀಣ ಗೋಡ್ಖಿಂಡಿ ಮತ್ತು ಅವರ ಪುತ್ರ ಷಡ್ಜ್ ಗೋಡ್ಖಿಂಡಿ ಅವರ ಕೊಳಲು ನಾದ, ಕೊಳಲಿಗೆ ತಕ್ಕಂತೆ ತಬಲಾ ತಾಳ ನೀಡುತ್ತಿದ್ದ ತಂದೆ ರವೀಂದ್ರ ಯಾವಗಲ್, ಪುತ್ರ ಕಿರಣ ಯಾವಗಲ್... ಈ ತಂದೆ, ಮಕ್ಕಳ ಜುಗಲ್ ಬಂದಿಗೆ ಷಸಹಸ್ರಾರು ಶೋತೃಗಳನ್ನು ಭಾವಪರವಶಗೊಳಿಸಿತು.
ಯಲಗೂರೇಶನ ಕಾರ್ತಿಕೋತ್ಸವದ 2ನೇ ದಿನ ಇಲ್ಲಿನ ತೆಂಗಿನ ತೋಟದಲ್ಲಿ ಭಾನುವಾರ ಜರುಗಿದ ತಂದೆ ಮಕ್ಕಳ ನಾದಸ್ವರಕ್ಕೆ ಪ್ರೇಕ್ಷಕರು ಮೂಕವಿಸ್ಮಿತರಾದರು.
ಬಿದಿರಿನ ರಂಧ್ರದೊಳಗಿಂದ ತೂರಿ ಬರುವ ಗೋಡ್ಖಿಂಡಿ ಉಸಿರು ಕೇಳುಗರ ಎದೆಯೊಳಗೆ ಆನಂದ ಸೃಷ್ಟಿಸಿತು. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಪಡಿಮೂಡಿದ ಸ್ವರಗಳ ಮಾಧುರ್ಯಕ್ಕೆ, ಇಬ್ಬರು ಶ್ರೇಷ್ಠ ಕಲಾವಿದರ ಬೆರಳುಗಳ ಚಮತ್ಕಾರಕ್ಕೆ ಜನ ಬೆರಗಾದರು. ಸಂಗೀತ ಕಛೇರಿ ಮುಗಿದ ಮೇಲೆಯೂ ಕೊಳಲಿನ ನಾದಸ್ವರ ಶೋತೃಗಳ ಕಿವಿಯಲ್ಲಿ ರಿಂಗಣಿಸುತ್ತಲೇ ಇತ್ತು.
ಜಯತೀರ್ಥ ಮೇವುಂಡಿ, ಪಂ.ಕೆ. ಆನಂದಕುಮಾರ, ವಸುಧೇಂದ್ರ ವೈದ್ಯ, ವಿಜಯಕುಮಾರ ಪಾಟೀಲ ಮತ್ತಿತರರ ದಾಸವಾಣಿ, ಪ್ರವೀಣ ಹೂಗಾರ ಅವರ ಸಿತಾರ್ ವಾದನ ಗಮನಸೆಳೆಯಿತು.
ಹರಿಶಾವಿಗೆ: ಕಾರ್ತಿಕೋತ್ಸವದ ಇನ್ನೊಂದು ಪ್ರಮುಖ ಘಟ್ಟ ಹರಿಶಾವಿಗೆ. ದೇವಸ್ಥಾನದ ಪಕ್ಕದಲ್ಲಿ ಪ್ರಸಾದಕ್ಕಾಗಿ ಗೋಪಾಳ ಹಾಗೂ ಪತ್ರೋಳಿ ಹಿಡಿದುಕೊಂಡು ಸಾಲಾಗಿ ಕುಳಿತ ನೂರಾರು ಜನರು ಇದ್ದರು.
ಸರ್ವಧರ್ಮದ ನೈವೇದ್ಯೆ ಯಲಗೂರೇಶನಿಗೆ ಅರ್ಪಿಸಿದ ನಂತರ, ಯಲಗೂರೇಶನ ಸೇವಾಕರ್ತರು, ಏಳೂರಿನ ಒಡೆಯನಾದ ಯಲಗೂರೇಶನಿಗೆ ಸಂಬಂಧಿಸಿದ ಏಳು ಗ್ರಾಮಗಳ ಬಾಬು ಹೊಂದಿರುವ, (ಗೋಪಾಳ ಹೊಂದಿರುವ) ಮನೆತನದವರು ಮಾತ್ರ ಇಲ್ಲಿ ಬಂದು ಪ್ರಸಾದ ಸ್ವೀಕರಿಸಬೇಕು.
‘ಯಲಗೂರೇಶನ ಭಕ್ತರು ಕಡಬು, ಹೋಳಿಗೆ, ಮಣ್ಣಿನ ಹೊಸ ಗಡಿಗೆಯಲ್ಲಿ ತಯಾರಿಸಿದ ಅನ್ನ ಮಾಡಿಕೊಂಡು ಬಂದು ಇಲ್ಲಿ ದೈವದವರು ತಯಾರಿಸಿದ ಪ್ರಸಾದದಲ್ಲಿ ಸೇರಿಸುತ್ತಾರೆ. ನಂತರ ಅದನ್ನೇ ಯಲಗೂರೇಶನಿಗೆ ನೈವೇದ್ಯ ಅರ್ಪಿಸುತ್ತಾರೆ. ಇದಕ್ಕೆ ಹರಿಶಾವಿಗೆ ಎಂದು ಕರೆಯಲಾಗುತ್ತದೆ’ ಎಂದು ಗ್ರಾಮದ ಡಾ ಮಹಾದೇವ ಹೂಗಾರ ಹೇಳಿದರು.
ಕೀಲುಗೊಂಬೆಯಾಟ ಪ್ರದರ್ಶನಕ್ಕೆ ಅನ್ನದಾಸೋಹ ಸಮಿತಿ ಅಧ್ಯಕ್ಷ ಶ್ಯಾಮ ಪಾತ್ರದ ರಿಬ್ಬನ್ ಕತ್ತರಿಸಿ ಚಾಲನೆ ನೀಡಿದರು.
ಅಹೋರಾತ್ರಿ ಸಂಗೀತಕ್ಕೆ ತೆರೆ: ಶನಿವಾರ ಬೆಳಿಗ್ಗೆಯಿಂದ ಆರಂಭಗೊಂಡಿದ್ದ ಅಹೋರಾತ್ರಿ ಸಂಗೀತ ಕಾರ್ಯಕ್ರಮ ಭಾನುವಾರ ಸಂಜೆ 6 ಗಂಟೆಯವರೆಗೂ ನಿರಂತರವಾಗಿ ನಡೆಯಿತು. ರಾಜ್ಯದ ನಾನಾ ಕಡೆಯಿಂದ ಆಗಮಿಸಿದ್ದ ನೂರಾರು ಸಂಗೀತ ಕಲಾವಿದರು, ತಬಲಾ ವಾದಕರು, ವೀಣಾ ವಾದಕರು, ಶಹನಾಯಿ ವಾದನ ಸೇರಿ ನಾನಾ ಕಲೆಗಳನ್ನು ಪ್ರದರ್ಶಿಸಿದರು.
ಯಲಗೂರೇಶ ಅನುಗ್ರಹ ಪ್ರಶಸ್ತಿ: ಸಂಗೀತ, ದಾಸಸಾಹಿತ್ಯ ಕ್ಷೇತ್ರದಲ್ಲಿ ಅನುಪಮ ಸೇವೆ ಸಲ್ಲಿಸದವರಿಗೆ ಹರಿದಾಸ ಸಾಹಿತ್ಯ ಸಂಗೀತ ವೇದಿಕೆಯಿಂದ ನೀಡುವ ಯಲಗೂರೇಶ ಅನುಗ್ರಹ ಪ್ರಶಸ್ತಿಯನ್ನು ಖ್ಯಾತ ಕಲಾವಿದರಾದ ರೇಣುಕಾ ನಾಕೋಡ, ಪ್ರವೀಣ ಗೋಡಖಿಂಡಿ, ಜಯತೀರ್ಥ ಮೇವುಂಡಿ, ಎಸ್.ಎಲ್.ಎನ್. ಸ್ವಾಮಿ, ಪದ್ಮಶ್ರೀ ವೆಂಕಪ್ಪ ಸುತೇಗಾರ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಸಹಸ್ರಾರು ಭಕ್ತರ ಮಧ್ಯೆ ಸಂಜೆ ರಥೋತ್ಸವ ಜರುಗಿತು. ರಾತ್ರಿ ಹೊಂಡ ಪೂಜೆ ಜರುಗಿತು.
ಯಲಗೂರೇಶನ ಕಾರ್ತಿಕೋತ್ಸವದಲ್ಲಿ ಕೀಲುಗೊಂಬೆಯಾಟ ಪ್ರದರ್ಶನಕ್ಕೆ ಅನ್ನದಾಸೋಹ ಸಮಿತಿ ಅಧ್ಯಕ್ಷ ಶ್ಯಾಮ ಪಾತ್ರದ ಚಾಲನೆ ನೀಡಿದರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.