ತಿಕೋಟಾ: ಬಿರುಗಾಳಿ ಸಹಿತ ಮಳೆ ಸುರಿದಿರುವ ತಾಲ್ಲೂಕಿನೆಲ್ಲೆಡೆ ದ್ರಾಕ್ಷಿ ಬೆಳೆಗಾರರು ಆತಂಕಕ್ಕಿಡಾಗಿದ್ದು, ರ‍್ಯಾಕ್‌ನಲ್ಲಿ ಹಾಕಿದ ಹಸಿ ದ್ರಾಕ್ಷಿ ಒಣಗಾಗುವ ಮುನ್ನವೇ ತೊಯ್ದು ಆತಂಕ ಉಂಟು ಮಾಡಿದೆ.
ತಾಲ್ಲೂಕಿನ ಲೋಹಗಾಂವ, ದನ್ನರ್ಗಿ, ಟಕ್ಕಳಕಿ, ಕಳ್ಳಕವಟಗಿ, ಘೋಣಸಗಿ, ಹುಬನೂರ, ಸೋಮದೇವರಹಟ್ಟಿ ಸೇರಿದಂತೆ ಹಲವು ಗ್ರಾಮಗಳಲ್ಲಿ ಸೋಮವಾರ ಸಂಜೆ ಸುರಿದ ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಗಾರ ನಲುಗಿ ಹೋಗಿದ್ದಾನೆ.
ಲೋಹಗಾಂವ ತಾಂಡಾ ದ್ರಾಕ್ಷಿ ಬೆಳೆಗಾರ ಲಾಲಸಿಂಗ್ ಹೀರು ರಾಠೋಡ ತಾವು ಬೆಳೆದ ಹಸಿ ದ್ರಾಕ್ಷಿ ರ‍್ಯಾಕ್‌ನಲ್ಲಿ ಹಾಕಲಾಗಿತ್ತು. 10 ಟನ್ ಒಣದ್ರಾಕ್ಷಿಯಾಗಿತ್ತು. ಎರಡ್ಮೂರು ದಿನಗಳಲ್ಲಿ ಮಾರುಕಟ್ಟೆಗೆ ಸಾಗಿಸಬೇಕೆನ್ನುವಷ್ಟರಲ್ಲಿ ಅಕಾಲಿಕ ಮಳೆಗೆ ತೊಯ್ದಿದೆ. ಮಳೆಗೆ ಒಣದ್ರಾಕ್ಷಿ ತೊಯ್ದದ್ದರಿಂದ ಕಪ್ಪು ಬಣ್ಣಕ್ಕೆ ತಿರುಗುವ ಆತಂಕ ಎದುರಾಗಿದೆ.
ದರ ಕುಸಿತದ ಆತಂಕ: ಮಳೆಗೆ ತೊಯ್ದರೆ ಕಪ್ಪು ಬಣ್ಣಕ್ಕೆ ತಿರುಗಿ ದರ ಕುಸಿಯುತ್ತದೆ ಎಂಬ ಆತಂಕದಲ್ಲಿರುವ ರೈತರು ತೊಯ್ದ ಒಣದ್ರಾಕ್ಷಿಯನ್ನು ಗಂಧಕದ ಹೋಗೆ ನೀಡುತ್ತಿದ್ದಾರೆ. ಇದರಿಂದ ಕಪ್ಪು ಬಣ್ಣಕ್ಕೆ ತಿರುಗುವುದಿಲ್ಲ ಹಾಗೂ ನೀರು ಹಿಡಿಯುವುದಿಲ್ಲ . ಸದ್ಯ ಒಳ್ಳೆಯ ಒಣದ್ರಾಕ್ಷಿ ₹250 ರಿಂದ ₹ 300 ಇದೆ. ಉತ್ತಮ ದರ ಇರುವುದರಿಂದ ರೈತ ಖುಷಿಯಲ್ಲಿದ್ದ. ಅಕಾಲಿಕ ಮಳೆಯಿಂದ ಕಂಗಾಲಾಗಿ ದರ ಕುಸಿತದ ಆತಂಕ ಎದುರಿಸುತ್ತಿದ್ದಾನೆ.
ಹಸಿ ದ್ರಾಕ್ಷಿಯವರಿಗೂ ಆತಂಕ: ಇನ್ನೂ ಕಟಾವು ಮಾಡದೇ ಪಡದಲ್ಲಿರುವ ದ್ರಾಕ್ಷಿ ಬೆಳೆದ ರೈತರು ಕೂಡಾ ಆತಂಕಕ್ಕೆ ಒಳಗಾಗಿದ್ದು, ಅಕಾಲಿಕ ಮಳೆಗೆ ಹೆದರಿ ಮತ್ತೆ ಆಲಿಕಲ್ಲು ಸಹಿತ ಮಳೆಯಾಗಬಹುದೇನೋ ಎಂಬ ಆತಂಕದಿಂದ ಕಟಾವು ಮಾಡಿ ರ‍್ಯಾಕ್‌ನಲ್ಲಿ ಒಣದ್ರಾಕ್ಷಿ ತಯಾರಿಸಲು ಕಟಾವು ಮಾಡುತ್ತಿದ್ದಾರೆ.
‘ಒಂದು ವೇಳೆ ಆಲಿಕಲ್ಲು ಸಹಿತ ಅಕಾಲಿಕ ಮಳೆ ಬಂದರೆ ಸಂಪೂರ್ಣ ಕಾಯಿ ಒಡೆದು ಹಾಳಾಗುತ್ತದೆ ಹಾಗೂ ಮಳೆಯಿಂದ ತೊಯ್ದ ನಂತರ ಸಕ್ಕರೆ ಪ್ರಮಾಣ ಕಡಿಮೆಯಾಗುತ್ತದೆ ಎಂಬ ಆತಂಕದಿಂದ ಕಟಾವು ಮಾಡುತ್ತಿದ್ದೇವೆ’ ಎಂದು ರೈತ ಸಚಿನ ಗದ್ಯಾಳ ಹಾಗೂ ದಿಲೀಪ ಗಿಡ್ನವರ ‘ಪ್ರಜಾವಾಣಿ’ಗೆ ತಿಳಿಸಿದರು.
ದ್ರಾಕ್ಷಿ ಬೆಳೆಗಾರ ಒಂದಲ್ಲ ಒಂದು ಕಷ್ಟ ಎದುರಿಸುತ್ತಲೇ ಇದ್ದಾನೆ. ಸದ್ಯ ಉತ್ತಮ ದರ ಇದೆ ಆದರೆ ಅಕಾಲಿಕ ಮಳೆಗೆ ಒಣದ್ರಾಕ್ಷಿ ತೊಯ್ದು ದರ ಕುಸಿಯುವ ಆತಂಕ ಇದೆರವಿ ನಿಂಗಪ್ಪ ಬಾಗಲಕೋಟ ರೈತ
‘ದ್ರಾಕ್ಷಿಗೂ ವಿಮೆ ಅನ್ವಯವಾಗಲಿ’ ‘ಅಕಾಲಿಕವಾಗಿ ಸುರಿದ ಬಿರುಗಾಳಿ ಸಹಿತ ಮಳೆಗೆ ಒಣದ್ರಾಕ್ಷಿ ಘಟಕದ ಮೇಲೆ ಹಾಕಿದ್ದ ಆಸರೆಯ ತಾಡಪತ್ರಿ ಬಿರುಗಾಳಿಗೆ ಹರಿದು ಹಾರಿ ಹೋಗಿವೆ. ಇದರಿಂದ ಹಲವು ರೈತರ ಒಣದ್ರಾಕ್ಷಿ ತೊಯ್ದಿವೆ. ಇನ್ನು ರೈತರು ತುಂಬಿದ ವಿಮೆಯೂ ಏಪ್ರಿಲ್‌ನಿಂದ ಏಪ್ರೀಲ್ ವರೆಗೆ ಅನ್ವಯವಾಗಬೇಕು. ಅಂದರೆ ರೈತನ ದ್ರಾಕ್ಷಿ ವಿಮೆಯೂ ದ್ರಾಕ್ಷಿ ಪಡದಲ್ಲಿದ್ದರೂ ಅನ್ವಯವಾಗಬೇಕು ಹಾಗೂ ರ‍್ಯಾಕ್‌ನಲ್ಲಿ ಒಣಹಾಕಿದ್ದರೂ ಅನ್ವಯವಾಗಬೇಕು. ಅಂದಾಗ ರೈತನ ಬೆಳೆ ಹಾನಿಯಾದಾಗ ವಿಮೆಯ ಲಾಭವಾಗುತ್ತದೆ. ರೈತರು ಕೂಡಾ ಅಕಾಲಿಕ ಮಳೆಗೆ ಹಾನಿಯಾದಾಗ ಕೂಡಲೇ ಕಂದಾಯ ಹಾಗೂ ವಿಮಾ ಕಂಪನಿಯವರಿಗೆ ಮಾಹಿತಿ ನೀಡಬೇಕು’ ಎಂದು ಕರ್ನಾಟಕ ರಾಜ್ಯ ದ್ರಾಕ್ಷಿ ಬೆಳೆಗಾರರ ಸಂಘದ ರಾಜ್ಯ ಘಟಲಕದ ಅಧ್ಯಕ್ಷ ಅಭಯಕುಮಾರ ನಾಂದ್ರೇಕರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.