
ವಿಜಯಪುರ: ‘ಇಸ್ಲಾಂ, ಕ್ರೈಸ್ತ, ಹಿಂದೂ, ಬೌದ್ಧ, ಲಿಂಗಾಯತ, ವೀರಶೈವ ಇವೆಲ್ಲ ಧರ್ಮಗಳಲ್ಲ, ಮತಗಳು. ಇವುಗಳನ್ನು ಧರ್ಮ ಎಂದು ಹೇಳುತ್ತಿರುವುದಕ್ಕೆ ಸಮಸ್ಯೆಗಳು ಉದ್ಭವಿಸುತ್ತಿವೆ’ ಎಂದು ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸಂಸ್ಥಾನ ಮಠದ ಉತ್ತರಾಧಿಕಾರಿ ನಿಜಲಿಂಗ ಸ್ವಾಮೀಜಿ ಹೇಳಿದರು.
ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಸಿದ್ಧೇಶ್ವರ ಸ್ವಾಮೀಜಿಗಳ 3ನೇ ವರ್ಷದ ಗುರುನಮನ ಮಹೋತ್ಸವ ಕಾರ್ಯಕ್ರಮದಲ್ಲಿ ‘ದಯೆ ಮತ್ತು ಧರ್ಮ’ ಗೋಷ್ಠಿಯನ್ನುದ್ದೇಶಿಸಿ ಆಶೀರ್ವಚನ ನೀಡಿದರು.
‘ಧರ್ಮ ಎಂದರೆ ಧಾರಣೆ ಮಾಡುವುದು, ಧರ್ಮ ಎನ್ನುವುದು ಅತೀ ಸೂಕ್ಷ್ಮ ಪದ, ದೇಶದಲ್ಲಿ ಧರ್ಮದ ಬಗ್ಗೆ ಗೊಂದಲಗಳು ನಡೆಯುತ್ತಿರುವುದಕ್ಕೆ ಕಾರಣ ನಾವು ಧರ್ಮವನ್ನು ಸರಿಯಾಗಿ ಅರ್ಥ ಮಾಡಿಕೊಂಡಿಲ್ಲ. ನಾವು ನಮ್ಮ ಸ್ವಭಾವಕ್ಕೆ ತಕ್ಕಂತೆ ಜಾತಿ, ಮತಗಳನ್ನು ಮಾಡಿಕೊಂಡಿದ್ದೇವೆ. ಆದರೆ, ನಾವೆಲ್ಲರೂ ದಯೆ-ಧರ್ಮವನ್ನು ಪಾಲಿಸಬೇಕು’ ಎಂದರು.
‘ಭಾರತದ ಸಂಸ್ಕೃತಿಗೆ ಆಪತ್ತುಗಳು ಬಂದಾಗ ಅದನ್ನು ಕಾಪಾಡಿದವರು ಸನ್ಯಾಸಿಗಳು. ಸಿದ್ಧೇಶ್ವರ ಶ್ರೀಗಳು ಜ್ಞಾನವನ್ನೇ ಉಣಬಡಿಸಿದ್ದಾರೆ. ಸೃಷ್ಟಿಯ ಪ್ರತಿಯೊಂದು ವಸ್ತುವೂ ಪರಮಾತ್ಮನ ಸೃಷ್ಟಿ. ಎಲ್ಲ ಚರಾ-ಚರ ವಸ್ತುಗಳ ಮೇಲೆ, ಪ್ರಾಣಿ, ಪಕ್ಷಿಗಳ ಮೇಲೆ ನಾವು ದಯೆ ಕರುಣೆ ತೋರಿಸಬೇಕು. ಸದಾ ಅಪ್ಪಗಳು ಪ್ರೀತಿಸುತ್ತಿದ್ದ ಪರಿಸರ, ಪ್ರಕೃತಿಯನ್ನು ನಾವು ರಕ್ಷಣೆ ಮಾಡಬೇಕು’ ಎಂದು ಹೇಳಿದರು.
ಡಿವೈಎಸ್‌ಪಿ ಬಸವರಾಜ ಯಲಿಗಾರ ಮಾತನಾಡಿ, ‘ಸಿದ್ಧೇಶ್ವರ ಸ್ವಾಮೀಜಿಗಳ ಬಗ್ಗೆ ತಿಳಿಯದವರು ಯಾರು ಇಲ್ಲ, ಕೇಳದವರು ಯಾರು ಇಲ್ಲ. ಸಿದ್ಧೇಶ್ವರ ಅಪ್ಪಗಳನ್ನು ಪರಿಚಯಿಸುವುದು ಎಂದರೆ ಸೂರ್ಯನನ್ನು ಪರಿಚಯಿಸಿದಂತೆ. ಇದರ ಅರ್ಥ ಅವರನ್ನು ಜಗತ್ತಿಗೆ ಪರಿಚಯಿಸುವ ಅಗತ್ಯವೆ ಇಲ್ಲ’ ಎಂದರು.
‘ಸಿದ್ದೇಶ್ವರ ಶ್ರೀ ನಮ್ಮ ಪುಣ್ಯದಂತೆ ಬಂದರು, ಯಾವಾಗ ಭೂಮಿಯ ಮೇಲೆ ಧರ್ಮ ದಿಕ್ಕು ತಪ್ಪುತ್ತದೆ ಎಂದು ತಿಳಿಯುತ್ತದೆಯೋ ಆಗ ಆ ಭಗವಂತ ಮತ್ತೊಂದು ಅವತಾರದಲ್ಲಿ ಜನ್ಮ ನೀಡಬೇಕಾಗುತ್ತದೆ. ಆ ಧರ್ಮ ಉಳಿಸಲು ಬಂದವರೇ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು. ನಾವು ಅಪ್ಪಗಳು ಹೇಳಿದಂತೆ ನಡೆದರೆ ಸಾಕು ಅವರಿಗೆ ನಾವು ಸಲ್ಲಿಸುವ ನಿಜವಾದ ನುಡಿ ನಮನ’ ಎಂದರು.
‘ಏನು ಮಾತಾಡುತ್ತೇವೆಯೋ ಅದರಂತೆ ನಡೆಯಬೇಕು. ಇದು ಶರಣರ ನಡೆ-ನುಡಿ ಸಿದ್ಧಾಂತ. ಸಿದ್ದೇಶ್ವರ ಶ್ರೀಗಳು ಕೋಟಿಗೊಬ್ಬ ಶರಣ. ಅವರು ಹೇಳಿದಂತೆ ತಣ್ಣಗೆ ಇರುದು ಕಲಿಯಿರಿ. 12ನೇ ಶತಮಾನದ ಬಸವಣ್ಣನವರು ಎಲ್ಲರೂ ಮನುಷ್ಯ ಜಾತಿಯವರೇ ಎಂದಿದ್ದರೂ ಆದರೆ ಅದನ್ನು ಯಾರು ಪಾಲಿಸಲಿಲ್ಲ. ನಿಜವಾಗಿ ಪಾಲಿಸಿದವರು ಸಿದ್ದೇಶ್ವರ ಸ್ವಾಮೀಜಿ’ ಎಂದರು.
ನನ್ನನ್ನು ಪೂಜಿಸಬಾರದು ಎನ್ನುವ ಕಾರಣಕ್ಕೆ ನನ್ನ ಗದ್ದುಗೆ ಕಟ್ಟಬೇಡಿ ಎಂದು ಸಿದ್ದೇಶ್ವರ ಸ್ವಾಮೀಜಿಗಳು ಹೇಳಿದ್ದಾರೆ. ನಾವು ಸಿದ್ದೇಶ್ವರ ಸ್ವಾಮೀಜಿಗಳು ನಡೆ ನುಡಿಯನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಿದೆ ಎಂದರು.
ನಾಡಿನ ಸಾಧಕರು, ಪೂಜ್ಯರು, ಜ್ಞಾನಯೋಗಾಶ್ರಮದ ಭಕ್ತರು ಇದ್ದರು.
ಮತಕ್ಕೂ ಧರ್ಮಕ್ಕೂ ಸಂಬಂಧವೇ ಇಲ್ಲ. ಮತ ಬೇರೆ ಧರ್ಮ ಬೇರೆ. ಮತಗಳು ಎರಡಲ್ಲ ಎರಡು ಸಾವಿರವಾಗಲಿ ಎರಡು ಕೋಟಿಯಾಗಲಿ ಧರ್ಮಕ್ಕೆ ಯಾವುದೇ ತೊಂದರೆ ಇಲ್ಲ.– ನಿಜಲಿಂಗ ಸ್ವಾಮೀಜಿ, ಉತ್ತರಾಧಿಕಾರಿ ನಿಡಸೋಸಿ ಪಂಚಮ ಶಿವಲಿಂಗೇಶ್ವರ ಸಂಸ್ಥಾನ ಮಠ