ADVERTISEMENT

ನ್ಯಾಯಾಂಗದಲ್ಲೂ ಮೀಸಲಾತಿಗೆ ಆಗ್ರಹ

​ಪ್ರಜಾವಾಣಿ ವಾರ್ತೆ
Published 9 ಮಾರ್ಚ್ 2021, 11:43 IST
Last Updated 9 ಮಾರ್ಚ್ 2021, 11:43 IST
ಸಂಜು ಎಸ್.ಕಟ್ಟಿಮನಿ
ಸಂಜು ಎಸ್.ಕಟ್ಟಿಮನಿ   

ವಿಜಯಪುರ: ನ್ಯಾಯಾಂಗ ವ್ಯವಸ್ಥೆಯಲ್ಲೂ ಮೀಸಲಾತಿ ವ್ಯವಸ್ಥೆ ಜಾರಿಗೊಳಿಸುವಂತೆ ಆಗ್ರಹಿಸಿ ಬೃಹತ್ ಆಂದೋಲನ ರೂಪಿಸಲಾಗುವುದುಎಂದುಬ್ರೇವ್ ಬ್ಯಾರಿಸ್ಟರ್ಸ್ ಅಸೋಸಿಯೇಶನ್‍ ಅಧ್ಯಕ್ಷ ಸಂಜು ಎಸ್.ಕಟ್ಟಿಮನಿ ತಿಳಿಸಿದ್ದಾರೆ.

ಮೀಸಲಾತಿ ಮೂಲಭೂತ ಹಕ್ಕಲ್ಲ ಎಂದು ಇತ್ತೀಚಿಗೆ ಸುಪ್ರೀಂಕೋರ್ಟ್ ಹೇಳಿದೆ.ಇದು ಸಮಸ್ತ ದಲಿತರ ಮೇಲೆ ಗದಾ ಪ್ರಹಾರ ಮಾಡಿದಂತಿದೆ. ಅಲ್ಲದೆ, ಇದು ಸಂವಿಧಾನ ವಿರೋಧಿಯೂ ಆಗಿದೆ. ನ್ಯಾಯಾಂಗ ವ್ಯವಸ್ಥೆಯಲ್ಲಿ ಮೀಸಲಾತಿ ವ್ಯವಸ್ಥೆ ಜಾರಿಗೆ ಬಂದರೆ ಇಂತಹ ತೀರ್ಪುಗಳು ಹೊರಬರುವುದಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಮೀಸಲಾತಿಗೆ ತನ್ನದೇ ಆದ ಹಿನ್ನೆಲೆಯಿದೆ. ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ದಲಿತ ನಾಯಕ ಡಾ.ಬಿ.ಆರ್‌. ಅಂಬೇಡ್ಕರ್ ಅವರು ದಲಿತರಿಗೆ ಪ್ರತ್ಯೇಕ ಮತದಾನ ವ್ಯವಸ್ಥೆಯನ್ನು ಕಲ್ಪಿಸಬೇಕೆಂದು ಹಕ್ಕೋತ್ತಾಯ ಮಂಡಿಸಿದ್ದರು. ಇದು ದೇಶದ ಇಬ್ಬಾಗಕ್ಕೆ ಕಾರಣವಾಗುತ್ತದೆಂದು ಮಹಾತ್ಮ ಗಾಂಧಿಯವರು ಇದನ್ನು ಒಪ್ಪಲಿಲ್ಲ. ಇದರ ಪರಿಣಾಮವಾಗಿ ಪುನಾ ಒಪ್ಪಂದ ಏರ್ಪಟ್ಟಿತು. ಈ ಎಲ್ಲ ಪ್ರಕ್ರಿಯೆಗಳನ್ನು ಆಧರಿಸಿ ಮೀಸಲಾತಿ ಜಾರಿಗೊಳಿಸಲಾಗಿದೆ ಎಂದು ಹೇಳಿದರು.

ADVERTISEMENT

ದೇಶದಲ್ಲಿ ತಾರತಮ್ಯ, ಅಸಮಾನತೆ ಇರುವವರೆಗೂ ಮೀಸಲಾತಿ ಜಾರಿಯಲ್ಲಿರಬೇಕು. ಅದರಂತೆ, ನ್ಯಾಯಾಂಗದಲ್ಲಿಯೂ ಮೀಸಲಾತಿ ಕಲ್ಪಿಸಬೇಕಾದ ಅವಶ್ಯಕತೆ ಇದೆ ಎಂದರು.

ಸುಪ್ರೀಂಕೋರ್ಟ್, ಹೈಕೋರ್ಟ್ ನ್ಯಾಯಮೂರ್ತಿಗಳ ನೇಮಕದಲ್ಲಿಯೂ ಮೀಸಲಾತಿ ಕೊಡಬೇಕು. ಆದರೆ, ಸದ್ಯ ಮೀಸಲಾತಿ ಇಲ್ಲದ್ದರಿಂದ ದಲಿತರ, ಬಡವರ, ಅಲ್ಪಸಂಖ್ಯಾತರ ವಿರುದ್ಧ ಇಂತಹ ತೀರ್ಪುಗಳು ಹೊರಬೀಳುತ್ತಿವೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.