ADVERTISEMENT

ರಸ್ತೆ ಅಪಘಾತ ತಡೆಗೆ ಜಾಗೃತಿ ಅಗತ್ಯ: ಜಿಲ್ಲಾಧಿಕಾರಿ ಡಾ.ಆನಂದ

ರಸ್ತೆ ಸುರಕ್ಷತಾ ಸಮಿತಿ ಸಭೆ

​ಪ್ರಜಾವಾಣಿ ವಾರ್ತೆ
Published 22 ನವೆಂಬರ್ 2025, 5:27 IST
Last Updated 22 ನವೆಂಬರ್ 2025, 5:27 IST
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಅನಂದ ಕೆ. ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಜಾಗೃತಿ ಕರಪತ್ರ ಬಿಡುಗಡೆ ಮಾಡಿದರು
ವಿಜಯಪುರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಜಿಲ್ಲಾಧಿಕಾರಿ ಡಾ.ಅನಂದ ಕೆ. ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಜಾಗೃತಿ ಕರಪತ್ರ ಬಿಡುಗಡೆ ಮಾಡಿದರು   

ವಿಜಯಪುರ: ಮಾನವ ಜೀವ ಅತ್ಯಂತ ಅಮೂಲ್ಯವಾದದ್ದು, ಅಪಘಾತದಿಂದಾಗುವ ಜೀವ ಹಾನಿ ತಡೆಗಟ್ಟಲು ಮುನ್ನೆಚ್ಚರಿಕಾ ಕ್ರಮಗಳು ಹಾಗೂ ರಸ್ತೆ ಸುರಕ್ಷತಾ ನಿಯಮಗಳ ತಿಳಿವಳಿಕೆ ಅತ್ಯಗತ್ಯವಾಗಿದ್ದು, ಈ ನಿಟ್ಟಿನಲ್ಲಿ ಅಪಘಾತ ತಡೆಗೆ ರಸ್ತೆ ಸುರಕ್ಷತಾ ನಿಯಮಗಳ ಕುರಿತು ಸೂಕ್ತ ಜಾಗೃತಿ ಮೂಡಿಸಬೇಕು ಎಂದು ಸಂಬಂಧಿಸಿದ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಅನಂದ ಕೆ. ಸೂಚಿಸಿದರು. 

ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ರಸ್ತೆ ಸುರಕ್ಷತಾ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಅಪಘಾತಗಳು ಸಂಭವಿಸುವ ಅಪಘಾತ ವಲಯಗಳನ್ನು ಗುರುತಿಸಿ, ಇಂತಹ ಸ್ಥಳಗಳಲ್ಲಿ ಸೂಕ್ತ ಸುರಕ್ಷತಾ ಕ್ರಮಗಳನ್ನು ವಹಿಸಬೇಕು. ಅಪಘಾತ ಸಂಭವಿಸುವ ರಸ್ತೆಗಳಲ್ಲಿ ಸಂಚಾರ ಚಿಹ್ನೆ, ಅಗತ್ಯವಿದ್ದಲ್ಲಿ ರಸ್ತೆ ಗುರುತು ಫಲಕ ಅಳವಡಿಸಬೇಕು. ಅವಶ್ಯವಿದ್ದೆಡೆ  ಬ್ಯಾರಿಕೇಡ್ ಸೇರಿದಂತೆ ಅಗತ್ಯ ಸುರಕ್ಷತಾ ಕ್ರಮ ವಹಿಸಿ ರಸ್ತೆ ನಿಯಮಗಳ ಪಾಲನೆಯಾಗುವಂತೆ ನೋಡಿಕೊಳ್ಳಬೇಕು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳು ನಿಗಾ ಇರಿಸಬೇಕು ಎಂದು ಹೇಳಿದರು. 

ADVERTISEMENT

ಜಿಲ್ಲೆಯಾದ್ಯಂತ ಅಪಘಾತ ಪ್ರಮಾಣ ತಡೆಗೆ ರಸ್ತೆ ಸಂಚಾರ ನಿಯಮಗಳನ್ನು ಪಾಲಿಸುವಂತೆ ಪ್ರಯಾಣಿಕರಿಗೆ ತಿಳಿ ಹೇಳಿ, ಸೂಕ್ತ ಅರಿವು ಮೂಡಿಸಬೇಕು. ರಸ್ತೆ ಅಪಘಾತ ತಡೆಗೆ ಸೂಕ್ತ ಯೋಜನೆ ರೂಪಿಸಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು ಎಂದರು.

ವಿಜಯಪುರ–ಚಿತ್ರದುರ್ಗ ರಾಷ್ಟ್ರೀಯ ಹೆದ್ದಾರಿಯಲ್ಲಿ ಮನಗೂಳಿ, ಉತ್ನಾಳ ಕ್ರಾಸ್ ಅಪಘಾತ ಸಂಭವಿಸುವ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸುವಂತೆ ಅವರು ಸೂಚನೆ ನೀಡಿದರು. 

ನಗರದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತ, ಕನಕದಾಸ ವೃತ್ತ ಹಾಗೂ ಕ್ರೀಡಾಂಗಣಕ್ಕೆ ಹೊಂದಿಕೊಂಡಿರುವ ರಸ್ತೆಗಳಲ್ಲಿ ಅಪಘಾತ ಸಂಭವಿಸುವುದರಿಂದ ಈ ಕುರಿತು ಸ್ಥಳ ಪರಿಶೀಲನೆ ನಡೆಸಿ ವರದಿ ನೀಡುವಂತೆ ಸೂಚಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಮಾತನಾಡಿ, ಈಗಾಗಲೇ ಕೊಲ್ಹಾರ ಸೇತುವೆ ಮೇಲೆ ವಿದ್ಯುತ್ ವ್ಯವಸ್ಥೆ ಕಲ್ಪಿಸುವ ಕಾರ್ಯ ಮುಗಿದಿದೆ. ನಾಲ್ಕು ಸಿಸಿ ಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಜಿಲ್ಲಾ ವ್ಯಾಪ್ತಿಯ 137 ಕಿ.ಮೀ. ರಾಷ್ಟ್ರೀಯ ಹೆದ್ದಾರಿಯಲ್ಲಿ ಆಯ್ದ 12 ಸ್ಥಳಗಳನ್ನು ಗುರುತಿಸಲಾಗಿದ್ದು, ಗುರುತಿಸಲಾದ ಸ್ಥಳಗಳಲ್ಲಿ ರಸ್ತೆ ಸುರಕ್ಷತಾ ನಿಯಮಗಳ ಪಾಲನೆಗೆ ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಕ್ರಮ ವಹಿಸುವಂತೆ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಅರವಿಂದ ಹಾಗರಗಿ, ವಿಜಯಪುರ ಉಪ ವಿಭಾಗಾಧಿಕಾರಿ ಗುರುನಾಥ ದಡ್ಡೆ, ಇಂಡಿ ಉಪವಿಭಾಗಾಧಿಕಾರಿ ಅನುರಾಧಾ ವಸ್ತ್ರದ, ಪ್ರಾದೇಶಿಕ ಸಾರಿಗೆ ಅಧಿಕಾರಿ ವಸೀಂ ಬಾಬಾ ಮುದ್ದೇಬಿಹಾಳ, ಅಬಕಾರಿ ಉಪ ಆಯುಕ್ತ ಮುರಳೀಧರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪನಿರ್ದೇಶಕ ಕೆ.ಕೆ.ಚವ್ಹಾಣ, ಜಿಲ್ಲಾ ಶಸ್ತ್ರ ಚಿಕಿತ್ಸಕ ಶಿವಾನಂದ ಮಾಸ್ತಿಹೊಳಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ಸಂಪತ್‍ಕುಮಾರ ಗುಣಾರಿ, ಪೀಟರ್ ಅಲೆಕ್ಸಾಂಡರ್ ಇದ್ದರು.

ಅಪಘಾತ ತಡೆಗೆ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಹಾಗೂ ಪ್ರಯಾಣಿಕರು ಸಾರ್ವಜನಿಕರು ರಸ್ತೆ ಸುರಕ್ಷತಾ ನಿಯಮಗಳ ಅರಿವು ಹೊಂದುವುದು ಅತ್ಯವಶ್ಯಕವಾಗಿದೆ 
-ಡಾ.ಆನಂದ ಕೆ., ಜಿಲ್ಲಾಧಿಕಾರಿ 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.