ADVERTISEMENT

ವಿಜಯಪುರ | ಹಳೆಯ, ತೂತುಬಿದ್ದ ಕಳಪೆ ಪರದೆ ಅಳವಡಿಕೆ

ಬಿಸಿಲಿನಿಂದ ರಕ್ಷಣೆಗೆ ವಿಜಯಪುರ ನಗರದ ಪ್ರಮುಖ ವೃತ್ತಗಳಲ್ಲಿ ನೆರಳಿನ ವ್ಯವಸ್ಥೆ

ಬಸವರಾಜ ಸಂಪಳ್ಳಿ
Published 28 ಮಾರ್ಚ್ 2025, 6:39 IST
Last Updated 28 ಮಾರ್ಚ್ 2025, 6:39 IST
ವಿಜಯಪುರ ನಗರದ ಗಾಂಧಿ ಚೌಕಿಯಲ್ಲಿ ಗುರುವಾರ ಅಳವಡಿಸಿರುವ ಹಳೆಯ ಹಸಿರಿನ ಪರದೆ ತೂತು ಬಿದ್ದಿದೆ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಗಾಂಧಿ ಚೌಕಿಯಲ್ಲಿ ಗುರುವಾರ ಅಳವಡಿಸಿರುವ ಹಳೆಯ ಹಸಿರಿನ ಪರದೆ ತೂತು ಬಿದ್ದಿದೆ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ಬಿಸಿಲಿನಿಂದ ಬಳಲುವ ವಾಹನ ಸವಾರರಿಗೆ ನಗರದ ಪ್ರಮುಖ ಟ್ರಾಫಿಕ್‌ ಸಿಗ್ನಿಲ್‌ಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಲು ಪಾಲಿಕೆ ಕೊನೆಗೂ ಮುಂದಾಗಿದೆ. ಆದರೆ, ಕಳಪೆ ಗುಣಮಟ್ಟದ ಹಸಿರು ಪರದೆಯನ್ನು ಬಳಸುತ್ತಿರುವ ಆರೋಪ ಕೇಳಿಬಂದಿದೆ.

ನಗರದ ಕೇಂದ್ರ ಬಸ್‌ ನಿಲ್ದಾಣ, ಬಸವೇಶ್ವರ ವೃತ್ತ ಮತ್ತು ಗಾಂಧಿ ಚೌಕಿಯಲ್ಲಿ ಗುರುವಾರ ಅಳವಡಿಸಿರುವ ಹಸಿರಿನ ಪರದೆಗಳಲ್ಲಿ ಸಣ್ಣ, ಸಣ್ಣ ತೂತುಗಳು ಬಿದ್ದಿವೆ. ಈಗಾಗಲೇ ಬಳಸಿರುವುದನ್ನು ಹಾಗೂ ಕಲೆಗಳು ಬಿದ್ದಿರುವ ಪರದೆಯನ್ನು ಬಳಸಿ, ಪಾಲಿಕೆಗೆ, ಜನರ ಹಣಕ್ಕೆ ಕನ್ನ ಹಾಕುವ ಕಾರ್ಯ ನಡೆದಿರುವುದು ಬಯಲಿಗೆ ಬಂದಿದೆ.

ಸದ್ಯ ನೆರಳಿನ ವ್ಯವಸ್ಥೆ ಮಾಡುತ್ತಿರುವುದು ಅವೈಜ್ಞಾನಿಕವಾಗಿದೆ. ಕೇವಲ ಮಧ್ಯಾಹ್ನ 12ರಿಂದ 2 ಗಂಟೆ ವರೆಗೆ ಮಾತ್ರ ಅದರ ಅಡಿ ನಿಲ್ಲುವ ಬೈಕ್‌ ಸವಾರರು, ಪ್ರಯಾಣಿಕರಿಗೆ ನೆರಳು ಲಭಿಸುತ್ತದೆ. ದಿನದ ಇನ್ನುಳಿದ ಸಮಯದಲ್ಲಿ ಬಿಸಿಲಿನ ತಾಪ ಸಂಪೂರ್ಣವಾಗಿ ಮೈಮೇಲೆ ಬೀಳುವಂತೆ ಪರದೆ ಕಟ್ಟಿಲಾಗಿದೆ.

ADVERTISEMENT

ಪರದೆಯನ್ನು ಮೇಲೆ ಮಾತ್ರವಲ್ಲದೇ ಎರಡೂ ಕಡೆ ಇಳಿ ಬಿಟ್ಟಿದ್ದರೇ ವಾಹನ ಸವಾರರಿಗೆ, ಪ್ರಯಾಣಿಕರಿಗೆ ಹೆಚ್ಚು ನೆರಳು ಲಭಿಸುತ್ತಿತ್ತು. ಜೊತೆಗೆ ರಸ್ತೆಯಲ್ಲಿ ಇನ್ನಷ್ಟು ಉದ್ದವಾಗಿ ಪರದೆ ಅಳವಡಿಸಿದ್ದರೇ ಬಹಳಷ್ಟು ಜನ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು. ಕೇವಲ ಟ್ರಾಫಿಕ್‌ನಲ್ಲಿ ಮುಂಭಾಗದಲ್ಲಿ ನಿಲ್ಲುವ ಹತ್ತಾರು ಬೈಕು, ಆಟೋದವರಿಗೆ ನೆರಳು ಸಿಗುತ್ತದೆ. ಹಿಂಬದಿಯಲ್ಲಿ ನಿಲ್ಲುವವರಿಗೆ ಬಿಸಿಲೇ ಗತಿ ಎನ್ನುವಂತಾಗಿದೆ.

ಈ ಹಿಂದಿನ ವರ್ಷಗಳಲ್ಲೂ ಕಳಪೆಮಟ್ಟದ ಹಸಿರು ಪರದೆಗಳನ್ನು ಅಳವಡಿಸಿದ್ದ ಪರಿಣಾಮ ಕೆಲವೇ ದಿನಗಳಲ್ಲಿ ಗಾಳಿಗೆ ಹರಿದು, ತುಂಡಾದರೂ ಅವುಗಳನ್ನು ಸರಿಯಾಗಿ ನಿರ್ವಹಣೆ ಮಾಡಿರಲಿಲ್ಲ. ಕಾಟಾಚಾರಕ್ಕೆ ಎಂಬಂತೆ ನೆರಳಿನ ವ್ಯವಸ್ಥೆ ಕಲ್ಪಿಸಿ, ಹಣ ಪೋಲು ಮಾಡಲಾಗಿತ್ತು. ಪಾಲಿಕೆ ಸಿಬ್ಬಂದಿ, ಅಧಿಕಾರಿಗಳು, ಪಾಲಿಕೆ ಸದಸ್ಯರು ಯಾರೂ ಗಮನ ಹರಿಸಿರಲಿಲ್ಲ ಎಂಬ ಆರೋಪ ಕೇಳಿಬಂದಿದೆ.

ಈ ವರ್ಷವಾದರೂ ಗುಣಮಟ್ಟದ ನೆರಳಿನ ವ್ಯವಸ್ಥೆ ಮಾಡಬೇಕು, ಜೂನ್‌ ಆರಂಭದ ವರೆಗೂ ಅವುಗಳನ್ನು ಸುವ್ಯವಸ್ಥಿತವಾಗಿ ನಿರ್ವಹಣೆ ಮಾಡುವಂತೆ ಗುತ್ತಿಗೆದಾರರಿಗೆ ಕ್ರಮಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ವಿಜಯಪುರ ನಗರದ ಗಾಂಧಿ ಚೌಕಿಯಲ್ಲಿ ಗುರುವಾರ ಅಳವಡಿಸಿರುವ ಹಳೆಯ ಹಸಿರಿನ ಪರದೆ ತೂತು ಬಿದ್ದಿದೆ –ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ನೆರಳಿನ ವ್ಯವಸ್ಥೆಗಾಗಿ ₹15 ಲಕ್ಷ ವೆಚ್ಚ ಪ್ರಮುಖ ವೃತ್ತಗಳಲ್ಲಿ ನೆರಳಿನ ಪರದೆ ಗುತ್ತಿಗೆದಾರನ ಕರಾಮತ್ತು; ಕಾಟಾಚಾರಕ್ಕೆ ಅಳವಡಿಕೆ
ಕ್ರಮ ಕೈಗೊಳ್ಳುವೆ: ಮೆಕ್ಕಳಕಿ
ಕಳಪೆ ಗುಣಮಟ್ಟದ ಹಸಿರು ಪರದೆಗಳನ್ನು ಅಳವಡಿಸಿರುವುದು ನನ್ನ ಗಮನಕ್ಕೆ ಬಂದಿಲ್ಲ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸುತ್ತೇನೆ. ಒಂದು ವೇಳೆ ಕಳಪೆಯಾಗಿದ್ದರೆ ಬದಲಿಸಲು ಗುತ್ತಿಗೆದಾರರಿಗೆ ಸೂಚಿಸುತ್ತೇನೆ’ ಎಂದು ವಿಜಯಪುರ ಮಹಾನಗರ ಪಾಲಿಕೆ ಆಯುಕ್ತ ವಿಜಯಕುಮಾರ್‌ ಮೆಕ್ಕಳಕಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು. ‘ವಿಜಯಪುರ ನಗರದ ಕೋರ್ಟ್‌ ಸರ್ಕಲ್‌ ಕೇಂದ್ರ ಬಸ್‌ ನಿಲ್ದಾಣ ಗಾಂಧಿಚೌಕಿ ಬಸವೇಶ್ವರ ವೃತ್ತ ವಾಟರ್‌ ಟ್ಯಾಂಕ್‌ ಇಟಗಿ ಪೆಟ್ರೋಲ್‌ ಪಂ‍‍ಪ್‌ ಸರ್ಕಲ್‌ಗಳಲ್ಲಿ ಈ ಬೇಸಿಗೆಯಲ್ಲಿ ವಾಹನ ಸವಾರರಿಗೆ ಬಿಸಿಲಿನಿಂದ ರಕ್ಷಣೆ ಒದಗಿಸುವುದಕ್ಕಾಗಿ ₹15 ಲಕ್ಷ ಮೊತ್ತದ ಟೆಂಡರ್‌ ಅನ್ನು ತುಪ್ಪದ ಎಂಬುವವರಿಗೆ ಟೆಂಡರ್‌ ನೀಡಲಾಗಿದೆ’ ಎಂದರು. ‘ಕಳೆದ ವರ್ಷವೂ ತುಪ್ಪದ ಅವರೇ ನೆರಳಿನ ವ್ಯವಸ್ಥೆ ಮಾಡಿದ್ದರು. ಬಹಳ ಅಚ್ಚುಕಟ್ಟಾಗಿತ್ತು. ಹೀಗಾಗಿ ಈ ವರ್ಷವೂ ಅವರಿಗೆ ನೀಡಲಾಗಿದೆ. ಕಳಪೆಯಾಗಿದ್ದರೆ ಕ್ರಮಕೈಗೊಳ್ಳಲಾಗುವುದು’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.