ADVERTISEMENT

ಶರಣ ಸಾಹಿತ್ಯ ಪರಿಷತ್ತು | ಶಾಶ್ವತ ಸಭಾ ಸದಸ್ಯರ ನೇಮಿಸಿ: ಸಚಿವ ಶಿವಾನಂದ ಪಾಟೀಲ

​ಪ್ರಜಾವಾಣಿ ವಾರ್ತೆ
Published 15 ಸೆಪ್ಟೆಂಬರ್ 2025, 4:54 IST
Last Updated 15 ಸೆಪ್ಟೆಂಬರ್ 2025, 4:54 IST
ಬಸವನಬಾಗೇವಾಡಿಯ ಬಸವಭವನದಲ್ಲಿ‌ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 31ನೇ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು
ಬಸವನಬಾಗೇವಾಡಿಯ ಬಸವಭವನದಲ್ಲಿ‌ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 31ನೇ ವಾರ್ಷಿಕ ಮಹಾಸಭೆಯನ್ನು ಗಣ್ಯರು ಉದ್ಘಾಟಿಸಿದರು   

ಬಸವನಬಾಗೇವಾಡಿ: ‘ಶರಣ ಸಾಹಿತ್ಯ ಪರಿಷತ್ತು ಶಾಶ್ವತ ಸಭಾ ಸದಸ್ಯರನ್ನು ಆಯ್ಕೆ ಮಾಡಲು ವೀರಶೈವ ಲಿಂಗಾಯತ ಸಮಾಜದ ಮುಂಚೂಣಿಯಲ್ಲಿರುವ ಪ್ರಮುಖರು ತಲಾ ₹5 ಲಕ್ಷ ಕೊಡುವಂತೆ ಸಭಾ ಆದೇಶಿಸಿದರೆ ಅದನ್ನು ಕೊಡಿಸುವ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ’ ಎಂದು ಸಚಿವ ಶಿವಾನಂದ ಪಾಟೀಲ ಸಲಹೆ ನೀಡಿ, ತಾವೇ ಮೊದಲು ₹5 ಲಕ್ಷ ನಗದನ್ನು ಪೂಜ್ಯರ ಮೂಲಕ ಶರಣ ಸಾಹಿತ್ಯ ಪರಿಷತ್ತು ರಾಜ್ಯ ಘಟಕದ ಅಧ್ಯಕ್ಷರಿಗೆ ನೀಡಿದರು.

ಪಟ್ಟಣದ ಬಸವಭವನದಲ್ಲಿ ಭಾನುವಾರ ಜರುಗಿದ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ 31ನೇ ವಾರ್ಷಿಕ ಮಹಾಸಭೆಯಲ್ಲಿ ಅವರು ಮಾತನಾಡಿದರು.

‘ವೀರಶೈವ ಲಿಂಗಾಯತ ಎರಡೂ ಒಂದೇ ಧರ್ಮವಿದ್ದರೂ ಸರ್ಕಾರ ಇದನ್ನು ಲಾಭದ ದೃಷ್ಟಿಕೋನದಲ್ಲಿ‌ ನೋಡಬಾರದು. ನಾವು ವೀರಶೈವ ಲಿಂಗಾಯತರು ಎನ್ನುವುದಕ್ಕಿಂತ ಬಸವಣ್ಣ ಅನುಯಾಯಿಗಳು. ಧರ್ಮಕ್ಕಿಂತಲ್ಲೂ ಬಸವಣ್ಣನವರ ಆಚಾರ, ವಿಚಾರಗಳನ್ನು ಭೂಮಿ ಮೇಲೆ ಆಚರಣೆಗೆ ತರಲು ನಾವೆಲ್ಲರೂ ಒಗ್ಗೂಡಿ ಪ್ರಯತ್ನಿಸೋಣ ಎಂದು ಕರೆ ನೀಡಿದರು.

ADVERTISEMENT

ಹಿರಿಯ ವಿದ್ವಾಂಸ ಗೊ.ರು. ಚನ್ನಬಸಪ್ಪ ಮಾತನಾಡಿ, ‘ನಾಡಿನಾದ್ಯಂತ ಶರಣ ಸಾಹಿತ್ಯ ಮತ್ತು ಸಂಸ್ಕೃತಿ ಬಗ್ಗೆ ಜನ ಸಮುದಾಯದಲ್ಲಿ ಒಂದು ಬದ್ಧತೆ ಬರಬೇಕಿದೆ. ವಿಶ್ವಗುರು ಬಸವಣ್ಣನವರನ್ನು ನಾಡಿನ ಸಾಂಸ್ಕೃತಿಕ ನಾಯಕ ಎಂದು ಘೋಷಿಸಿರುವುದು 850 ವರ್ಷಗಳ‌ ಬಳಿಕ ಸರ್ಕಾರ ಕೈಗೊಂಡ ಮಹತ್ವದ ನಿರ್ಧಾರ. ಇದು ಕೇವಲ‌ ಘೋಷಣೆಯಾಗದೇ ಅನುಷ್ಠಾನಕ್ಕೆ‌ ತರಲು ಸಿ.ಎಂಗೆ 28 ಅಂಶಗಳ ಪತ್ರ‌ ಬರೆದಿದ್ದು, ಅನುಷ್ಠಾನಕ್ಕೆ‌ ಬರಲಿ’ ಎಂದರು.

ಶರಣ ಸಾಹಿತ್ಯ ಪರಿಷತ್ತಿನ ರಾಜ್ಯ ಘಟಕದ ಅಧ್ಯಕ್ಷ ಸಿ. ಸೋಮಶೇಖರ ಮಾತನಾಡಿ, ರಾಜ್ಯದಲ್ಲಿ ಪ್ರತ್ಯೇಕ ವಚನ ವಿಶ್ವವಿದ್ಯಾಲಯ ಸ್ಥಾಪನೆ, ಅಂತರರಾಷ್ಟ್ರೀಯ ಬಸವ ಅಧ್ಯಾತ್ಮಿಕ ಕೇಂದ್ರ ಸ್ಥಾಪನೆ ಹೀಗೆ ಪ್ರಮುಖ ಬೇಡಿಕೆಗಳ ಬಗ್ಗೆ ಮೂರ್ನಾಲ್ಕು ಬಾರಿ ಮುಖ್ಯಮಂತ್ರಿ ಭೇಟಿಯಾಗಿ ಒತ್ತಾಯಿಸಿದ್ದೇವೆ. ಪರಿಷತ್ತಿನ ಕಾರ್ಯಗಳಿಗೆ ಸರ್ಕಾರ ಗಟ್ಟಿಯಾಗಿ ಪ್ರತಿವರ್ಷ ಅನುದಾನ ನೀಡಬೇಕು. ಸರ್ಕಾರ ಬೇಡಿಕೆ ಈಡೇರಿಸುತ್ತದೆ ಎಂಬ ಆತ್ಮವಿಶ್ವಾಸವಿದೆ’ ಎಂದರು.

ವಿಜಯಪುರ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತಿನಿಂದ ಕೊಡಮಾಡುವ 2025ನೇ ಸಾಲಿನ ಜಿಲ್ಲಾಮಟ್ಟದ ‘ಬಸವರಾಜೇಂದ್ರ ಶ್ರೀ’ ಪ್ರಶಸ್ತಿಗೆ ಬಸವನಬಾಗೇವಾಡಿ ತಾಲ್ಲೂಕಿನ ಶರಣಸಾಹಿತ್ಯ ಪರಿಷತ್ತಿನ ಅಧ್ಯಕ್ಷ ವೀರಣ್ಣ ಮರ್ತುರ ಹಾಗೂ ಮುದ್ದೇಬಿಹಾಳ ತಾಲ್ಲೂಕು ಮಹಿಳಾ ಕದಳಿ ವೇದಿಕೆಯ ತಾಲ್ಲೂಕು ಘಟಕದ ಅಧ್ಯಕ್ಷೆ ಕಾಶಿಬಾಯಿ ಶಿ. ರಾಂಪುರ ಅವರಿಗೆ ನೀಡಿ ಗೌರವಿಸಲಾಯಿತು.

ಸ್ವಾತಂತ್ರ್ಯ ಹೋರಾಟಗಾರ್ತಿ ಲೀಲಾದೇವಿ ಆರ್. ಪ್ರಸಾದ ಮಾತನಾಡಿದರು. ಗದುಗಿನ ತೋಂಟದ‌ ಸಿದ್ದರಾಮ ಸ್ವಾಮೀಜಿ, ಪರಿಷತ್ತಿನ ರಾಜ್ಯ ಪ್ರಧಾನ ಕಾರ್ಯದರ್ಶಿ ಸೋಮಶೇಖರ ಗಾಂಜಿ, ಕೋಶಾಧಿಕಾರಿ ಎಸ್.ಎಂ. ಹಂಪಯ್ಯ, ಹಿರಿಯರಾದ ವಿವೇಕಾನಂದ ಕಲ್ಯಾಣಶೆಟ್ಟಿ, ಶಸಾಪ ತಾಲ್ಲೂಕು ಘಟಕದ ಅಧ್ಯಕ್ಷ ವೀರಣ್ಣ ಮರತೂರ, ಪರಿಷತ್ತಿನ ಉಪಾಧ್ಯಕ್ಷ ಅಪ್ಪಾರಾವ ಅಕ್ಕೋಣೆ, ಸಿಂ.ರಾ. ಹೊನ್ನಲಿಂಗಯ್ಯ, ಕೆ.ಎಂ.ವಿರೇಶ, ಕಾರ್ಯದರ್ಶಿ ಎಸ್.ಎಂ.ಪಟ್ಟಣಶೆಟ್ಟಿ, ಕದಳಿ‌ ವೇದಿಕೆ ಮಹಿಳಾ‌ಪ್ರತಿನಿಧಿ ಸುಶೀಲಾ ಸೋಮಶೇಖರ, ಯುವ ವೇದಿಕೆ ಪ್ರತಿನಿಧಿ ಪ್ರಕಾಶ ಅಂಗಡಿ, ನಾಟಕ‌ ಅಕಾಡೆಮಿ‌ ಅಧ್ಯಕ್ಷ ಕೆ.ವಿ.ನಾಗರಾಜ, ಜಿಲ್ಲಾ ಘಟಕದ ಅಧ್ಯಕ್ಷ ಜಂಬುನಾಥ ಕಂಚ್ಯಾಣಿ, ಯುವ ವೇದಿಕೆಯ ಜಿಲ್ಲಾ ಪ್ರತಿನಿಧಿ ಅಮರೇಶ ಸಾಲಕ್ಕಿ, ಕದಳಿ ವೇದಿಕೆ ತಾಲ್ಲೂಕು ಪ್ರತಿನಿಧಿ ಸಾವಿತ್ರಿ ಕಲ್ಯಾಣಶೆಟ್ಟಿ ಇದ್ದರು.

ನಾವು ಸರ್ಕಾರಕ್ಕೆ ಕೈವೊಡ್ಡಿ ಬೇಡುವ ಸ್ಥಿತಿ ಬರಬಾರದು. ಒಡೆದು ಹೋಗುವ ಸಮಾಜಗಳನ್ನು‌ ವೀರಶೈವ ಲಿಂಗಾಯತ ಸಮಾಜ ಒಗ್ಗೂಡಿಸುವ ಕೆಲಸ ಮಾಡಿದೆ
ಶಿವಾನಂದ ಪಾಟೀಲ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.