ADVERTISEMENT

ಅಗತ್ಯವಿರುವವರಿಗೆ ಮಾತ್ರ ರೆಮ್‌ಡಿಸಿವಿರ್‌ ನೀಡಿ: ಸಚಿವೆ ಶಶಿಕಲಾ ಜೊಲ್ಲೆ ಸೂಚನೆ

​ಪ್ರಜಾವಾಣಿ ವಾರ್ತೆ
Published 29 ಏಪ್ರಿಲ್ 2021, 15:40 IST
Last Updated 29 ಏಪ್ರಿಲ್ 2021, 15:40 IST
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತು ನಡೆಸಿದ ವಿಡಿಯೊ ಸಂವಾದದಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿ.ಪಂ.ಸಿಇಒ ಗೋವಿಂದ ರೆಡ್ಡಿ, ಎಸ್‌ಪಿ.ಅನುಪಮ್‌ ಅಗರವಾಲ್‌ ಪಾಲ್ಗೊಂಡಿದ್ದರು
ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಬುಧವಾರ ಕೋವಿಡ್-19 ನಿಯಂತ್ರಣ ಕ್ರಮಗಳ ಕುರಿತು ನಡೆಸಿದ ವಿಡಿಯೊ ಸಂವಾದದಲ್ಲಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್‌, ಜಿ.ಪಂ.ಸಿಇಒ ಗೋವಿಂದ ರೆಡ್ಡಿ, ಎಸ್‌ಪಿ.ಅನುಪಮ್‌ ಅಗರವಾಲ್‌ ಪಾಲ್ಗೊಂಡಿದ್ದರು   

ವಿಜಯಪುರ: ಅಗತ್ಯವಿರುವ ಕೋವಿಡ್‌ ರೋಗಿಗಳಿಗೆ ಮಾತ್ರ ವೈದ್ಯರು ರೆಮ್‌ಡಿಸಿವಿರ್‌ ಬಳಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಸೂಚಿಸಿದರು.

ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಖಾಸಗಿ ಆಸ್ಪತ್ರೆಗಳ ವೈದ್ಯರು ಕೂಡ ರೆಮ್ ಡಿಸಿವಿರ್‌ ಲಸಿಕೆಯನ್ನು ಅಗತ್ಯತೆಗೆ ತಕ್ಕಂತೆ ರೋಗಿಗಳ ರೋಗ ನಿರೋಧಕ ಶಕ್ತಿ ಆಧಾರದ ಮೇಲೆ ಪರೀಕ್ಷೆ ನಡೆಸಿ ನೀಡಬೇಕು ಎಂದರು.

ರೆಮ್ ಡಿಸಿವಿರ್‌ ಲಸಿಕೆ ಇಲ್ಲದೆ ರೋಗಿ ಮರಣ ಹೊಂದಬಹುದು ಎಂದು ಸಾರ್ವಜನಿಕರಲ್ಲಿ ತಪ್ಪು ಅಭಿಪ್ರಾಯವಿದ್ದು, ವೈದ್ಯರು ನೀಡುವ ಸಲಹೆಗಳಿಗೆ ತಕ್ಕಂತೆ ಪಡೆಯಲು ಮನವಿ ಮಾಡಿದರು. ಮುಂದಿನ ದಿನಗಳಲ್ಲಿ ವಾರದಲ್ಲಿ ಎರಡು ಬಾರಿ ಲಸಿಕೆ ಸರಬರಾಜಿಗೆ ಕೋರಲಾಗಿದೆ ಎಂದು ಅವರು ತಿಳಿಸಿದರು.

ADVERTISEMENT

ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಿಗಾಗಿ ಸದ್ಯಕ್ಕೆ ರೆಮ್ ಡಿಸಿವಿರ್‌ ಲಸಿಕೆಯು ಬಂದಿದ್ದು, ಈಗಾಗಲೇ ಖಾಸಗಿ ಆಸ್ಪತ್ರೆಗಳಿಗೆ 2396 ಹಾಗೂ ಸರ್ಕಾರಿ ಆಸ್ಪತ್ರೆಗಳಿಗೆ 525 ಲಸಿಕೆಗಳನ್ನು ವಿತರಿಸಲಾಗಿದೆ. ಇದರ ಕೊರತೆ ನೀಗಿಸಲು ನಿರಂತರ ಪ್ರಯತ್ನ ಸಹ ನಡೆಸಲಾಗುತ್ತಿದ್ದು. ಕೋವಿಡ್ ಪಾಸಿಟಿವ್ ರೋಗಿಗಳಿಗೆ ಮಾತ್ರ ಈ ಲಸಿಕೆ ಹಾಕಿಸಲು ಕ್ರಮಕೈಗೊಳ್ಳುವಂತೆ ವೈದ್ಯರಲ್ಲಿ ಅವರು ಮನವಿ ಮಾಡಿದರು.

ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಆಸ್ಪತ್ರೆಗಳಲ್ಲಿ ಹಾಗೂ ಜಿಲ್ಲೆಯ ಒಟ್ಟು 18 ಖಾಸಗಿ ಆಸ್ಪತ್ರೆಗಳಲ್ಲಿ ಕೋವಿಡ್ ರೋಗಿಗಳಿಗೆ ಪರಿಣಾಮಕಾರಿಯಾದ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ 6 ಕೋವಿಡ್ ಕೇರ್ ಸೆಂಟರ್ ಗಳನ್ನು ಸಹ ಆರಂಭಿಸಲಾಗಿದೆ. ಗ್ರಾಮಾಂತರ ಪ್ರದೇಶಗಳಿಗೆ ಆಗಮಿಸುವ ವಲಸಿಗರನ್ನು ನಿಗಾದಲ್ಲಿ ಇಡಲು ಕೋವಿಡ್ ಕೇರ್ ಸೆಂಟರ್ ಹೆಚ್ಚು ಸಹಕಾರಿಯಾಗಲಿದ್ದು, ಕ್ವಾರೆಂಟೈನ್ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅದರಂತೆ ಚೆಕ್ ಪೋಸ್ಟ್ ಗಳನ್ನು ಸಹ ಸ್ಥಾಪಿಸಲಾಗಿದೆ ಎಂದು ಅವರು ಹೇಳಿದರು.

ಜಿಲ್ಲೆಯ ಎರಡು ಆಕ್ಸಿಜನ್ ಪ್ಲಾಂಟ್ ಗಳ ಭೇಟಿಯನ್ನು ಸಹ ಹಿರಿಯ ಅಧಿಕಾರಿಗಳು ಮಾಡಿದ್ದು, ಶೇ 50 ರಷ್ಟು ಆಕ್ಸಿಜನ್ ನಮ್ಮ ಜಿಲ್ಲೆಗೆ ಮೀಸಲಿಡಲು ಸೂಚಿಸಲಾಗಿದೆ. ಇದರ ಕೊರತೆ ನೀಗಿಸಲು ಬಳ್ಳಾರಿ ಮತ್ತು ಹುಬ್ಬಳ್ಳಿಯಿಂದ ಸಮನ್ವಯತೆ ಸಹ ಸಾಧಿಸಲಾಗಿದೆ ಎಂದು ಸಚಿವರು ಹೇಳಿದರು.

ಜಿಲ್ಲೆಯ ಯಾವುದೇ ಕೋವಿಡ್ ರೋಗಿಗೆ ತೊಂದರೆಯಾಗಬಾರದು. ಖಾಸಗಿ ಆಸ್ಪತ್ರೆಗಳಲ್ಲಿ ರೋಗಿಗಳಿಂದ ಹೆಚ್ಚಿನ ದರ ವಸೂಲಿ ಮಾಡುತ್ತಿರುವುದು ಗಮನಕ್ಕೆ ತಂದಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಕೋವಿಡ್‌ನಿಂದ ರಕ್ಷಿಸಿಕೊಳ್ಳಲು ತಪ್ಪದೇ ಲಸಿಕೆಗಳನ್ನು ಪ್ರತಿಯೊಬ್ಬರು ಹಾಕಿಸಿಕೊಳ್ಳಬೇಕು. ಈ ಲಸಿಕೆ ಹಾಕಿಸಿಕೊಳ್ಳುವುದರಿಂದ ಶೇ 70ರಷ್ಟು ಜೀವರಕ್ಷಣೆ ಹಾಗೂ ಎರಡನೇ ಡೋಸ್ ಹಾಕಿಕೊಳ್ಳುವುದರಿಂದ ಹೆಚ್ಚಿನ ರಕ್ಷಣೆ ಪಡೆಯಬಹುದಾಗಿದ್ದು, ಎರಡು ಲಸಿಕೆ ಪಡೆಯುವುದರಿಂದ ಬೇಗ ಗುಣಮುಖರಾಗಲು ಸಾಧ್ಯವಿದೆ ಎಂದು ಹೇಳಿದರು.

ಮೇ 1 ರಿಂದ 18 ವರ್ಷದವರಿಗೂ ಕೋವಿಡ್-19 ಲಸಿಕೆ ನೀಡಲು ಆರಂಭಿಸುವ ಸಾಧ್ಯತೆ ಇದ್ದು 45 ವರ್ಷ ಮೇಲ್ಪಟ್ಟವರು ತಪ್ಪದೇ ಈ ಲಸಿಕೆಯನ್ನು ಪಡೆಯಬೇಕು. ಲಸಿಕಾ ಕಾರ್ಯಕ್ರಮದಲ್ಲಿ ಪ್ರಗತಿ ಸಾಧಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು.

ಜಿಲ್ಲಾ ಆಸ್ಪತ್ರೆಯಲ್ಲಿ ಕೋವಿಡ್ ಹಾಗೂ ಕೊವಿಡ್ ಅಲ್ಲದ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ಡಯಾಲಿಸಸ್ ಗೆ ಸಂಬಂಧಿಸಿದಂತೆ ಬಿ ಎಲ್.ಡಿ.ಇ ಹಾಗೂ ಯಶೋಧರ ಆಸ್ಪತ್ರೆಗಳಿಗೆ ಸಮನ್ವಯತೆಯಿಂದ ರೋಗಿಗಳಿಗೆ ಚಿಕಿತ್ಸೆ ಒದಗಿಸಲಾಗುತ್ತಿದೆ. ವೈದ್ಯಕೀಯ ತಂಡಗಳು ಅತ್ಯುತ್ತಮ ರೀತಿ ಕಾರ್ಯ ನಿರ್ವಹಿಸಲು ಸೂಚಿಸಲಾಗಿದೆ ಎಂದರು.

ವಿಧಾನ ಪರಿಷತ್ ಸದಸ್ಯ ಅರುಣ ಶಹಾಪುರ, ಕರ್ನಾಟಕ ರಾಜ್ಯ ಬೀಜ ಹಾಗೂ ಸಾವಯವ ಪ್ರಮಾಣನ ಸಂಸ್ಥೆ ಅಧ್ಯಕ್ಷ ವಿಜುಗೌಡ ಪಾಟೀಲ, ಜಿಲ್ಲಾಧಿಕಾರಿ ಪಿ.ಸುನೀಲ್‌ ಕುಮಾರ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋವಿಂದ.ರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಹೆಚ್ಚುವರಿ ಜಿಲ್ಲಾಧಿಕಾರಿ ರಮೇಶ್ ಕಳಸದ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ.ರಾಜಕುಮಾರ ಯರಗಲ್‌ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.