ADVERTISEMENT

ಸಿಂದಗಿ: ಕುರಿದೊಡ್ಡಿಯಾದ ಸಿಂದಗಿ ಎಪಿಎಂಸಿ ಆವರಣ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 8:05 IST
Last Updated 17 ಡಿಸೆಂಬರ್ 2025, 8:05 IST
ಸಿಂದಗಿ ಪಟ್ಟಣದ ಕೃಷಿ ಉತ್ಪನ್ ಮಾರುಕಟ್ಟೆ ಆವರಣದ ಮುಖ್ಯಧ್ವಾರದಲ್ಲಿ ರಸ್ತೆಯಲ್ಲಿಯೇ ಕುರಿಗಳ ಸಂತೆ
ಸಿಂದಗಿ ಪಟ್ಟಣದ ಕೃಷಿ ಉತ್ಪನ್ ಮಾರುಕಟ್ಟೆ ಆವರಣದ ಮುಖ್ಯಧ್ವಾರದಲ್ಲಿ ರಸ್ತೆಯಲ್ಲಿಯೇ ಕುರಿಗಳ ಸಂತೆ   

ಸಿಂದಗಿ: ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ 60ಕ್ಕೂ ಅಧಿಕ ವ್ಯಾಪಾರಿ ಮಳಿಗೆಗಳಿವೆ. ಇದರಲ್ಲಿ ಕೃಷಿ ವ್ಯಾಪಾರಿ ಮಳಿಗೆಗಳ ಜೊತೆಗೆ ಕೃಷಿಗೆ ಪೂರಕವಾದ ವ್ಯಾಪಾರಿ ಮಳಿಗೆಗಳಿವೆ. ಅದರಂತೆ ವಿವಿಧ ವ್ಯಾಪಾರಿ ಮಳಿಗೆಗಳು, ಬ್ಯಾಂಕು, ದೇವಸ್ಥಾನ ಕಾಣಬಹುದು.

ವಿಶಾಲವಾದ ಪ್ರಾಂಗಣವಿದ್ದರೂ ಭಾನುವಾರ ಬೆಳ್ಳಿಗೆ ಇಡೀ ಆವರಣದ ರಸ್ತೆ ತುಂಬೆಲ್ಲ ಕುರಿ ಸಂತೆ ಪ್ರಾರಂಭಗೊಳ್ಳುತ್ತದೆ. ಇಲ್ಲಿ ವಾಹನಗಳ ಸಂಚಾರ, ಜನರ ತಿರುಗಾಟವೂ ಸ್ತಬ್ಧಗೊಳ್ಳುತ್ತದೆ. ಎಲ್ಲೆಂದರಲ್ಲಿ ಕುರಿಗಳೋ ಕುರಿಗಳು. ಕುರಿಗಳ ಸಾಮ್ರಾಜ್ಯವೇ ಕಂಡು ಬರುತ್ತದೆ.

ಸುತ್ತ-ಮುತ್ತಲಿನ ಹೊರ ಜಿಲ್ಲೆ ತಾಲ್ಲೂಕು, ಸುತ್ತಲಿನ ಆಲಮೇಲ, ದೇವರಹಿಪ್ಪರಗಿ ತಾಲ್ಲೂಕುಗಳಿಂದ ಕುರಿ ವ್ಯಾಪಾರಿಗಳು ನೂರಾರು ಕುರಿಗಳೊಂದಿಗೆ ಇಲ್ಲಿ ಜಮಾಯಿಸುತ್ತಾರೆ. ಮುಂಜಾನೆ 11 ಗಂಟೆಯ ವರೆಗೆ ಮಾರುಕಟ್ಟೆ ಆವರಣ ಕುರಿದೊಡ್ಡಿಯಂತಾಗಿರುತ್ತದೆ.

ADVERTISEMENT

ಕುರಿಗಳ ಮಾರಾಟಕ್ಕಾಗಿ ಆವರಣದಲ್ಲಿ ಒಂದು ಸ್ಥಳ ಇದ್ದು ಕುರಿ ನಿಲ್ಲಿಸಲು ಎಲ್ಲ ಸೌಲಭ್ಯಗಳಿದ್ದರೂ ಯಾರೊಬ್ಬರೂ ಅತ್ತ ಸುಳಿಯುವುದೇ ಇಲ್ಲ. ರಸ್ತೆಯಲ್ಲಿ ಕುರಿ ಮಾರಾಟವನ್ನು ತಡೆಯಲು ನಡೆಸಿದ ಪ್ರಯತ್ನವೂ ವಿಫಲವಾಗಿದೆ.

’ಕುರಿ ಮಾರಾಟಗಾರರು ನಮ್ಮ ಸಿಬ್ಬಂದಿ ಜೊತೆ ಅಸಡ್ಡೆಯಾಗಿ ವರ್ತಿಸುತ್ತಾರೆ. ಪ್ರತಿ ಭಾನುವಾರಕ್ಕೊಮ್ಮೆ ಬೆಳಿಗ್ಗೆ ಪೊಲೀಸರು ಸ್ಥಳಕ್ಕೆ ಬಂದು ನಿಯಂತ್ರಣ ಮಾಡಬೇಕಿದೆ. ಆವರಣದ ರಸ್ತೆಯಲ್ಲಿ ನುಗ್ಗದಂತೆ ನೋಡಿಕೊಳ್ಳಬೇಕಾಗಿದೆ. ಪೊಲೀಸ್ ಠಾಣೆಗೆ ದೂರು ಸಲ್ಲಿಸಿ ಪೊಲೀಸರ ಸಹಕಾರ ಪಡೆದುಕೊಳ್ಳಲಾಗುವುದು’ ಎಂದು ಎಪಿಎಂಸಿ ಕಾರ್ಯದರ್ಶಿ ಬಸವರಾಜ ಜುಮನಾಳ ಪ್ರತಿಕ್ರಿಯಿಸಿದ್ದಾರೆ.

₹40 ಲಕ್ಷ ವೆಚ್ಚದಲ್ಲಿ ಕುರಿ ಪ್ಲಾಟಫಾರ್ಮ್ ನಿರ್ಮಾಣ

ಕೃಷಿ ಉತ್ಪನ್ನ ಮಾರುಕಟ್ಟೆ ಆವರಣದಲ್ಲಿ ರಸ್ತೆಯಲ್ಲಿಯೇ ಕುರಿಗಳ ಸಂತೆ ನಡೆಯುವುದು ನಿಜ. ಕುರಿ ಮಾರಾಟ ಮಾಡುವವರಿಗೆ ಸಾಕಷ್ಟು ಸಲ ಎಚ್ಚರಿಕೆ ನೀಡಿದರೂ ಪ್ರಯೋಜನವಾಗಿಲ್ಲ. ಕುರಿ ಸಂತೆಗಾಗಿಯೇ ₹40 ಲಕ್ಷ ರೂಪಾಯಿ ವೆಚ್ಚದಲ್ಲಿ ಕುರಿ ಪ್ಲಾಟ್‌ಫಾರ್ಮ್ ನಿರ್ಮಾಣ ಮಾಡಿ ತುಂಬಾ ವರ್ಷಗಳೇ ಆಗಿವೆ. ಆದರೆ, ಅದರ ಉಪಯೋಗ ಆಗುತ್ತಿಲ್ಲ. ಕುರಿ ವ್ಯಾಪಾರಿಗಳು ಅಲ್ಲಿ ಕುರಿಗಳನ್ನು ನಿಲ್ಲಿಸುತ್ತಿಲ್ಲ. ಹೀಗಾಗಿ ಸಾರ್ವಜನಿಕರು, ಎಪಿಎಂಸಿ ವ್ಯಾಪಾರಸ್ಥರಿಗೂ ತುಂಬಾ ತೊಂದರೆಯಾಗಿದೆ.
- ಬಸವರಾಜ ಜುಮನಾಳ, ಎಪಿಎಂಸಿ ಕಾರ್ಯದರ್ಶಿ
ಭಾನುವಾರಕ್ಕೊಮ್ಮೆ ಎಪಿಎಂಸಿ ವ್ಯಾಪಾರಸ್ಥರು ಆವರಣದಲ್ಲಿ ರಸ್ತೆಯಲ್ಲಿಯೇ ಕುರಿ ವ್ಯಾಪಾರ ನಡೆದಿರುತ್ತದೆ. ಕುರಿಗಳ ವ್ಯಾಪಾರಕ್ಕಾಗಿ ನಿಗದಿತ ಸ್ಥಳ ಇದ್ದರೂ ಅಲ್ಲಿಗೆ ಹೋಗುತ್ತಿಲ್ಲ. ನಮ್ಮ ವ್ಯಾಪಾರ ಕೆಲವು ಗಂಟೆಗಳ ಕಾಲ ಸ್ಥಗಿತಗೊಳ್ಳುತ್ತದೆ. ಆವರಣದಲ್ಲಿ ಲಾರಿಗಳು ಬರಲು ನಿರ್ಬಂಧ ಎಂಬಂತಾಗಿದೆ. ಹೀಗಾಗಿ ಕುರಿ ಸಂತೆಗಾಗಿ ಪಟ್ಟಣದ ಹೊರಗಡೆ ಪ್ರತ್ಯೇಕ ಜಾಗೆ ಗುರುತಿಸುವುದು ಅಗತ್ಯವಾಗಿದೆ. ಈ ಕುರಿತು ಶಾಸಕರಿಗೆ ಮನವಿ ಮಾಡಲಾಗುವುದು.
– ಉಮೇಶ ಜೋಗೂರ, ಎಪಿಎಂಸಿ ವರ್ತಕರ ಸಂಘದ ಅಧ್ಯಕ್ಷ
ಕುರಿ ಸಂತೆಯನ್ನು ರಸ್ತೆಯಲ್ಲಿ ಮಾಡುವುದಕ್ಕೆ ಕಡಿವಾಣ ಹಾಕುವ ವಿಷಯಕ್ಕೆ ಸಂಬಂಧಿಸಿದಂತೆ ಮುಂಬರುವ ಆಡಳಿತ ಮಂಡಳಿಯ ಸಭೆಯಲ್ಲಿ ಚರ್ಚಿಸಲಾಗುವುದು
– ಸದ್ದಾಂಪಟೇಲ್ ಬಿರಾದಾರ, ಎಪಿಎಂಸಿ ಸದಸ್ಯ
ಸಿಂದಗಿ ಪಟ್ಟಣದ ಕೃಷಿ ಉತ್ಪನ್ ಮಾರುಕಟ್ಟೆ ಆವರಣದ ಮುಖ್ಯಧ್ವಾರದಲ್ಲಿ ರಸ್ತೆಯಲ್ಲಿಯೇ ಕುರಿಗಳ ಸಂತೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.