ADVERTISEMENT

ಮಹಾದೇವ ಭೈರಗೊಂಡ ಶೂಟ್ ಔಟ್ ಪ್ರಕರಣ: ಮತ್ತೆ ಐವರ ಬಂಧನ

ಹೆಚ್ಚಿನ ಚಿಕಿತ್ಸೆಗೆ ಮಹಾದೇವ ಸಾಹುಕಾರ ಭೈರಗೊಂಡ ಬೇರೆಡೆಗೆ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 7 ನವೆಂಬರ್ 2020, 11:30 IST
Last Updated 7 ನವೆಂಬರ್ 2020, 11:30 IST
ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಬಂಧಿಸಿರುವ ಐವರು ಆರೋಪಿಗಳು ಮತ್ತು ವಶಪಡಿಸಿಕೊಳ್ಳಲಾಗಿರುವ ಮಾರಕಾಸ್ತ್ರ –ಪ್ರಜಾವಾಣಿ ಚಿತ್ರ
ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ ಪೊಲೀಸರು ಬಂಧಿಸಿರುವ ಐವರು ಆರೋಪಿಗಳು ಮತ್ತು ವಶಪಡಿಸಿಕೊಳ್ಳಲಾಗಿರುವ ಮಾರಕಾಸ್ತ್ರ –ಪ್ರಜಾವಾಣಿ ಚಿತ್ರ   

ವಿಜಯಪುರ: ಕಾಂಗ್ರೆಸ್ ಮುಖಂಡ, ಭೀಮಾ ತೀರದ ರೌಡಿ ಶೀಟರ್ ಮಹಾದೇವ ಸಾಹುಕಾರ ಭೈರಗೊಂಡ ಮೇಲಿನ ಗುಂಡಿನ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ.

ಅತಾಲಟ್ಟಿ ಗ್ರಾಮದ ಯಾಸೀನ್‌ ರಂಜಾನ್ ಸಾಬ್ ದಂದರಗಿ (25), ಕರೆಪ್ಪ ಊರ್ಫ್ ಗೂಳಿ ಮಹಾದೇವ ಸೊನ್ನದ (25), ಸಿದ್ದು ಊರ್ಫ್ ಸಿದ್ದರಾಯ ಬಸಪ್ಪ ಬೊಮ್ಮನಜೋಗಿ (34), ಅಲಿಯಾಬಾದ್‌ ಗ್ರಾಮದ ಸಂಜು ಊರ್ಫ್ ಸಚಿನ್ ತುಕಾರಾಮ ಮಾನವರ (28) ಹಾಗೂ ಚಡಚಣದ ರವಿ ಧರೆಪ್ಪ ಬಂಡಿ (20) ಬಂಧಿತ ಆರೋಪಿಗಳು.

ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್, ಬಂಧಿತ ಆರೋಪಿಗಳಿಂದ ಎರಡು ಕಂಟ್ರಿ ಪಿಸ್ತೂಲ್, ಐದು ಜೀವಂತ ಗುಂಡು, 4 ಮೊಬೈಲ್, 1 ಆಟೊ ರಿಕ್ಷಾ, 1 ಮಚ್ಚು ವಶಕ್ಕೆ ಪಡೆಯಲಾಗಿದೆ ಎಂದು ತಿಳಿಸಿದರು.

ADVERTISEMENT

ಆರೋಪಿಗಳನ್ನು ಪತ್ತೆ ಹಚ್ಚುವಲ್ಲಿ ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಡಾ.ರಾಮ ಅರಸಿದ್ದಿ, ಡಿವೈಎಸ್‌ಪಿ ಲಕ್ಷ್ಮಿನಾರಾಯಣ, ಸಿಪಿಐಗಳಾದ ಎಂ.ಕೆ. ದ್ಯಾಮಣ್ಣವರ, ರವೀಂದ್ರ‌ ನಾಯ್ಕೋಡಿ, ಸುನೀಲ‌ ಕಾಂಬಳೆ, ಸುರೇಶ ಬಂಡೆಗುಂಬಳ, ಬಸವರಾಜ ಮೂಕರ್ತಿಹಾಳ ತಂಡ ಯಶಸ್ವಿಯಾಗಿದ್ದು, ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಬೈರಗೊಂಡ ಸ್ಥಳಾಂತರ: ದುಷ್ಕರ್ಮಿಗಳು ಗುಂಡೇಟಿನಿಂದ ತೀವ್ರವಾಗಿ ಗಾಯಗೊಂಡು ನಗರ ಬಿಎಲ್ ಡಿಇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಹಾದೇವ ಭೈರಗೊಂಡ ಅವರನ್ನು ಹೆಚ್ಷಿನ ಚಿಕಿತ್ಸೆಗಾಗಿ ಹಾಗೂ ಭದ್ರತೆ ಉದ್ದೇಶದಿಂದ ಬೇರೆಡೆಗೆ ಸ್ಥಳಾಂತರಿಸಲಾಗಿದೆ ಎಂದು ಎಸ್‌ಪಿ ಅನುಪಮ್‌ ಹೇಳಿದರು.

ಆದರೆ, ಎಲ್ಲಿಗೆ ಸ್ಥಳಾಂತರಿಸಲಾಗಿದೆ ಎಂಬುದುನ್ನು ತಿಳಿಸಲು ಅವರು ಭದ್ರತೆ ಉದ್ದೇಶದಿಂದ ನಿರಾಕರಿಸಿದರು.

ಕಾನ್‌ಸ್ಟೆಬಲ್‌ ವಿರುದ್ಧ ಕ್ರಮಕ್ಕೆ ಶಿಫಾರಸು

ವಿಜಯಪುರ: ‘ಸಿಂದಗಿ ಪೊಲೀಸರು ತಮ್ಮ ತಂದೆಯನ್ನು ಕೊಲೆ ಮಾಡಿದ್ದಾರೆ’ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ವಿಡಿಯೊ ಹರಿಬಿಟ್ಟಿದ್ದ ಬೆಂಗಳೂರು ಯಲಹಂಕ ಠಾಣೆ ಹೆಡ್‌ ಕಾನ್‌ಸ್ಟೆಬಲ್‌ ಬಸವರಾಜ ಪಾಟೀಲ ಅವರ ಆರೋಪ ಸತ್ಯಕ್ಕೆ ದೂರವಾಗಿದ್ದು, ಶಿಸ್ತುಕ್ರಮ ಕೈಗೊಳ್ಳುವಂತೆ ಬೆಂಗಳೂರು ಪೊಲೀಸ್‌ ಕಮಿಷನರ್‌ಗೆ ದೂರು ನೀಡಲಾಗುವುದು ಎಂದು ಎಸ್‌ಪಿ ಅನುಮಪ್‌ ಅಗರವಾಲ್‌ ತಿಳಿಸಿದರು.

ಪಾಟೀಲ ಆರೋಪದ ಹಿನ್ನೆಲೆಯಲ್ಲಿ ಸಮಗ್ರ ವಿಚಾರಣೆ ನಡೆಸಲಾಗಿದ್ದು, ಅವರ ತಂದೆ ಹನುಮಂತರಾಯ ಪಾಟೀಲ ಹಾಗೂ ಅವರ ಮೂವರು ಸಹೋದರರ ನಡುವೆ 13 ವರ್ಷಗಳಿಂದ ಆಸ್ತಿ ವಿವಾದವಿದ್ದು, ಪ್ರಕರಣ ಕೋರ್ಟ್ ಮೆಟ್ಟಿಲೇರಿತ್ತು. 2014ರಲ್ಲಿ ಪಾಟೀಲ ಅವರ ಸಹೋದರ ಶಿವಪುತ್ರ ಎಂಬುವವರ ಪರವಾಗಿ ಆದೇಶ ಬಂದಿದೆ ಎಂದು ಹೇಳಿದರು.

2016ರಲ್ಲಿ ಹನುಮಂತರಾಯ ಪಾಟೀಲ ಹೃದಯಾಘಾತದಿಂದ ಸಾವನಪ್ಪಿದ್ದಾರೆ. ಅವರು ಆತ್ಮಹತ್ಯೆ ಅಥವಾ ಕೊಲೆಯಾಗಿದ್ದಾರೆ ಎಂಬ ಬಗ್ಗೆ ಯಾರೂ ದೂರು ನೀಡಿಲ್ಲ. ಆದರೂ ಸಹ ಹೆಡ್‌ ಕಾನ್‌ಸ್ಟೆಬಲ್‌ ಅನಗತ್ಯವಾಗಿ ಪೊಲೀಸ್‌ ಇಲಾಖೆ ವಿರುದ್ಧ ಆರೋಪ ಮಾಡುತ್ತಾ ಬಂದಿದ್ದಾರೆ. ಈ ಸಂಬಂಧ ವಿಚಾರಣೆಗೂ ಅವರು ಹಾಜರಾಗಿಲ್ಲ ಎಂದು ತಿಳಿಸಿದರು.

ಇಲಾಖೆಯ ಸಿಬ್ಬಂದಿ ಎಂದು ಇದುವರೆಗೆ ಗೌರವ ನೀಡಲಾಗಿತ್ತು. ಆದರೆ, ಇಲಾಖೆ ವಿರುದ್ಧವೇ ಸುಳ್ಳು ಆರೋಪ ಮಾಡುತ್ತಿರುವುದು ಖಂಡನೀಯ. ಈ ಕುರಿತು ವಿಸ್ತೃತ ವರದಿಯನ್ನು ಬೆಂಗಳೂರು ಪೊಲೀಸ್‌ ಕಮಿಷನರ್‌ಗೆ ಕಳುಹಿಸಲಾಗುವುದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.