ಸಿಂದಗಿ: ಕಂದಾಯ ಇಲಾಖೆಯ 1 ಎಕರೆ 14 ಗುಂಟೆ ಪ್ರದೇಶದಲ್ಲಿನ ಹಳೆಯ ತಹಶೀಲ್ದಾರ್ ಕಾರ್ಯಾಲಯ ಸ್ಥಳಾಂತರಗೊಂಡ ನಂತರ ಖಾಲಿ ಉಳಿದುಕೊಂಡಿತ್ತು. ಈ ಜಾಗೆಯನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂಬ ಉದ್ದೇಶದಿಂದಾಗಿ ಸರ್ಕಾರ ಮಟ್ಟದಲ್ಲಿ ಈ ಪ್ರದೇಶವನ್ನು ಪುರಸಭೆಗೆ ಹಸ್ತಾಂತರಿಸಿಕೊಂಡು ಇಲ್ಲಿ ₹ 27.68 ಕೋಟಿ ವೆಚ್ಚದಲ್ಲಿ 132 ಮಳಿಗೆಗಳ ನಿರ್ಮಾಣ ಮಾಡುವ ಪ್ರಸ್ತಾವ ಸಲ್ಲಿಸಲಾಗಿತ್ತು. ಈಗ ಪ್ರಥಮ ಹಂತದಲ್ಲಿ 30 ಮಳಿಗೆಗಳ ನಿರ್ಮಾಣಕ್ಕಾಗಿ ₹ 5 ಕೋಟಿ ಅನುದಾನ ಬಿಡುಗಡೆಗೊಂಡಿದೆ ಎಂದು ಶಾಸಕ ಅಶೋಕ ಮನಗೂಳಿ ಹೇಳಿದರು.
ಪಟ್ಟಣದ ಕಂದಾಯ ಇಲಾಖೆಯ ಹಳೆಯ ತಹಶೀಲ್ದಾರ್ ಕಾರ್ಯಾಲಯದ ಪ್ರದೇಶದಲ್ಲಿ ಬುಧವಾರ ಮೆಗಾ ಮಾರ್ಕೆಟ್ ಕಟ್ಟಡ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.
ಇನ್ನು ಒಂದೆರಡು ತಿಂಗಳಲ್ಲಿ ಇನ್ನೂ ₹ 10 ಕೋಟಿ ಬಿಡುಗಡೆಗೊಳಿಸುವ ಮೂಲಕ ಎಲ್ಲರ ಕಲ್ಪನೆಗೂ ಮೀರಿ ಸುಸಜ್ಜಿತವಾದ ಮೆಗಾ ಮಾರ್ಕೆಟ್ ಅನ್ನು ನನ್ನ ಅವಧಿಯಲ್ಲಿ ನಿರ್ಮಾಣ ಮಾಡುವುದು ನನ್ನ ಸಂಕಲ್ಪ. ಈ ಪ್ರದೇಶದ ಸುತ್ತ ಹಲವಾರು ವರ್ಷಗಳಿಂದ ಸಣ್ಣ, ಸಣ್ಣ ವ್ಯಾಪಾರ ಮಾಡುತ್ತಿದ್ದ ಅಂಗಡಿಗಳನ್ನು ತೆರವುಗೊಳಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಇದೇ ಮಾರ್ಕೆಟ್‌ನಲ್ಲಿ ಅವರಿಗೆ ಕಡಿಮೆ ದರದ ಬಾಡಿಗೆಯಲ್ಲಿ ನೀಡಲಾಗುವುದು ಎಂದು ಭರವಸೆ ನೀಡಿದರು.
ಸರ್ಕಾರದಲ್ಲಿ ದುಡ್ಡೆ ಇಲ್ಲ ಎಲ್ಲ ಹಣ ಗ್ಯಾರಂಟಿಗಾಗಿ ಬಳಕೆಯಾಗಿದ್ದರಿಂದ ಅಭಿವೃದ್ಧಿ ಆಗುತ್ತಿಲ್ಲ ಎಂದು ವಿರೋದಪಕ್ಷ ವ್ಯವಸ್ಥಿತವಾಗಿ ಸರ್ಕಾರದ ವಿರುದ್ಧ ಟೀಕೆ ಮಾಡುತ್ತಿದೆ. ಅಭಿವೃದ್ಧಿಗಾಗಿ ಸರ್ಕಾರದಲ್ಲಿ ಸಾಕಷ್ಟು ಹಣವಿದೆ. ರಾಜಕಾರಣದಲ್ಲಿ ಟೀಕೆ-ಟಿಪ್ಪಣೆ ಸಹಜ ಅದಕ್ಕೆ ಸ್ವಾಗತಿಸುವೆ. ಅಭಿವೃದ್ಧಿಯೇ ನನ್ನ ಗುರಿ ಎಂದು ವಿರೋದಪಕ್ಷದ ಟೀಕೆಗೆ ಉತ್ತರಿಸಿದರು.
ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಡಾ.ಶಾಂತವೀರ ಮನಗೂಳಿ ಮಾತನಾಡಿ, ಸರ್ಕಾರವನ್ನು ಅಭಿನಂದಿಸಿದರು. ಪುರಸಭೆ ಸದಸ್ಯ ಸಾಯಬಣ್ಣ ಪುರದಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪುರಸಭೆ ಉಪಾಧ್ಯಕ್ಷ ಸಂದೀಪ ಚೌರ ಒಳಗೊಂಡಂತೆ ಸದಸ್ಯರು, ಆಶ್ರಯ ಸಮಿತಿ ಸದಸ್ಯರು, ಪುರಸಭೆ ಅಧಿಕಾರಿ ವರ್ಗ ವೇದಿಕೆಯಲ್ಲಿದ್ದರು.
ಸಿಂದಗಿ ಬಸವೇಶ್ವರ ವೃತ್ತದಲ್ಲಿ ಪುರಸಭೆ ವತಿಯಿಂದ ₹ 1.20 ಕೋಟಿ ವೆಚ್ಚದಲ್ಲಿ 20 ವ್ಯಾಪಾರಿ ಮಳಿಗೆಗಳು ಬಸ್ ತಂಗುದಾಣ ನಿರ್ಮಾಣ ಕಾಮಗಾರಿಗೆ ಶೀಘ್ರದಲ್ಲಿ ಟೆಂಡರ್ ಕರೆಯಲಾಗುವುದುಡಾ.ಶಾಂತವೀರ ಮನಗೂಳಿ ಪುರಸಭೆ ಅಧ್ಯಕ್ಷ