ADVERTISEMENT

ಸಿಂದಗಿ ಕ್ಷೇತ್ರ: ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಬದಲಿಸಲು ಒತ್ತಾಯ

ಮೂಲ ಕಾಂಗ್ರೆಸ್ಸಿಗರಿಗೇ ಟಿಕೆಟ್‌ ನೀಡಲು ಮಾಜಿ ಶಾಸಕ ಶರಣಪ್ಪ ಸುಣಗಾರ ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2021, 21:19 IST
Last Updated 20 ಮಾರ್ಚ್ 2021, 21:19 IST
ಶರಣಪ್ಪ ಸುಣಗಾರ
ಶರಣಪ್ಪ ಸುಣಗಾರ   

ಸಿಂದಗಿ(ವಿಜಯಪುರ): ಸಿಂದಗಿ ಉಪ ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಅಭ್ಯರ್ಥಿ ಎಂದು ಈಗಾಗಲೇ ಘೋಷಣೆ ಮಾಡಿರುವ ವಲಸಿಗ ಅಶೋಕ ಮನಗೂಳಿ ಹೆಸರನ್ನು ಕೈಬಿಟ್ಟು, ಮೂಲ ಕಾಂಗ್ರೆಸ್ಸಿಗರಲ್ಲಿ ಯಾರಿಗಾದರೂ ಟಿಕೆಟ್ ನೀಡಬೇಕು ಎಂದು ಮಾಜಿ ಶಾಸಕ ಶರಣಪ್ಪ ಸುಣಗಾರ ಆಗ್ರಹಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ಚುನಾವಣೆಗೂ ಮುನ್ನವೇ ಅಭ್ಯರ್ಥಿಯ ಹೆಸರು ಘೋಷಣೆ ಮಾಡಿರುವುದು ಕಾಂಗ್ರೆಸ್ ಪಕ್ಷದ ಇತಿಹಾಸದಲ್ಲಿಯೇ ಕಂಡರಿಯದ ಪ್ರಸಂಗ. ಜಿಲ್ಲೆಯ ಕಾಂಗ್ರೆಸ್ ನಾಯಕರ ಗಮನಕ್ಕೂ ತಾರದೇ ರಾಜ್ಯದ ಇಬ್ಬರು ನಾಯಕರ ಒತ್ತಡದಿಂದ ಎಐಸಿಸಿಯಲ್ಲಿ ಹೆಸರು ಘೋಷಣೆ ಮಾಡಲಾಗಿದೆ ಎಂದು ದೂರಿದರು.

‘25-30 ವರ್ಷಗಳಿಂದ ಕಾಂಗ್ರೆಸ್ ಪಕ್ಷವನ್ನು ಸಂಘಟಿಸಿ ಬಲಿಷ್ಠಗೊಳಿಸಿದ ಮೂಲ ಕಾಂಗ್ರೆಸ್ಸಿಗರನ್ನು ಕೈ ಬಿಟ್ಟು, ನಿನ್ನೆ-ಮೊನ್ನೆ ಪಕ್ಷಕ್ಕೆ ಸೇರ್ಪಡೆಗೊಂಡ ವಲಸಿಗರಿಗೆ ಟಿಕೆಟ್ ನೀಡುವುದು ನ್ಯಾಯವಲ್ಲ’ ಎಂದು ವಿರೋಧ ವ್ಯಕ್ತಪಡಿಸಿದರು.

ADVERTISEMENT

‘ಸಿಂದಗಿ ಮತಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಅಹಿಂದ ವರ್ಗಕ್ಕೆ ಮೀಸಲಿಡಬೇಕು ಎಂಬುದು ಕಾರ್ಯಕರ್ತರ ಒತ್ತಡವಾಗಿದೆ. ಹಾಲುಮತ, ಎಸ್.ಸಿ, ಮುಸ್ಲಿಂ, ತಳವಾರ ಯಾವುದೇ ಸಮುದಾಯದ ಮೂಲ ಕಾಂಗ್ರೆಸ್ಸಿಗರಿಗೆ ಟಿಕೆಟ್ ನೀಡಿದರೆ ಗೆಲ್ಲಿಸುವ ಜವಾಬ್ದಾರಿ ನಮ್ಮದು’ ಎಂದರು.

‘ಶೀಘ್ರದಲ್ಲಿಯೇ 35 ಸಾವಿರಕ್ಕೂ ಅಧಿಕ ಕಾರ್ಯಕರ್ತರ ಸಭೆ ಸೇರಿಸಿ, ಅಶೋಕ ಮನಗೂಳಿ ಹೆಸರನ್ನು ಕೈ ಬಿಡಬೇಕು ಎಂದು ಹೈಕಮಾಂಡ್ ಮೇಲೆ ಒತ್ತಡ ಹಾಕಲಾಗುವುದು. ಇಷ್ಟಾದರೂ ಅಭ್ಯರ್ಥಿ ಹೆಸರು ಬದಲಿಸದಿದ್ದರೆ ಕಾರ್ಯಕರ್ತರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ’ ಎಂದು ಸುಣಗಾರ ಎಚ್ಚರಿಕೆ ನೀಡಿದರು.

ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳಿಗೆ ಯಾವ ಕಾರಣಕ್ಕೂ ತಾವು ಹೋಗುವುದಿಲ್ಲ. ಅಂಥ ಸಂದರ್ಭ ಬಂದರೆ ಕಾರ್ಯಕರ್ತರ ಒಪ್ಪಿಗೆ ಪಡೆದು ಮುಂದೆ ಹೆಜ್ಜೆ ಇಡಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.