
ಸಿಂದಗಿ: ಜಿಲ್ಲೆಯಲ್ಲಿಯೇ ಅತ್ಯುತ್ತಮ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಎಂದೇ ಸಿಂದಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆ ಪ್ರಸಿದ್ಧವಾಗಿದೆ. ಕಳೆದ ಎರಡು ವರ್ಷಗಳಿಂದ ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಚಿತ್ರಣ ಬದಲಾದಂತೆ ಕಾಣುತ್ತಿದೆ. ಆದರೂ ಕೆಲವು ದೂರುಗಳು ಇನ್ನೂ ಕೇಳಿ ಬರುತ್ತಿವೆ. ಅದರಲ್ಲೂ ವೈದ್ಯರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಬರುವುದಿಲ್ಲ ಎಂಬುದು ಪ್ರಮುಖ ದೂರು ಇದೆ.
ಸರ್ಕಾರಿ ಆಸ್ಪತ್ರೆ ಎಂದರೆ ಜನ ಮೂಗು ಮುರಿಯುವ ಕಾಲವಿತ್ತು. ಆದರೆ, ಈಗ ಸರ್ಕಾರಿ ಆಸ್ಪತ್ರೆಯಲ್ಲಿಯೂ ಎಲ್ಲ ವೈದ್ಯಕೀಯ ಸೌಲಭ್ಯಗಳು, ತಜ್ಞ ವೈದ್ಯರನ್ನು ಕಾಣಬಹುದು. ಆಸ್ಪತ್ರೆಯ ಆವರಣದಲ್ಲಿ ಉತ್ತಮ ಪರಿಸರ ನಿರ್ಮಾಣ ಮಾಡಲಾಗಿದೆ.
ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಬಗ್ಗೆಯೂ ಸಾರ್ವಜನಿಕರಲ್ಲಿ ಅಷ್ಟಾಗಿ ಒಳ್ಳೆಯ ಅಭಿಪ್ರಾಯ ಇರಲಿಲ್ಲ. ವೈದ್ಯರು ಇರುವುದಿಲ್ಲ ಎಂಬ ದೂರು ಸಾಮಾನ್ಯವಾಗಿತ್ತು.
ಈಗೀಗ ಇಲ್ಲಿಯ ಸರ್ಕಾರಿ ಆಸ್ಪತ್ರೆಯಲ್ಲಿ ನಿತ್ಯ ರೋಗಿಗಳು ಸಾಕಷ್ಟು ಪ್ರಮಾಣದಲ್ಲಿ ಕಂಡು ಬರುತ್ತಾರೆ. ನಿತ್ಯ 450 ರಷ್ಟು ರೋಗಿಗಳು ತಪಾಸಣೆಗೆ ನೋಂದಣಿ ಮಾಡಿಕೊಂಡಿರುತ್ತಾರೆ.
ಈ ಆಸ್ಪತ್ರೆಗೆ ಸಿಂದಗಿ ತಾಲ್ಲೂಕು ಒಳಗೊಂಡಂತೆ ಕಲಬುರಗಿ ಜಿಲ್ಲೆಯ ಅಫಜಲಪುರ, ಜೇವರ್ಗಿ, ಯಾದಗಿರಿ ಜಿಲ್ಲೆಯ ಕೆಲವು ಹಳ್ಳಿಗಳಿಂದ ಚಿಕಿತ್ಸೆಗಾಗಿ ರೋಗಿಗಳು ಬರುತ್ತಿದ್ದಾರೆ ಎಂಬುದಾಗಿ ಮುಖ್ಯ ಆಡಳಿತ ವೈದ್ಯಾಧಿಕಾರಿ ಶಂಕರರಾವ್ ದೇಶಮುಖ ಅವರಿಂದ ತಿಳಿದು ಬಂದಿತು.
2662 ಎಚ್ಐವಿ ಸೋಂಕಿತರು ನೋಂದಣಿಯಾಗಿದೆ. ಇದರಲ್ಲಿ 1537 ಜನರು ಮಾತ್ರೆಗಳನ್ನು ನಿಯಮಿತವಾಗಿ ಪಡೆದುಕೊಳ್ಳುತ್ತಾರೆ.
ಚಿಕ್ಕಮಕ್ಕಳ ಎನ್ಐಸಿಯು ಘಟಕ ಬಡಜನತೆಗೆ ತುಂಬಾ ಉಪಯುಕ್ತವಾಗಿದೆ. ನವಜಾತ ಶಿಶುಗೆ ವಾರ್ಮ್‌ದಲ್ಲಿ ನಿಗಾ ಇಡಲು ಖಾಸಗಿ ಆಸ್ಪತ್ರೆಯಲ್ಲಿ ₹5 ಸಾವಿರ ಚಾರ್ಜ್ ಮಾಡುತ್ತಾರೆ. ಆದರೆ ಇಲ್ಲಿ ಉಚಿತವಿದೆ.
ಆಸ್ಪತ್ರೆಯಲ್ಲಿ ಸ್ಕ್ಯಾನಿಂಗ್‌ಗಾಗಿ ಇನ್ನೋಬ್ಬ ಸ್ತ್ರೀರೋಗ ವೈದ್ಯೆ ಅಗತ್ಯತೆ ಇದೆ ಎಂದು ಆಸ್ಪತ್ರೆ ಮೂಲದಿಂದ ತಿಳಿದು ಬಂದಿದೆ. ಈಗ ಸೇವೆ ಸಲ್ಲಿಸುವ ಸ್ತ್ರೀರೋಗ ವೈದ್ಯರು ಜಿಲ್ಲೆಯ ಎಲ್ಲ ಸರ್ಕಾರಿ ಆಸ್ಪತ್ರೆಗಳಲ್ಲಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡುತ್ತಿರುವ ಏಕಮೇವ ವೈದ್ಯೆ. ಇವರು ತಮ್ಮ 20 ವರ್ಷದ ಸೇವೆಯಲ್ಲಿ 2 ಲಕ್ಷ ಶಸ್ತ್ರಚಿಕಿತ್ಸೆ ಮಾಡುವ ಮೂಲಕ ಅಗಾಧ ಸೇವೆ ಸಲ್ಲಿಸುತ್ತಿದ್ದಾರೆ.
ವಿಧಾನ ಪರಿಷತ್ ಸದಸ್ಯರಾಗಿದ್ದ ಅರುಣ ಶಹಾಪುರ ಅವಧಿಯಲ್ಲಿ 2022 ರಲ್ಲಿ ಇಲ್ಲಿಯ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿ ಚಿಕ್ಕಮಕ್ಕಳ ಪ್ರತ್ಯೇಕ ವಾರ್ಡ್ ಕಟ್ಟಡ ನಿರ್ಮಾಣವಾಗಿದ್ದರೂ ಈ ವರೆಗೂ ಅದು ಸದ್ಭಳಕೆಯಾಗಿಲ್ಲ. ಅದು ಮೀಟಿಂಗ್ ಹಾಲ್ ಆಗಿದೆ.
ಶಾಸಕ ಅಶೋಕ ಮನಗೂಳಿ ಸರ್ಕಾರಿ ಆಸ್ಪತ್ರೆಯ ಬಗ್ಗೆ ವಿಶೇಷ ಕಾಳಜಿ ವಹಿಸಿ ಆರೋಗ್ಯ ರಕ್ಷಾ ಸಮಿತಿ ಸದಸ್ಯರೊಂದಿಗೆ ವೈದ್ಯರು, ಸಿಬ್ಬಂದಿ ಸಭೆ ನಡೆಸಿ ಸುಧಾರಣೆಗಾಗಿ ಪ್ರಯತ್ನ ಪಡುತ್ತಿದ್ದಾರೆ. ಸರ್ಕಾರದಿಂದ ಹೆಚ್ಚಿನ ಅನುದಾನ ತರುವಲ್ಲಿ ಯಶಸ್ವಿಯಾಗಿದ್ದಾರೆ. ಹೀಗಾಗಿ ಆಸ್ಪತ್ರೆ ಬದಲಾಗುತ್ತಿದೆ ಎಂಬ ಮಾತೂ ಕೇಳಿ ಬರುತ್ತಿದೆ.
‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಸಿಂದಗಿ ತಾಲ್ಲೂಕು ಆಸ್ಪತ್ರೆ ಮುಖ್ಯ ಆಡಳಿತ ವೈದ್ಯಾಧಿಕಾರಿ ಡಾ.ಶಂಕರರಾವ್ ದೇಶಮುಖ, ‘ಒಪಿಡಿಯಲ್ಲಿ ನಿತ್ಯ 450 ರೋಗಿಗಳು ಚಿಕಿತ್ಸೆ ಪಡೆಯುತ್ತಾರೆ. 80-100ರ ವರೆಗೆ ಲ್ಯಾಬ್ ನಲ್ಲಿ ರಕ್ತ ಉಚಿತ ತಪಾಸಣೆ ಮಾಡಲಾಗುವುದು. ಪ್ರತಿ ತಿಂಗಳು 120-125 ರವರೆಗೆ ಹೆರಿಗೆಗಳಾಗುತ್ತವೆ. 240 ಸಂತಾನಹರಣ ಶಸ್ತ್ರಚಿಕಿತ್ಸೆಗಳು ನಡೆಯುತ್ತವೆ. ಒಂದು ವರ್ಷದಲ್ಲಿ 87 ಗರ್ಭಿಣಿಯರಿಗೆ ಉಚಿತವಾಗಿ ರಕ್ತದ ವ್ಯವಸ್ಥೆ ಮಾಡಲಾಗಿದೆ. 210 ಜನ ರಕ್ತಹೀನತೆಯಿಂದ ಬಳಲುವವರಿಗೆ ರಕ್ತ ಪೂರೈಕೆ ಮಾಡಲಾಗಿದೆ. ಥಲಸೇಮಿಯಾ ರೋಗದಿಂದ ಬಳಲುವ 10 ಜನರಿಗೆ ರಕ್ತ ನೀಡಲಾಗಿದೆ. ರಕ್ತ ತಪಾಸಣಾ ಪ್ರಯೋಗಾಲಯ ಘಟಕ 24X7 ಕಾರ್ಯ ನಿರ್ವಹಿಸುತ್ತದೆ’ ಎಂದು ತಿಳಿಸಿದರು.
‘ಎಲ್ಲ ವೈದ್ಯಕೀಯ ಸೌಲಭ್ಯ, ತಜ್ಞ ವೈದ್ಯರು ಇರುವ ಸರ್ಕಾರಿ ಆಸ್ಪತ್ರೆಯ ಸದುಪಯೋಗ ಬಡಜನತೆ ಪಡೆದುಕೊಳ್ಳಲಿ’ ಎಂದು ಶಾಸಕ ಅಶೋಕ ಮನಗೂಳಿ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.
ಸಿಂದಗಿ ಸರ್ಕಾರಿ ಆಸ್ಪತ್ರೆಯಲ್ಲಿ ಅಗತ್ಯ ಕಾರ್ಯಗಳಿಗಾಗಿ ಒಟ್ಟು ₹3 ಕೋಟಿ ಒದಗಿಸಲಾಗಿದೆ. ₹45 ಲಕ್ಷ ವೆಚ್ಚದ ಹೈಟೆಕ್ ಆಂಬುಲೆನ್ಸ್ ಒದಗಿಸಲಾಗಿದೆ. ಆಸ್ಪತ್ರೆಯಲ್ಲಿ ಸಾಕಷ್ಟು ಸುಧಾರಣೆ ಕಂಡಿದೆ. ಇನ್ನೂ ಹೆಚ್ಚಿನ ಸುಧಾರಣೆಗಾಗಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿರುವೆಅಶೋಕ ಮನಗೂಳಿ ಶಾಸಕ ಸಿಂದಗಿ
ಸಿಂದಗಿ ತಾಲ್ಲೂಕು ಸರ್ಕಾರಿ ಆಸ್ಪತ್ರೆಯಲ್ಲಿ ಸರ್ಜನ್ ಇದ್ದಾರೆ ಶಸ್ತ್ರಚಿಕಿತ್ಸೆ ನಡೆಯುತ್ತವೆ. ಸಿಜೇರಿಯನ್ ಹೆರಿಗೆಗಳನ್ನು ಈಗ ಇಲ್ಲಿ ತಿಂಗಳಿಗೆ 25-30 ಮಾಡಲಾಗುತ್ತಿದೆ. ಡಯಾಲಿಸಿಸ್ ರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆಡಾ.ಸಂಪತ್ ಗುಣಾರಿ ಜಿಲ್ಲಾ ಆರೋಗ್ಯಾಧಿಕಾರಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವಿಜಯಪುರ
ತಾಲ್ಲೂಕು ಆಸ್ಪತ್ರೆಯಲ್ಲಿರುವ ಸೌಲಭ್ಯಗಳು
*4 ಡಯಾಲಿಸಿಸ್ ಹಾಸಿಗೆ
*ಆರು ಹಾಸಿಗೆ ಚಿಕ್ಕಮಕ್ಕಳ ಎನ್ಐಸಿಯು
*ದೃಷ್ಟಿಕೇಂದ್ರ
*24X7 ಲ್ಯಾಬ್ ಸೇವೆ
*ಸಾಮಾನ್ಯ ಶಸ್ತ್ರಚಿಕಿತ್ಸೆ
*ಸಿಜೇರಿಯನ್ ಹೆರಿಗೆ
*ಸಂತಾನಹರಣ ಶಸ್ತ್ರಚಿಕಿತ್ಸೆ
*ಚರ್ಮರೋಗ ಚಿಕಿತ್ಸೆ
*ಹಲ್ಲಿನ ಚಿಕಿತ್ಸೆ
*ಎಆರ್‌ಟಿ ಕೇಂದ್ರ
*ಮಾನಸಿಕ ರೋಗ ತಜ್ಞರ ಭೇಟಿ
ಸಿಂದಗಿ ತಾಲ್ಲೂಕು ಆಸ್ಪತ್ರೆ ಬೇಡಿಕೆಗಳು
*ಇನ್ನೊಂದು ಆಪರೇಷನ್ ಥೇಟರ್
*ಎಂ.ಡಿ ಸರ್ಜನ್
*ಇ ಆ್ಯಂಡ್ ಟಿ ಸರ್ಜನ್
*ಇನ್ನೊಬ್ಬ ಸ್ತ್ರೀರೋಗ ವೈದ್ಯೆ
*ಪೂರ್ಣಾವಧಿ ರೆಡಿಯಾಲಾಜಿಸ್ಟ್
*ಇನ್ನೊಂದು ಅರವಳಿಕೆ ಹುದ್ದೆ
*ಏಕ್ಸರೆ ಯಂತ್ರ ತಂತ್ರಜ್ಞರ ಹುದ್ದೆ
*ವೈದ್ಯರು ಸಿಬ್ಬಂದಿ ವಾಸಕ್ಕಾಗಿ ಕ್ವಾರ್ಟಸ್
*‘ಡಿ’ ದರ್ಜೆ ಸಿಬ್ಬಂದಿ ಕೊರತೆ
*ಡಯಾಲಿಸಿಸ್ ಘಟಕ ಮೇಲಿನ ಅಂತಸ್ತಿನಲ್ಲಿದೆ-ಕೆಳಗೆ ಬೇಕು
*ಪೂರ್ಣಾವಧಿ ತಾಲ್ಲೂಕು ಆರೋಗ್ಯಾಧಿಕಾರಿ
*ಪ್ರತ್ಯೇಕ ಆಯುರ್ವೇದಿಕ್ ಆಸ್ಪತ್ರೆ
*24X7 ಆಸ್ಪತ್ರೆಯಲ್ಲಿ ಔಟ್ ಪೋಸ್ಟ್ ಪೊಲೀಸ್ ಘಟಕ
*ಒಳಚರಂಡಿ ವ್ಯವಸ್ಥೆ
ಹದಗೆಟ್ಟ ಆಸ್ಪತ್ರೆ ಈಗ ಸುಧಾರಣೆ ಕಂಡಿದೆ ಹಲವು ವರ್ಷಗಳಿಂದ ಸಂಪೂರ್ಣವಾಗಿ ಹದಗೆಟ್ಟಿದ್ದ ಇಲ್ಲಿಯ ಸರ್ಕಾರಿ ಆಸ್ಪತ್ರೆ ಈಗ ಸುಧಾರಣೆ ಕಂಡಿದೆ. ಶಾಸಕರ ವಿಶೇಷ ಕಾಳಜಿ ಪದೇ ಪದೇ ಆಸ್ಪತ್ರೆಗೆ ಭೇಟಿ ನೀಡುತ್ತಿರುವ ಕಾರಣ ಗುಣಮಟ್ಟದ ವೈದ್ಯಕೀಯ ಸೇವೆ ಜನರಿಗೆ ಈಗ ದೊರೆಯುವಂತಾಗಿದೆ. ಸಾಯಬಣ್ಣ ಪುರದಾಳ ಅಧ್ಯಕ್ಷ ಮಾದಿಗ ದಂಡೋರ ಸಮಿತಿ ತಾಲ್ಲೂಕು ಶಾಖೆ. ಕೆಲವು ನ್ಯೂನ್ಯತೆಗಳು ಸರಿಪಡಿಸಬೇಕು ಮುಂಜಾನೆ ವೈದ್ಯರು ಸರಿಯಾದ ಸಮಯಕ್ಕೆ ಬರಬೇಕು ವೈದ್ಯರು ಅವರವರ ಕೊಠಡಿಯಲ್ಲಿರಬೇಕು ವೈದ್ಯರ ಕರ್ತವ್ಯ ಪಟ್ಟಿ ಸಾರ್ವಜನಿಕರಿಗೆ ಕಾಣುವಂತೆ ಫಲಕ ಹಾಕಬೇಕು ಒಪಿಡಿ ಚೀಟಿ ಕೊಡುವಾಗ ವೈದ್ಯರ ಕೊಠಡಿ ನಂಬರ್ ಹಾಕಿ ಕೊಡಬೇಕು ಪುರುಷ ಸ್ಟಾಪ್ ನರ್ಸ್ ಸಮವಸ್ತ್ರ ಧರಿಸಬೇಕು. ಜಹಾಂಗೀರ ಸಿಂದಗಿಕರ ಆರೋಗ್ಯ ರಕ್ಷಾ ಸಮಿತಿ ಸದಸ್ಯ ಏಕ ನಂಬರ್ ಸೇವೆ ರಕ್ತಹೀನತೆ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ಬಂದಿದ್ದೆ ವೈದ್ಯರು ಸರಿಯಾದ ಚಿಕಿತ್ಸೆ ನೀಡಿದ್ದಾರೆ. ಈಗ ಏಕ್ ನಂಬರ್ ಸರ್ಕಾರಿ ಆಸ್ಪತ್ರೆ ಅನಸ್ತಾ ಇದೆ. ರಮೇಶ ವಾಲೀಕಾರ ಬೂದಿಹಾಳ ಗ್ರಾಮ ಚಿಕಿತ್ಸೆ ಪರವಾಗಿಲ್ಲ... ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪರವಾಗಿಲ್ಲ. ವೈದ್ಯರು ವಿಶೇಷ ಕಾಳಜಿವಹಿಸುತ್ತಾರೆ. ಸಿದ್ರಾಮಯ್ಯ ಹಿರೇಮಠ ಬಂದಾಳ ಗ್ರಾಮ ಒಂದು ರೂಪಾಯಿ ಯಾರೂ ಕೇಳಿಲ್ಲ ಒಂದು ರೂಪಾಯಿ ಕೊಟ್ಟಿಲ್ಲ ಯಾರೂ ಕೇಳಿಲ್ಲ. ಖಾಸಗಿ ಆಸ್ಪತ್ರೆಯಲ್ಲಿ ಸಾವಿರಾರು ರೂಪಾಯಿ ಕಟ್ಟಬೇಕಾಗುತ್ತಿತ್ತು. ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಸಿಜೇರಿಯನ್ ಹೆರಿಗೆ ಆಗಿದೆ. ತಹಶೀನ ರಾಸಣಗಿ ಸಿಂದಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.