ADVERTISEMENT

ಸಿಂದಗಿ: 84 ಕುಟುಂಬಗಳ ನಿರಾಶ್ರಿತರ ಧರಣಿ ಅಂತ್ಯ

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 6:52 IST
Last Updated 20 ಸೆಪ್ಟೆಂಬರ್ 2025, 6:52 IST
ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ನಿರಾಶ್ರಿತರು ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿದರು.
ಸಿಂದಗಿ ಪಟ್ಟಣದ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ನಿರಾಶ್ರಿತರು ಧರಣಿ ಸತ್ಯಾಗ್ರಹ ಅಂತ್ಯಗೊಳಿಸಿದರು.   

ಸಿಂದಗಿ: ಸ.ನಂ 842/2*2ರಲ್ಲಿನ 84 ಕುಟುಂಬಗಳ ನಿರಾಶ್ರಿತರು 12 ದಿನದಿಂದ ನಡೆಸಿದ ಧರಣಿ ಸತ್ಯಾಗ್ರಹ ಶುಕ್ರವಾರ ಅಂತ್ಯಗೊಂಡಿತು.

ಹೋರಾಟದ ನೇತೃತ್ವ ವಹಿಸಿದ್ದ ಭೀಮು ರತ್ನಾಕರ ಮಾತನಾಡಿ, 2002ರಲ್ಲಿ ಪುರಸಭೆ ಆಶ್ರಯ ವಸತಿ ಯೋಜನೆಯಡಿ ವಾಸಿಸಲು ಹಕ್ಕು ಪತ್ರ ನೀಡಿದ್ದರು. ಕೂಲಿ ಮಾಡಿ ದುಡಿದ ಶ್ರಮದ ಹಣದಿಂದ ಸಣ್ಣಪುಟ್ಟ ಮನೆಗಳನ್ನು ಕಟ್ಟಿಕೊಂಡು ನೆಮ್ಮದಿಯ ಜೀವನ ಸಾಗಿಸುತ್ತಿದ್ದಾಗ ತೆರವು ಕಾರ್ಯಾಚರಣೆಗೆ ಮುಂದಾದರು. ಆಗ ನಮಗೆ ನಿಂತ ನೆಲವೇ ಕುಸಿದು ಬಿದ್ದಂತೆ ದಿಗ್ಬ್ರಮೆಯಾಯಿತು. ಹೀಗಾಗಿ 12 ದಿನಗಳ ಕಾಲ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಲ್ಲಿ ಧರಣಿ ಸತ್ಯಾಗ್ರಹ ನಡೆಯಿತು.

ಗುರುವಾರ ರಾತ್ರಿ ಮತಕ್ಷೇತ್ರದ ಶಾಸಕ ಅಶೋಕ ಮನಗೂಳಿ, ಪುರಸಭೆ ಅಧ್ಯಕ್ಷ ಡಾ.ಶಾಂತವೀರ ಮನಗೂಳಿ ಸ್ಥಳಕ್ಕೆ ಬಂದು ಬಾಬಾಸಾಹೇಬ ಅಂಬೇಡ್ಕರ್‌ ಪುತ್ಥಳಿಗೆ ಗೌರವ ನಮನ ಸಲ್ಲಿಸಿದರು.

ADVERTISEMENT

ನಿವೇಶನಕ್ಕಾಗಿ ಬಂದಾಳ ರಸ್ತೆಯಲ್ಲಿನ ವಿವೇಕ ಇಂಟರನ್ಯಾಶನಲ್ ಸ್ಕೂಲ್‌ನ ಹಿಂದೆ ಎರಡೂವರೆ ಎಕರೆ ಖಾಸಗಿ ಜಮೀನು ಖರೀದಿಸಲು ನಿವಾಸಿಗಳು ನಿರ್ಧರಿಸಿದ್ದಾರೆ. ಆ ಜಾಗದ ಖರೀದಿಗೆ ನಮ್ಮ ತಂದೆ ಮಾಜಿ ಸಚಿವ ಎಂ.ಸಿ.ಮನಗೂಳಿ ಫೌಂಡೇಶನ್ ವತಿಯಿಂದ ₹30 ಲಕ್ಷ ಆರ್ಥಿಕ ಸಹಾಯ ಮಾಡುವೆ ಎಂದು ಶಾಸಕ ಅಶೋಕ ಮನಗೂಳಿ ಭರವಸೆ ನೀಡಿದ್ದಾರೆ. ಅಲ್ಲದೇ ಖರೀದಿಸಿದ ಜಮೀನು ಎನ್.ಎ ಮಾಡಿಸಿ ಕೊಡಲಾಗುವುದು.ಅಲ್ಲಿ ಮೂಲ ಸೌಲಭ್ಯ ಒದಗಿಸಿಕೊಡಲಾಗುವುದು. ಸಾರಿಗೆ ಸಂಪರ್ಕ ಕಲ್ಪಿಸಿಕೊಡಲಾಗುವುದು. ಅಂಗನವಾಡಿ ಕೇಂದ್ರ, ಶಾಲೆ ಪ್ರಾರಂಭಿಸಲಾಗುತ್ತದೆ. ಮನೆ ಕಟ್ಟಿಕೊಳ್ಳಲು ಸರ್ಕಾರದ ಸಬ್ಸಿಡಿ ಸಹಾಯಧನ ವ್ಯವಸ್ಥೆ ಮಾಡಲಾಗುವುದು ಎಂದು ಭರವಸೆ ನೀಡಿದ್ದಾರೆ ಎಂದರು.

ಮೊದಲು ವಾಸವಾಗಿದ್ದ ಮನೆಗಳನ್ನು ಕೆಡುವಿದ ನಷ್ಟ ಪರಿಹಾರಕ್ಕಾಗಿ ಸಂಬಂಧಿಸಿದ ಸಚಿವರಿಗೆ ಮನವಿ ಮಾಡಿಕೊಳ್ಳಲಾಗುತ್ತದೆ ಎಂದು ಶಾಸಕರು ತಿಳಿಸಿದ್ದಾರೆ ಎಂದು ಭೀಮು ಹೇಳಿದರು.

’ಮುಂಬರುವ ದಿನಗಳಲ್ಲಿ ನಾವು ವಾಸಿಸುತ್ತಿದ್ದ ಮೂಲ ಜಾಗ ಖಾಸಗಿ ವ್ಯಕ್ತಿ ಪಡೆದುಕೊಂಡಿರುವ ಬಗ್ಗೆ ತನಿಖೆ ನಡೆಸಬೇಕು. ಈ ಕುರಿತು ಕಾನೂನು ಹೋರಾಟ ಕೈಗೊಳ್ಳಲಾಗುವುದು’ ಎಂದರು.

ಕರ್ನಾಟಕ ದಲಿತ ಸಂಘರ್ಷ ಸಮಿತಿ (ಅಂಬೇಡ್ಕರ್ ವಿಚಾರವಾದ) ರಾಜ್ಯ ಸಂಚಾಲಕ ರಾಕೇಶ ಕಾಂಬಳೆ ನಿರಾಶ್ರಿತರ ಹೋರಾಟಕ್ಕೆ ಜಯ ಸಿಕ್ಕಿದೆ. ನ್ಯಾಯಕ್ಕೆ ಮನ್ನಣೆ ದೊರಕಿದೆ ಎಂದು ಮಾತನಾಡಿದರು.

ನಿವಾಸಿ ಫಾತೀಮಾ ಆಳಂದ ಮಾತನಾಡಿ, ಗುರುವಾರ ರಾತ್ರಿ ಶಾಸಕರು ಧರಣಿ ಸ್ಥಳಕ್ಕೆ ಬಂದು ಅನುಕಂಪದಿಂದ ಜಮೀನು ಖರೀದಿಸಲು ಹಣ ಸಹಾಯ ಮಾಡುವುದಾಗಿ ಭರವಸೆ ನೀಡಿದ್ದಾರೆ. ಅವರ ಹೇಳಿಕೆಗೆ ಒಪ್ಪಿಕೊಂಡು ಧರಣಿ ಸತ್ಯಾಗ್ರಹ ಕೈಬಿಡಲಾಗಿದೆ ಎಂದು ತಿಳಿಸಿದರು.

ಕರ್ನಾಟಕ ಪ್ರಾಂತ ರೈತ ಸಂಘ ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಾರಾಯ ಈಳಗೇರ, ತಾಲ್ಲೂಕು ಘಟಕದ ಅಧ್ಯಕ್ಷ ಬಸೀರ ತಾಂಬೆ, ಖಾಜೂ ಬಂಕಲಗಿ, ಯಲ್ಲೂ ಇಂಗಳಗಿ, ನೀಲಮ್ಮ ಯಡ್ರಾಮಿ ಹಾಗೂ ನಿವಾಸಿಗಳು ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.