ಸಿಂದಗಿ: ಮತಕ್ಷೇತ್ರದ ರಾಜ್ಯ ಹೆದ್ದಾರಿ ಸಿಂದಗಿ-ಕೊಡಂಗಲ್ ಪ್ರಮುಖ ರಸ್ತೆ ಹಾಳಾಗಿದ್ದು, 16 ಕಿ.ಮಿ ರಸ್ತೆ ಅಗಲೀಕರಣಗೊಳಿಸಿ ರಸ್ತೆ ಸುಧಾರಣೆ ಮಾಡಲು 29 ಕೋಟಿ ರೂಪಾಯಿ ಅನುದಾನ ಬಿಡುಗಡೆಗೊಳಿಸುವಂತೆ ಈಗಾಗಲೇ ರಾಜ್ಯ ಲೊಕೋಪಯೋಗಿ ಇಲಾಖೆ ಸಚಿವರು, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನಾಧಿಕಾರಿಗೆ ಶಾಸಕ ಅಶೋಕ ಮನಗೂಳಿಯವರು ಪ್ರಸ್ತಾವ ಸಲ್ಲಿಸಿದ್ದಾರೆ ಎಂದು ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ ತಿಳಿಸಿದರು.
ಸುದ್ದಿಗಾರರ ಜೊತೆ ಮಾತನಾಡಿದ ಅವರು, ಕೊಡಂಗಲ್ ರಾಜ್ಯ ಹೆದ್ದಾರಿ ಹಾಳಾಗಿರುವುದನ್ನು ಸ್ವತ: ಲೋಕೋಪಯೋಗಿ ಇಲಾಖೆ ಸಚಿವ ಸತೀಶ ಜಾರಕಿಹೊಳಿ ಅವರು ಸ್ಥಳಕ್ಕೆ ಹೋಗಿ ಗಮನಿಸಿ ಅನುದಾನ ಮಂಜೂರಾತಿ ಭರವಸೆ ನೀಡಿದ್ದಾರೆ. ಶಾಸಕರು ಅದೇ ದಿಸೆಯಲ್ಲಿ ಕಾರ್ಯ ಪ್ರವೃತ್ತರಾಗಿದ್ದಾರೆ ಎಂದರು.
ಈಗ ಬಿಜೆಪಿ ಮಂಡಲ ವತಿಯಿಂದ ರಸ್ತೆ ತಡೆ ಪ್ರತಿಭಟನೆಗೆ ಮುಂದಾಗಿರುವುದು ಹಾಸ್ಯಾಸ್ಪದ. ಶಾಸಕರು ಎರಡೂವರೆ ವರ್ಷದಲ್ಲಿ ಮತಕ್ಷೇತ್ರದಲ್ಲಿ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದಿದ್ದಾರೆ. ಹಲವಾರು ಶಾಶ್ವತ ಯೋಜನೆಗಳ ಕಾಮಗಾರಿಗಳು ಕಣ್ಣಿಗೆ ಕಾಣುತ್ತಿದ್ದರೂ ವಿರೋಧಿಸುವುದು ಸರಿಯಲ್ಲ ಎಂದರು.
ಬಿಜೆಪಿ ಮಂಡಲ ಅಧ್ಯಕ್ಷರ ಕುಟುಂಬದವರು ಈ ಭಾಗದ ಜಿಲ್ಲಾ ಪಂಚಾಯ್ತಿ ಸದಸ್ಯರಾಗಿರಲಿಲ್ಲವೇ? ಆವಾಗ ಈ ರಸ್ತೆ ಅವರ ಕಣ್ಣಿಗೆ ಕಾಣಲಿಲ್ಲವೇ ಎಂದು ಪೂಜಾರಿ ಪ್ರಶ್ನಿಸಿದರು.
ಅಭಿವೃದ್ಧಿ ಕಾರ್ಯಕ್ಕೂ ವಿರೋಧಿಸುತ್ತ ಕುಳಿತರೆ ಮಾಜಿ ಶಾಸಕ ರಮೇಶ ಭೂಸನೂರ ಅವರು ಶಾಶ್ವತವಾಗಿ ವಿರೋಧಪಕ್ಷದಲ್ಲಿಯೇ ಆಸನಾರೂಢರಾಗಬೇಕಾಗುತ್ತದೆಎಂದು ಹೇಳಿದರು. ಪುರಸಭೆ ಸದಸ್ಯ ಸಾಯಬಣ್ಣ ಪುರದಾಳ, ಎಪಿಎಂಸಿ ಅಧ್ಯಕ್ಷ ಕಲ್ಲಪ್ಪ, ಕಾಂಗ್ರೆಸ್ ಮುಖಂಡ ಪ್ರವೀಣ ಕಂಟಿಗೊಂಡ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.