ADVERTISEMENT

ವೀರಶೈವ ಧರ್ಮದಲ್ಲಿ ಜಾತಿ ವಿಘಟನೆ ನೋವಿನ ಸಂಗತಿ: ರಂಭಾಪುರಿ ಶ್ರೀ ವಿಷಾದ

​ಪ್ರಜಾವಾಣಿ ವಾರ್ತೆ
Published 24 ಜನವರಿ 2026, 2:30 IST
Last Updated 24 ಜನವರಿ 2026, 2:30 IST
ಸಿಂದಗಿ ಪಟ್ಟಣದಲ್ಲಿ ಆದಿಶೇಷ ಸಂಸ್ಥಾನ ಹಿರೇಮಠದ 30ನೆಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು
ಸಿಂದಗಿ ಪಟ್ಟಣದಲ್ಲಿ ಆದಿಶೇಷ ಸಂಸ್ಥಾನ ಹಿರೇಮಠದ 30ನೆಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯನ್ನು ಬಾಳೆಹೊನ್ನೂರಿನ ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರ ಸಾನ್ನಿಧ್ಯದಲ್ಲಿ ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ರಾಷ್ಟ್ರೀಯ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಉದ್ಘಾಟಿಸಿದರು   

ಸಿಂದಗಿ: ‘ವೀರಶೈವ ಧರ್ಮ ಕಾಯಕ, ದಾಸೋಹ ಪರಿಕಲ್ಪನೆಯೊಂದಿಗೆ ಲಿಂಗ ತಾರತಮ್ಯ, ಜಾತಿ ಭೇದ ಮಾಡದೇ ಉಜ್ವಲ ಭವಿಷ್ಯಕ್ಕೆ ಕಾರಣವಾಗಿದೆ. ಆದರೆ ಇದರಲ್ಲಿ ಜಾತಿ ಆಧಾರಿತ ವಿಘಟನೆಗೆ ಮುಂದಾಗಿರುವುದು ನೋವಿನ ಸಂಗತಿ’ ಎಂದು ರಂಭಾಪುರಿ ಪೀಠದ ಶ್ರೀ ವಿಷಾದ ವ್ಯಕ್ತ ಪಡಿಸಿದರು.

ಪಟ್ಟಣದ ಹೊರವಲಯ ಬಸ್ ಡಿಪೊ ಹಿಂದೆ ಇರುವ ಆದಿಶೇಷ ಸಂಸ್ಥಾನ ಹಿರೇಮಠದ 30ನೆಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಧರ್ಮಸಭೆಯ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.

‘ವೀರಶೈವ ಎಂಬ ಮೂಲವಾಹಿನಿಯ ಸತ್ಯ ಮರೆತರೆ ಭವಿಷ್ಯದಲ್ಲಿ ಆತಂಕಕಾರಿ ಎಂದು ಹೇಳದೇ ದಾರಿಯಿಲ್ಲ. ಪಂಚಪೀಠಗಳು ಎಲ್ಲ ಸಮುದಾಯಗಳ ಜನಹಿತ ಕಾಪಾಡುವ ಶ್ರೇಯೋಭಿವೃದ್ಧಿ ಬಯಸುವ ಮತ್ತು ಮಾನವ ಧರ್ಮಕ್ಕೆ ಜಯವಾಗಲಿ ಎಂಬ ಬಹು ದೊಡ್ಡ ಸಂದೇಶ ಸಾರುವ ವಿಶಾಲತೆ ಹೊಂದಿದೆ’ ಎಂದು ತಿಳಿಸಿದರು.

ADVERTISEMENT

‘ಜೀವನಮುಕ್ತಿ, ಮಾನವ ಜೀವನ ಸಾಫಲ್ಯಗೊಳಿಸಿಕೊಳ್ಳಲು ಪ್ರತಿಯೊಬ್ಬ ವ್ಯಕ್ತಿ ಗುರುವಿನ ಮಾರ್ಗ ಅನುಸರಿಸಬೇಕು. ಗುರುವಿಗಿಂತ ಶ್ರೇಷ್ಠ ಯಾರೂ ಇಲ್ಲ. ಶಿವಜ್ಞಾನ ಸಂಪಾದಿಸಿಕೊಳ್ಳಲು ಗುರುಕಾರುಣ್ಯಕ್ಕೆ ಒಳಗಾಗದಿದ್ದರೆ ಜೀವನ ವ್ಯರ್ಥ. ದೇವರ ಸ್ಮರಣೆ, ಪೂಜೆ ಮಾಡದಿದ್ದರೆ ಜೀವನ ನಿರರ್ಥಕ’ ಎಂದರು.

‘ಬಸವಣ್ಣನವರು ಶ್ರೇಷ್ಠರಾಗಲು ಕೂಡಲಸಂಗಮದ ಸಾರಂಗಮಠದ ಜಾತವೇದಮುನಿಗಳು ಕಾರಣ. ವೈರಾಗ್ಯನಿಧಿ ಅಕ್ಕಮಹಾದೇವಿ, ಬಸವಪೂರ್ವದ ವಚನಕಾರ ದೇವರದಾಸಿಮಾರ್ಯ, ಕಡಕೋಳ ಮಡಿವಾಳಪ್ಪ, ಕಲಬುರ್ಗಿ ಶರಣಬಸವೇಶ್ವರ ಹೀಗೆ ಮಹಾನ್ ವ್ಯಕ್ತಿಗಳ ಹಿಂದೆ ಪಂಚಪೀಠದ ಪರಂಪರೆ ಕಾಣಲಾಗುತ್ತದೆ’ ಎಂದು ಹೇಳಿದರು.

ಆದಿಶೇಷ ಸಂಸ್ಥಾನಹಿರೇಮಠದ ನಾಗರತ್ನ ರಾಜಯೋಗಿ ವಿರಾಜಸ್ವಾಮೀಜಿ ಮಾತನಾಡಿ, ‘ನಾನೊಬ್ಬ ಕೆಳವರ್ಗದ ಸ್ವಾಮೀಜಿ, ಕೈಚಾಚುವ ಸ್ವಾಮಿಯಲ್ಲ. ನನ್ನ ಮಠಕ್ಕೆ ಭಕ್ತರೇ ಆಸ್ತಿ’ ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲ್ಲೂಕು ಶಾಖೆ ಅಧ್ಯಕ್ಷ ಅಶೋಕ ವಾರದ ಮಾತನಾಡಿ, ‘ಪ್ರಸ್ತುತ ಕಲುಷಿತ ವಾತಾವರಣದಲ್ಲಿ ಧರ್ಮಸಭೆಗಳು ಶಾಂತಿ, ನೆಮ್ಮದಿ ನೀಡುತ್ತವೆ’ ಎಂದರು.

ಶಿವಮೊಗ್ಗ ಜಿಲ್ಲೆ ಮಳಲಿಮಠದ ಶ್ರೀ, ಮನಗೂಳಿ ಹಿರೇಮಠದ ಶ್ರೀ, ಯಂಕಂಚಿ ಶಾಸ್ತ್ರಿ, ಜೇವರ್ಗಿ ಉದ್ದಿಮೆದಾರ ಶಿವಶರಣಪ್ಪ ಸೀರಿ, ಆಳಂದ ರಾಜಕೀಯ ಧುರೀಣೆ ಮಹೇಶ್ವರಿ ವಾಲಿ ಮಾತನಾಡಿದರು. ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಅಧ್ಯಕ್ಷ ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಧರ್ಮಸಭೆ ಉದ್ಘಾಟಿಸಿದರು.

ನಾಲವಾರ ಜಹಾಗೀರದಾರ ಆದಿಶೇಷ ಸಂಸ್ಥಾನಹಿರೇಮಠದ ಶಿವಯೋಗಿ ಚಂದ್ರಶೇಖರ ಸ್ವಾಮೀಜಿಗಳ 55ನೆಯ ವರ್ಷದ ಅನುಷ್ಠಾನ ಮಹೋತ್ಸವ ಜರುಗಿತು. ನಾಡಿನ ವಿವಿಧ ಮಠಗಳ ಪೀಠಾಧೀಶರು, ಗಣ್ಯರು ವೇದಿಕೆಯಲ್ಲಿದ್ದರು.
ಪೂಜಾ ಹಿರೇಮಠ, ಸಿದ್ಧಲಿಂಗಯ್ಯ ಹಿರೇಮಠ ಕಾರ್ಯಕ್ರಮ ನಿರ್ವಹಣೆ ಮಾಡಿದರು.

ಕೆಲವರಿಗೆ ಪಂಚ ಪೀಠದ ಪೂಜ್ಯರ ಪಲ್ಲಕ್ಕಿಗಳು ಮಾತ್ರ ಕಾಣುತ್ತವೆ. ಆದರೆ ಅವರು ಲೋಕಲ್ಯಾಣಕ್ಕಾಗಿ ಹಗಲಿರುಳು ಕೈಗೊಳ್ಳುವ ಸಮಾಜೋಧಾರ್ಮಿಕ ಕಾರ್ಯಗಳು ಕಾಣುವುದಿಲ್ಲ
ಪ್ರಭು ಸಾರಂಗದೇವ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷರು ಅಖಿಲ ಭಾರತ ವೀರಶೈವ ಶಿವಾಚಾರ್ಯ ಸಂಸ್ಥೆ ಬೆಂಗಳೂರು
ರೇಣುಕರ ದಶಸೂತ್ರ ಬಸವಣ್ಣವರ ಸಪ್ತ ಸೂತ್ರ...
ಪಂಚಾಚಾರ್ಯ ರೇಣುಕರ ಧರ್ಮದ ದಶ ಸೂತ್ರಗಳು ಮತ್ತು ಬಸವಣ್ಣನವರ ಸಪ್ತ ಸೂತ್ರಗಳು ಪ್ರತಿಯೊಬ್ಬ ವ್ಯಕ್ತಿಗೂ ದಾರಿದೀಪ. ಈ ಸೂತ್ರಗಳು ಎಲ್ಲ ಧರ್ಮಿಯರಿಗೂ ಅನ್ವಯವಾಗುತ್ತವೆ. ಇವುಗಳನ್ನು ಜೀವನದಲ್ಲಿ ಪರಿಪಾಲಿಸಿದರೆ ಆರೋಗ್ಯಪೂರ್ಣ ಸಮಾಜ ನಿರ್ಮಾಣ ಸಾಧ್ಯ. ಆದರೆ ಸತ್ಯಕ್ಕಿಂತ ಸುಳ್ಳು ವಿಜೃಂಭಿಸಿ ಎಲ್ಲ ರಂಗಗಳಲ್ಲಿ ಕಲುಷಿತ ವಾತಾವರಣವಿದೆ ಎಂದು ರಂಭಾಪುರಿ ಪೀಠದ ವೀರಸೋಮೇಶ್ವರ ರಾಜದೇಶಿಕೇಂದ್ರ ಶಿವಾಚಾರ್ಯರು ಹೇಳಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.