ADVERTISEMENT

ಎಸ್‌ಎಸ್‌ಎಲ್‌ಸಿ ಪರೀಕ್ಷೆ: ವಿಜಯಪುರ ಜಿಲ್ಲೆಯಲ್ಲಿ 730 ವಿದ್ಯಾರ್ಥಿಗಳು ಗೈರು

ಸಿಂದಗಿಯಲ್ಲಿ ಪರೀಕ್ಷೆ ಬರೆಯದೇ ಮರಳಿದ ಹಿಜಾಬ್ ಧರಿಸಿದ ವಿದ್ಯಾರ್ಥಿನಿ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2022, 14:03 IST
Last Updated 30 ಮಾರ್ಚ್ 2022, 14:03 IST
ವಿಜಯಪುರ ನಗರದ ಗಾಂಧಿಚೌಕಿ ಬಳಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಗಾಂಧಿಚೌಕಿ ಬಳಿ ಇರುವ ಸರ್ಕಾರಿ ಪ್ರೌಢಶಾಲೆಯಲ್ಲಿ ಬುಧವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರಕ್ಕೆ ಪೊಲೀಸ್‌ ಭದ್ರತೆ ಕಲ್ಪಿಸಲಾಗಿತ್ತು–ಪ್ರಜಾವಾಣಿ ಚಿತ್ರ   

ವಿಜಯಪುರ: ಜಿಲ್ಲೆಯ 147 ಕೇಂದ್ರಗಳಲ್ಲಿ ಬುಧವಾರ ಎಸ್‌ಎಸ್‌ಎಲ್‌ಸಿ ದ್ವಿತೀಯ ಭಾಷಾ ಪರೀಕ್ಷೆ ಸುಸೂತ್ರವಾಗಿ ನಡೆಯಿತು.

ಒಟ್ಟು 36,318 ವಿದ್ಯಾರ್ಥಿಗಳ ಪೈಕಿ 35,588 ಅರ್ಥಿಗಳು ಹಾಜರಾಗಿದ್ದು, 730 ವಿದ್ಯಾರ್ಥಿಗಳು ಗೈರು ಹಾಜರಾಗಿದ್ದಾರೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎನ್‌.ವಿ.ಹೊಸೂರು ತಿಳಿಸಿದ್ದಾರೆ.

ಪರೀಕ್ಷಾ ಕೇಂದ್ರಗಳ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಅಲ್ಲದೇ, ಭದ್ರತೆಗೆ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ADVERTISEMENT

ಮರಳಿದ ವಿದ್ಯಾರ್ಥಿನಿ:ಸಿಂದಗಿ ಪಟ್ಟಣದ ಸರ್ಕಾರಿ ಆದರ್ಶ ಆಂಗ್ಲ ಮಾಧ್ಯಮ ವಿದ್ಯಾಲಯದಲ್ಲಿ ಬುಧವಾರ ಹಿಜಾಬ್ ಧರಿಸಿ ಬಂದಿದ್ದ ವಿದ್ಯಾರ್ಥಿನಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯದೆಮನೆಗೆ ಮರಳಿದ್ದಾಳೆ.

ಸಿಂದಗಿಯ ಅಂಜುಮನ್ ಪ್ರೌಢಶಾಲೆ ಉರ್ದು ವಿಭಾಗದ ವಿದ್ಯಾರ್ಥಿನಿ ಆಲ್ಫಿಯಾನಾಜ್ ಬಾಗವಾನ ಹಿಜಾಬ್ ಧರಿಸಿಯೇ ಆಂಗ್ಲ ಭಾಷಾ ವಿಷಯದ ಪರೀಕ್ಷೆ ಬರೆಯಲು ಬಂದಿದ್ದರು. ಬಿಇಒ ಎಚ್.ಎಂ.ಹರನಾಳ ಹಾಗೂ ಶಾಲೆಯ ಎಸ್.ಡಿ.ಎಂ.ಸಿ ಸದಸ್ಯರೊಬ್ಬರು ವಿದ್ಯಾರ್ಥಿನಿ ಮನವೊಲಿಸಲು ಪ್ರಯತ್ನಿಸಿದರು.

‘ಇದೇ ವಿದ್ಯಾರ್ಥಿನಿ ಉರ್ದು ಭಾಷಾ ವಿಷಯ ಪರೀಕ್ಷೆ ದಿನ ಹಿಜಾಬ್ ತೆಗೆದಿಟ್ಟು ಪರೀಕ್ಷೆ ಬರೆದಿದ್ದಾಳೆ’ ಎಂದು ಪರೀಕ್ಷಾ ಕೇಂದ್ರದ ಮುಖ್ಯಸ್ಥ ರಮೇಶ ಚಟ್ಟರಕಿ ತಿಳಿಸಿದರು.

’ಪರೀಕ್ಷೆಗಿಂತ ಹಿಜಾಬ್ ಮುಖ್ಯ‘ ಎಂದು ತಿಳಿಸಿದ ವಿದ್ಯಾರ್ಥಿನಿ ಮನೆಗೆ ಮರಳಿದ್ದಾಳೆ‘ ಎಂದು ಬಿಇಒ ಹರನಾಳ 'ಪ್ರಜಾವಾಣಿ' ಗೆ ಪ್ರತಿಕ್ರಿಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.