SSLC Results | ವಿಜಯಪುರ: 11ರಿಂದ 34ಕ್ಕೆ ಮಹಾ ಕುಸಿತ
ವಿಜಯಪುರ: ಈ ಬಾರಿ ಜಿಲ್ಲೆಯ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪಾತಾಳಕ್ಕೆ ಕುಸಿದಿದೆ. ಪರೀಕ್ಷೆ ಬರೆದ 38,653 ವಿದ್ಯಾರ್ಥಿಗಳಲ್ಲಿ 19,164 ವಿದ್ಯಾರ್ಥಿಗಳು ಮಾತ್ರ ಉತ್ತೀರ್ಣರಾಗಿದ್ದು, ಶೇ 49.58ರಷ್ಟು ಫಲಿತಾಂಶ ದಾಖಲಿಸುವ ಮೂಲಕ ರಾಜ್ಯಮಟ್ಟದಲ್ಲಿ 34ನೇ ಸ್ಥಾನ ಪಡೆದು, ಕಳಪೆ ಸಾಧನೆ ಮಾಡಿದೆ.
ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕರ ಪದೇ ಪದೇ ಬದಲಾವಣೆ, ಹಾಲಿ ಉಪ ನಿರ್ದೇಶಕರ ನಿರ್ಲಕ್ಷ್ಯ ಧೋರಣೆ, ಸರಿಯಾಗಿ ನಡೆಯದ ಪೂರ್ವ ಸಿದ್ಧತಾ ಪರೀಕ್ಷೆಗಳು ಹಾಗೂ ವೆಬ್ ಕಾಸ್ಟಿಂಗ್‌ನಿಂದಾಗಿ ಪಾರದರ್ಶಕವಾಗಿ ಪರೀಕ್ಷೆ ನಡೆದ ಪರಿಣಾಮ ಫಲಿತಾಂಶ ಪ್ರಪಾತಕ್ಕೆ ಕುಸಿದಿದೆ.
ಜಿಲ್ಲೆಯ ಸಾರ್ವಜನಿಕ ಶಿಕ್ಷಣ ಇಲಾಖೆಯಲ್ಲಿ ಅಧಿಕಾರಿಗಳ ಮಟ್ಟದಲ್ಲಿ ನಡೆದ ಗದ್ದಲ, ಗೊಂದಲವನ್ನು ಇತ್ಯರ್ಥಪಡಿಸಿ, ಕಿವಿಹಿಂಡದೇ ನಿರ್ಲಕ್ಷ್ಯ ವಹಿಸಿದ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಜಿಲ್ಲಾ ಪಂಚಾಯ್ತಿ ಸಿಇಒ ಅವರ ನಿರ್ಲಕ್ಷ್ಯ, ತಾತ್ಸಾರ ಧೋರಣೆಯೂ ಫಲಿತಾಂಶದ ಮೇಲೆ ಪರಿಣಾಮ ಬೀರಿದೆ.
2023-24ನೇ ಸಾಲಿನಲ್ಲಿ ಜಿಲ್ಲೆಯ ಶೇ 79.82 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ರಾಜ್ಯಮಟ್ಟದಲ್ಲಿ 11 ನೇ ಸ್ಥಾನ, 2022–23ನೇ ಸಾಲಿನಲ್ಲಿ ಶೇ 93.10 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ 11ನೇ ಸ್ಥಾನ ಗಳಿಸಿತ್ತು. ಪ್ರಸಕ್ತ ವರ್ಷ ಏಕಾಏಕಿ 34ನೇ ಸ್ಥಾನಕ್ಕೆ ಕುಸಿದಿರುವುದು ಶಿಕ್ಷಣ ಇಲಾಖೆಯ ವೈಫಲ್ಯವನ್ನು ಎತ್ತಿ ತೋರಿಸುತ್ತಿದೆ.
ಈ ವರ್ಷ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದ 20,381 ಬಾಲಕರ ಪೈಕಿ 7,956 ಬಾಲಕರು (ಶೇ 39.04) ಉತ್ತೀರ್ಣರಾಗಿದ್ದಾರೆ. ಪರೀಕ್ಷೆ ಬರೆದ 18,947 ಬಾಲಕಿಯರ ಪೈಕಿ 11,166 ಬಾಲಕಿಯರು (ಶೇ 58.93) ಉತ್ತೀರ್ಣರಾಗಿ ಮೇಲುಗೈ ಸಾಧಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಬಸವನ ಬಾಗೇವಾಡಿ ತಾಲ್ಲೂಕಿನ ವಿದ್ಯಾರ್ಥಿಗಳು ಶೇ 53.39ರಷ್ಟು ಉತ್ತೀರ್ಣರಾಗಿ ಜಿಲ್ಲೆಗೆ ಪ್ರಥಮ ಸ್ಥಾನ ಹಾಗೂ ಸಿಂದಗಿ ತಾಲ್ಲೂಕು ಕೊನೆಯ ಸ್ಥಾನ ಪಡೆದುಕೊಂಡಿವೆ.
ಬಸವನ ಬಾಗೇವಾಡಿ ಶೇ 53.39, ಇಂಡಿ ಶೇ 52.68, ಮುದ್ದೇಬಿಹಾಳ ಶೇ 52.56, ಚಡಚಣ ಶೇ 51.95, ವಿಜಯಪುರ ಗ್ರಾಮೀಣ ಶೇ 48.39, ವಿಜಯಪುರ ನಗರ ಶೇ 42.65, ಸಿಂದಗಿ ಶೇ 42.65 ರಷ್ಟು ಫಲಿತಾಂಶ ಬಂದಿದೆ.
ಜಿಲ್ಲೆಯ 2 ಸರ್ಕಾರಿ, 7 ಅನುದಾನ ರಹಿತ ಸೇರದಂತೆ ಒಟ್ಟು 9 ಪ್ರೌಢಶಾಲೆಗಳು ಶೇ 100ರಷ್ಟು ಫಲಿತಾಂಶ ದಾಖಲಿಸಿವೆ.
5 ಅನುದಾನಿತ ಮತ್ತು 12 ಅನುದಾನ ರಹಿತ ಸೇರದಿಂತೆ ಒಟ್ಟು 17 ಪ್ರೌಢ ಶಾಲೆಗಳು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಶೂನ್ಯ ಸಂಪಾದನೆ ಮಾಡಿವೆ.
ಎಸ್‌ಸಿ ವಿದ್ಯಾರ್ಥಿಗಳು ಶೇ 41, ಎಸ್‌ಟಿ ಶೇ 46.59, ಪ್ರವರ್ಗ 1 ಶೇ 41.92, 2ಎ ಶೇ 53.58, 2ಬಿ ಶೇ40.03, 3ಎ ಶೇ68.79. 3ಬಿ ಶೇ59.26 ಹಾಗೂ ಇತರೆ ವರ್ಗದ ವಿದ್ಯಾರ್ಥಿಗಳು ಶೇ 67.03ರಷ್ಟು ಉತ್ತೀರ್ಣರಾಗಿದ್ದಾರೆ.
ಪ್ರಥಮ ಭಾಷೆಯಲ್ಲಿ ಶೇ 68.15, ದ್ವಿತೀಯ ಭಾಷೆಯಲ್ಲಿ ಶೇ 66.70, ತೃತೀಯ ಭಾಷೆಯಲ್ಲಿ ಶೇ70.51 ಹಾಗೂ ವಿಷಯ 1ರಲ್ಲಿ (ಸಿ1) ಶೇ 58.46, ವಿಷಯ 2ರಲ್ಲಿ (ಸಿ2) ಶೇ 60.50, ವಿಷಯ 3ರಲ್ಲಿ (ಸಿ3) ಶೇ69.78 ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.