ಮುದ್ದೇಬಿಹಾಳ: ಪಟ್ಟಣದ ಆಶ್ರಯ ಕಾಲೊನಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಏಳನೇ ತರಗತಿಯ ವಿದ್ಯಾರ್ಥಿಯೊಬ್ಬ ಶಾಲೆಯಲ್ಲಿ ವಿತರಿಸುವ ಕಬ್ಬಿಣಾಂಶದ 10ಕ್ಕೂ ಹೆಚ್ಚು ಮಾತ್ರೆಗಳನ್ನು ಶಾಲಾ ಅವಧಿಯಲ್ಲಿಯೇ ನುಂಗಿದ ಪರಿಣಾಮ ಅಸ್ವಸ್ಥಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಸೋಮವಾರ ನಡೆದಿದೆ.
ಶಾಲೆಯ ಶಿಕ್ಷಕರು,ವೈದ್ಯರ ಸಮಯಪ್ರಜ್ಞೆಯಿಂದ ಸಕಾಲಿಕ ಸಮಯದಲ್ಲಿ ಚಿಕಿತ್ಸೆ ದೊರೆತು ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತಾಳಿಕೋಟೆ ರಸ್ತೆ ಪಕ್ಕದಲ್ಲಿರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಕೃಷ್ಣಾ ರಮೇಶ ದೊಡಮನಿ ಎಂಬಾತನೇ ಮಾತ್ರೆ ನುಂಗಿದ ವಿದ್ಯಾರ್ಥಿ. ಶಾಲೆಯಲ್ಲಿ ಟೇಬಲ್ ಮೇಲೆ ಇಡಲಾಗಿದ್ದ ಈ ಮಾತ್ರೆಗಳನ್ನು ಸೇವಿಸಿ ಕೂಡಲೇ ಅಸ್ವಸ್ಥಗೊಂಡ ಅವನನ್ನು ಸ್ಥಳೀಯ ಅರ್ಜುನ್ ಚಿಕ್ಕಮಕ್ಕಳ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆತರಲಾಯಿತು. ಅಲ್ಲಿಂದ ಆಂಬುಲೆನ್ಸ್ ಮೂಲಕ ತಾಲ್ಲೂಕು ಸರ್ಕಾರಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಯಿತು. ವಿಷಯ ತಿಳಿದು ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿದ್ದ ಬಿಇಒ ಬಿ.ಎಸ್.ಸಾವಳಗಿ ವಿದ್ಯಾರ್ಥಿಯನ್ನು ವಿಚಾರಿಸಿದಾಗ, ‘ನನಗೆ ಶಿಕ್ಷಕಿ ರಾಜೇಶ್ವರಿ ಜಂಗೀನ ಎನ್ನುವವರು ಸುಮ್ಮನೆ ಬೈಯುವುದು, ಹೊಡೆಯುವುದು ಮಾಡುತ್ತಾರೆ. ಸಹಪಾಠಿಗಳು ಹೇಳಿದ ಮಾತನ್ನು ಕೇಳಿಕೊಂಡು ನನ್ನನ್ನೇ ದೂಷಿಸುತ್ತಾರೆ. ಸಹಪಾಠಿಗಳು ಕೂಡಾ ನನಗೆ ಬೈಯುತ್ತಾರೆ. ಇದರಿಂದ ಬೇಸತ್ತು ಶಾಲೆಯ ಟೇಬಲ್ ಮೇಲೆ ಇಟ್ಟಿದ್ದ ಮಾತ್ರೆಗಳನ್ನು ನುಂಗಿದೆ’ ಎಂದು ಹೇಳಿಕೆ ನೀಡಿದ್ದಾನೆ.
ಘಟನೆ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಬಿಇಒ ಬಿ.ಎಸ್.ಸಾವಳಗಿ, ಶಾಲೆಯಲ್ಲಿ ಶಿಕ್ಷಕರು ಎಚ್ಚರಿಕೆಯಿಂದ ಇದ್ದರೆ ಇಂತಹ ಘಟನೆಗಳು ನಡೆಯುತ್ತಿರಲಿಲ್ಲ. ಸದ್ಯಕ್ಕೆ ವಿದ್ಯಾರ್ಥಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೂ ಹೆಚ್ಚಿನ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಗೆ ಕಳಿಸಲು ವ್ಯವಸ್ಥೆ ಮಾಡಿದ್ದೇವೆ. ಘಟನೆ ಕುರಿತು ಡಿಡಿಪಿಐ ಅವರ ಗಮನಕ್ಕೆ ತಂದು, ವಿದ್ಯಾರ್ಥಿಯು ಶಿಕ್ಷಕಿಯ ಮೇಲೆ ಮಾಡಿದ ಆರೋಪದ ತನಿಖೆ ನಡೆಸಿ ಸತ್ಯಾಸತ್ಯತೆ ಪರಾಮರ್ಶಿಸಿದ ನಂತರ ಕ್ರಮ ಜರುಗಿಸಲಾಗುತ್ತದೆ ಎಂದು ತಿಳಿಸಿದರು. ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎಚ್.ಮುದ್ನೂರ, ಪ್ರಧಾನ ಕಾರ್ಯದರ್ಶಿ ಬಿ.ಎಸ್.ಹೊಳಿ, ಶಿಕ್ಷಕರು ಇದ್ದರು.
ಹೋರಾಟದ ಎಚ್ಚರಿಕೆ :
ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಜಿಲ್ಲಾ ದೌರ್ಜನ್ಯ ನಿವಾರಣಾ ಸಮಿತಿ ಮಾಜಿ ಸದಸ್ಯ ಬಸವರಾಜ ಪೂಜಾರಿ ಮಾತನಾಡಿ ಶಾಲೆಯಲ್ಲಿ ಮಕ್ಕಳ ಕೈಗೆ ಮಾತ್ರೆಗಳು ಸಿಗುವಂತೆ ಇರಿಸಿದ್ದು ಶಾಲೆಯ ಶಿಕ್ಷಕರ ಲೋಪ ಎತ್ತಿ ತೋರಿಸುತ್ತದೆ. ಆರೋಗ್ಯ ಇಲಾಖೆಯಿಂದ ಪ್ರತಿ ಶಾಲೆಗೆ ಕಬ್ಬಿಣಾಂಶದ ಮಾತ್ರೆ ಕೊಡಲಾಗುತ್ತದೆ. ಘಟನೆ ನಡೆದ ಶಾಲೆಯಲ್ಲಿ ಕಳೆದ ವರ್ಷ ಈ ಮಾತ್ರೆಗಳನ್ನು ವಿತರಿಸಲಾಗಿತ್ತು. ಉಳಿದ ಮಾತ್ರೆಗಳನ್ನು ಹಾಗೇ ಇಡಲಾಗಿತ್ತು ಎಂಬ ಮಾಹಿತಿ ತಿಳಿದು ಬಂದಿದೆ. ಕಳೆದ ವರ್ಷದ ಮಾತ್ರೆಗಳನ್ನು ಈ ವಿದ್ಯಾರ್ಥಿ ಸೇವಿಸಿದ್ದಾನೆ. ಈ ಘಟನೆ ಬಗ್ಗೆ ಡಿಡಿಪಿಐ ಬಿಇಒ ಸಮಗ್ರ ತನಿಖೆ ನಡೆಸಿ ಬೇಜವಾಬ್ಧಾರಿತನ ತೋರಿದ ತಪ್ಪಿಸ್ಥರ ಮೇಲೆ ಕ್ರಮ ಜರುಗಿಸಬೇಕು. ತಪ್ಪಿತಸ್ಥ ಶಿಕ್ಷಕರನ್ನು ಸೇವೆಯಿಂದ ಅಮಾನತುಗೊಳಿಸಬೇಕು ಎಂದು ಆಗ್ರಹಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.