ADVERTISEMENT

‘ಪರಿಸರ ನಾಶವಾಗದಂತೆ ನೋಡಿಕೊಳ್ಳಿ’: ಗಸ್ತು ಅರಣ್ಯಪಾಲಕ ಮಹಾಂತೇಶ ಹಾದಿಮನಿ

​ಪ್ರಜಾವಾಣಿ ವಾರ್ತೆ
Published 12 ಜುಲೈ 2025, 5:53 IST
Last Updated 12 ಜುಲೈ 2025, 5:53 IST
ತಾಳಿಕೋಟೆ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪರಿಸರ ದಿನ ನಿಮಿತ್ತ ಉಸಿರಿಗಾಗಿ ಹಸಿರು ಹಾಗೂ ಅಭಿನಂದನಾ ಸಮಾರಂಭದಲ್ಲಿ  ಅರಣ್ಯಪಾಲಕ ಮಹಾಂತೇಶ ಹಾದಿಮನಿ ಶನಿವಾರ ಮಾತನಾಡಿದರು
ತಾಳಿಕೋಟೆ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪರಿಸರ ದಿನ ನಿಮಿತ್ತ ಉಸಿರಿಗಾಗಿ ಹಸಿರು ಹಾಗೂ ಅಭಿನಂದನಾ ಸಮಾರಂಭದಲ್ಲಿ  ಅರಣ್ಯಪಾಲಕ ಮಹಾಂತೇಶ ಹಾದಿಮನಿ ಶನಿವಾರ ಮಾತನಾಡಿದರು   

ತಾಳಿಕೋಟೆ: ‘ಭೂಮಿ, ಈ ಅರಣ್ಯ, ಮಾನವನ ಹುಟ್ಟಿಗಿಂತ ಮುಂಚೆಯೇ ಇದೆ. ಇರುವುದೊಂದೇ ಭೂಮಿ, ಮಾನವನ ಸ್ವಾರ್ಥಕ್ಕೆ ಅದು ನಾಶವಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಎಲ್ಲರ ಮೇಲೆ ಇದೆ’ ಎಂದು ಗಸ್ತು ಅರಣ್ಯಪಾಲಕ ಮಹಾಂತೇಶ ಹಾದಿಮನಿ ಹೇಳಿದರು.

ಅವರು ಸ್ಥಳೀಯ ಖಾಸ್ಗತೇಶ್ವರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಪರಿಸರ ದಿನ ನಿಮಿತ್ತ ಉಸಿರಿಗಾಗಿ ಹಸಿರು ಹಾಗೂ ಅಭಿನಂದನಾ ಸಮಾರಂಭದಲ್ಲಿ ಶನಿವಾರ ಮಾತನಾಡಿದರು. ಈ ಭೂಮಿಯ ಮೇಲೆ ಶೇ 33ರಷ್ಟು ಅರಣ್ಯ ಅವಶ್ಯಕವಿದೆ. ವಿಜಯಪುರ ಜಿಲ್ಲೆಯಲ್ಲಿ ಕೇವಲ ಶೇ 4ರಷ್ಟು ಅರಣ್ಯವಿದೆ. ಹೀಗಾಗಿ ಬಯಲು ಸೀಮೆಯಾದ ನಮ್ಮ ಜಿಲ್ಲೆಯಲ್ಲಿ ನಾವು ಗಿಡಮರಗಳನ್ನು ಬೆಳೆಸಿ ಸುಂದರ ಪರಿಸರ ನಿರ್ಮಿಸುವುದು ಅವಶ್ಯಕ’ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಎಸ್.ಕೆ. ಶಿಕ್ಷಣ ಮಹಾವಿದ್ಯಾಲಯದ ಅಧ್ಯಕ್ಷ ಕಾಶಿನಾಥ ಮುರಾಳ, ‘ಪರಿಸರವನ್ನು ನಾವು ಕೇವಲ ಹಸಿರಿಗಾಗಿ ಅಲ್ಲ, ಉಸಿರಿಗಾಗಿ ಸಂರಕ್ಷಣೆ ಮಾಡಬೇಕು’ ಎಂದರು.

ADVERTISEMENT

ಅಧ್ಯಕ್ಷತೆ ವಹಿಸಿದ್ದ ಪ್ರಾಚಾರ್ಯ ಡಾ. ಆರ್.ಎಂ. ಬಂಟನೂರ ಮಾತನಾಡಿ, ‘ನಾವು ಸುಂದರವಾಗಿ ಬದುಕಲು ನಮ್ಮ ಮನೆ, ಮನೆಯ ಸುತ್ತ ಸ್ವಚ್ಛವಾಗಿಟ್ಟುಕೊಂಡರೆ ಸಾಲದು. ನಮ್ಮ ಹಳ್ಳಿ, ರಾಜ್ಯ, ದೇಶ ಹೀಗೆ ಇಡೀ ನಮ್ಮ ಪರಿಸರವನ್ನು ಸ್ವಚ್ಛವಾಗಿ, ಸುಂದರವಾಗಿ ಇಟ್ಟುಕೊಳ್ಳಬೇಕು’ ಎಂದರು.

ಪ್ರಶಿಕ್ಷಣಾರ್ಥಿಗಳು ಪರಿಸರ ಗೀತೆಯನ್ನು ಹಾಡಿದರು. ಪರಿಸರ ಜಾಗೃತಿ ಕುರಿತು ಪಿಪಿಟಿ ಹಾಗೂ ವಿದ್ಯಾರ್ಥಿಗಳು ಕಿರು ನಾಟಕವನ್ನು ಪ್ರದರ್ಶಿಸಿದರು.

ಐ.ಕ್ಯೂ.ಎ.ಸಿ. ಸಂಯೋಜಕ ಯು.ಎನ್. ಮಂಗೊಂಡ, ಎನ್.ಎಸ್.ಎಸ್ ಸಂಯೋಜಕ ಎ.ಎ. ಗಂಗನಗೌಡರ, ವಿಜ್ಞಾನ ವಿಭಾಗದ ಉಪನ್ಯಾಸಕ ಎಂ.ಎ. ಪೋತದಾರ ಇದ್ದರು. ಕಾಲೇಜಿನ ಸಿಬ್ಬಂದಿ ಹಾಗೂ ಪ್ರಶಿಕ್ಷಣಾರ್ಥಿಗಳು ಭಾಗವಹಿಸಿದ್ದರು. ದೇವೇಂದ್ರಪ್ಪ ಗೋಪಾಲೆರ ಪ್ರಾರ್ಥಿಸಿದರು. ಶಿವರಾಜ ಸ್ವಾಗತಿಸಿದರು. ಮಲ್ಲಿಕಾರ್ಜುನ ವಂದಿಸಿದರು. ನೇತ್ರಾವತಿ ಕಾರ್ಯಕ್ರಮ ನಿರೂಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.