
ಪ್ರಜಾವಾಣಿ ವಾರ್ತೆ
ತಾಳಿಕೋಟೆ: ಪಟ್ಟಣದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ಯುವಕನೊಬ್ಬ ಮೃತಪಟ್ಟಿದ್ದಾನೆ ಎಂದು ಆರೋಪಿಸಿ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಫೌಂಡೇಷನ್ ನೇತೃತ್ವದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು.
ಶನಿವಾರ ಮುಂಜಾನೆ ತೀವ್ರ ಹೃದಯಾಘಾತಕ್ಕೆ ಒಳಗಾಗಿದ್ದ ಯುವಕನೊಬ್ಬನನ್ನು ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆತರಲಾಗಿತ್ತು. ರಾತ್ರಿ ವೇಳೆ ಕಾರ್ಯನಿರ್ವಹಿಸಬೇಕಾದ ವೈದ್ಯರು ಇಲ್ಲದ ಕಾರಣ ಸಕಾಲಕ್ಕೆ ಚಿಕಿತ್ಸೆ ಸಿಗದೆ ಆತ ಮೃತಪಟ್ಟಿದ್ದಾನೆ. ಕರ್ತವ್ಯ ಲೋಪ ಎಸಗಿದ ವೈದ್ಯರನ್ನು ಸೇವೆಯಿಂದ ಅಮಾನತು ಮಾಡಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಮೃತ ವ್ಯಕ್ತಿಯ ಮನೆಯಿಂದ ಸಮುದಾಯ ಆರೋಗ್ಯ ಕೇಂದ್ರದವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಆರೋಗ್ಯ ಕೇಂದ್ರದ ಮುಂದೆ ಧರಣಿ ಕೈಗೊಳ್ಳಲಾಯಿತು. ತಾಲ್ಲೂಕು ವೈದ್ಯಾಧಿಕಾರಿ ಡಾ. ಸತೀಶ ತಿವಾರಿ ಹಾಗೂ ಆಡಳಿತ ವೈದ್ಯಾಧಿಕಾರಿ ಡಾ. ಶ್ರೀಶೈಲ ಹುಕ್ಕೇರಿ ಅವರು ಪ್ರತಿಭಟನಕಾರರ ಮನವೊಲಿಸಲು ಯತ್ನಸಿದರು.
ತಹಶೀಲ್ದಾರ್ ವಿನಯಾ ಹೂಗಾರ ಅವರು ಸ್ಥಳಕ್ಕೆ ಆಗಮಿಸಿ, ಪ್ರತಿಭಟನಕಾರರೊಂದಿಗೆ ಮಾತನಾಡಿದರು. ಜಿಲ್ಲಾ ಆರೋಗ್ಯಾಧಿಕಾರಿ ಜೊತೆ ಮಾತನಾಡಿ, ಕರ್ತವ್ಯಲೋಪ ಎಸಗಿದ ವೈದ್ಯರ ವಿರುದ್ಧ ಕ್ರಮ ಜರುಗಿಸಲು ಸೂಚಿಸಿದರು. ಆಡಳಿತ ವೈದ್ಯಾಧಿಕಾರಿಗಳಿಂದ ಈ ಕುರಿತು ಪತ್ರ ಬರೆಯಿಸಿ, ಅದನ್ನು ಪ್ರತಿಭಟನಕಾರರಿಗೆ ನೀಡಿದರು. ಮುಂದೆ ಹೀಗಾಗದಂತೆ ನೋಡಿಕೊಳ್ಳುವ ಭರವಸೆಯನ್ನೂ ನೀಡಿದರು. ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಪಿಎಸ್ಐ ಜ್ಯೋತಿ ಖೋತ್, ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಜೈಭೀಮ ಮುತ್ತಗಿ, ಎಪಿಜೆ ಅಬ್ದುಲ್ ಕಲಾಂ ಫೌಂಡೇಷನ್ ಅಧ್ಯಕ್ಷ ಮಹಮ್ಮದ್ ಶಫೀಕ ಇನಾಮದಾರ, ಬೇಪಾರಿ ಸಮಾಜದ ಅಧ್ಯಕ್ಷ ರಫೀಕ್ ಬೇಪಾರಿ, ಎಂ.ಕೆ. ಚೋರಗಸ್ತಿ, ಈದಗಾ ಸಮಿತಿ ಸದಸ್ಯ ಮುರ್ತುಜಾ ಮೈತ್ರಿ, ಮಂಜೂರ ಅಹಮದ್ ಬೇಪಾರಿ, ಹುಸೇನ ಜಮಾದಾರ, ಮೈನು ಬೇಪಾರಿ, ನಿಸಾರ ಬೇಪಾರಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.