ADVERTISEMENT

ತಾಂಬಾ | ದುರಸ್ತಿ ಕಾಣದ ತಾಂಬಾ–ಹಿರೇಮಸಳಿ ರಸ್ತೆ

ಸಿದ್ದು ತ.ಹತ್ತಳ್ಳಿ
Published 18 ಜನವರಿ 2026, 2:43 IST
Last Updated 18 ಜನವರಿ 2026, 2:43 IST
<div class="paragraphs"><p>ಹದಗೆಟ್ಟಿರುವ ತಾಂಬಾ–ಹಿರೇಮಸಳಿ ಸಂಪರ್ಕ ರಸ್ತೆ&nbsp;</p></div>

ಹದಗೆಟ್ಟಿರುವ ತಾಂಬಾ–ಹಿರೇಮಸಳಿ ಸಂಪರ್ಕ ರಸ್ತೆ 

   

ತಾಂಬಾ: ಗ್ರಾಮದಿಂದ 8 ಕಿ.ಮೀ. ಅಂತರದಲ್ಲಿರುವ ಹಿರೇಮಸಳಿ ಗ್ರಾಮದವರಿಗಿನ ರಸ್ತೆ ತೀರಾ ಹದಗೆಟ್ಟಿದ್ದು, ಆಯ ತಪ್ಪಿದರೆ ಅಪಾಯ ಕಟ್ಟಿಟ್ಟಬುತ್ತಿ ಎಂಬಂತಹ ಪರಿಸ್ಥಿತಿ
ಇದೆ. 

ರಸ್ತೆಯ ತುಂಬಾ ಗುಂಡಿಗಳಿದ್ದು, ಇಕ್ಕೆಲಗಳಲ್ಲಿ ಜಾಲಿ ಗಿಡಗಳು ಆಳೆತ್ತರ ಬೆಳೆದಿವೆ. ಎರಡೂ ಗ್ರಾಮಗಳ ಜನರು ಎಚ್ಚರಿಕೆಯಿಂದ ವಾಹನ ಚಲಾಯಿಸಿ ಊರು ತಲುಪಲು ಸುಮಾರು ಒಂದು ಗಂಟೆ ಬೇಕಾಗುತ್ತದೆ. ಇದರಿಂದ ಗ್ರಾಮಗಳ ಜನರು ತೀವ್ರ ಸಂಕಷ್ಟಕ್ಕೀಡಾಗಿದ್ದಾರೆ.

ADVERTISEMENT

ವಿಜಯಪುರದಿಂದ ಮಿರಗಿಗೆ ಹೋಗುವ ವಾಹನಗಳು ಹಿರೇಮಸಳಿ, ತಾಂಬಾ, ಕೆಂಗನಾಳ, ಶಿರಕನಳ್ಳಿ, ಮುತ್ತಿತರ ಗ್ರಾಮಗಳ ಮೂಲಕ ಸಂಚರಿಸಬೇಕು. ಮುಖ್ಯ ರಸ್ತೆ ಆಗಿರುವುದರಿಂದ ದಿನವಿಡೀ ವಾಹನಗಳ ದಟ್ಟಣೆ ಇರುತ್ತದೆ. 

ವಾಹನಗಳ ಎಷ್ಟೇ ಹುಷಾರಾಗಿ ಸಾಗಿದರೂ ಟೈರ್‌ಗೆ ಕಲ್ಲು ಸಿಲುಕಿ ಸಿಡಿದರೆ ರಸ್ತೆ ಪಕ್ಕದಲ್ಲಿ ಓಡಾಡುವ ಜನರು ಗಾಯಗೊಂಡ ಹಲವು ನಿದರ್ಶನಗಳಿವೆ. ವಾಹನಗಳ ಚಕ್ರದ ಜೊತೆಗೆ ಮೇಲೇಳುವ ದೂಳು, ಜನರನ್ನು ಆರೋಗ್ಯ ಸಮಸ್ಯೆಗೂ
ಸಿಲುಕಿಸುತ್ತಿದೆ.

ರೋಗಿಗಳ ಪರದಾಟ: ತಾಂಬಾ ಗ್ರಾಮದಲ್ಲಿ ಸರ್ಕಾರಿ ಆಸ್ಪತ್ರೆ ಇರುವುದರಿಂದ ಸುತ್ತಲಿನ ಗ್ರಾಮಗಳ ಜನರು ಆರೋಗ್ಯ ಸೇವೆಗೆ ಇಲ್ಲಿಗೆ ಬರಬೇಕಿದೆ. ಹದಗೆಟ್ಟ ರಸ್ತೆಯಲ್ಲೇ ಪಯಣಿಸಬೇಕಿರುವುದರಿಂದ ಆರೋಗ್ಯ ಸಮಸ್ಯೆ ಉಲ್ಬಣವಾಗುತ್ತದೆ. ತುರ್ತು ಸಂದರ್ಭಗಳಲ್ಲಿ ಪರಿಸ್ಥಿತಿ ಇನ್ನಷ್ಟು ಬಿಗಡಾಯಿಸುತ್ತದೆ ಎನ್ನುತ್ತಾರೆ ಗ್ರಾಮಸ್ಥರು.

‘ರಸ್ತೆ ದುರಸ್ತಿಗಾಗಿ ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ಗ್ರಾಮಸ್ಥ ಪುಂಡಲಿಕ ಕಪಾಲಿ ತಿಳಿಸಿದರು.

‘ರಸ್ತೆ ದುರಸ್ತಿಗಾಗಿ ಸಾಕಷ್ಟಯ ಅನುದಾನ ಬರುತ್ತದೆ. ಆದರೆ, ಉತ್ತಮ ರಸ್ತೆಗಳ ನಿರ್ಮಿಸಲು ಅಧಿಕಾರಿಗಳಿಂದ ಸಾಧ್ಯವಾಗಿಲ್ಲ. ತಾತ್ಕಾಲಿಕವಾಗಿ ತಗ್ಗು–ಗುಂಡಿಗಳನ್ನು ಮುಚ್ಚಲೂ ಮುಂದಾಗುತ್ತಿಲ್ಲ. ಇದರಿಂದಾಗಿ ಜನರಿಗೆ ತೊಂದರೆ ಹೆಚ್ಚುತ್ತಿದೆ’ ಎಂದು ಅಲವತ್ತುಕೊಂಡರು.

ಕಳೆದ ವರ್ಷ ಹೆಚ್ಚು ಮಳೆಯಾಗಿದ್ದರಿಂದ ಬಹುತೇಕ ರಸ್ತೆಗಳು ಹಾಳಾಗಿವೆ. ಈ ಬಗ್ಗೆ ಶಾಸಕ ಯಶವಂತರಾಯನಗೌಡ ಪಾಟೀಲರ ಗಮನಕ್ಕೆ ತರಲಾಗಿದೆ. ಆದ್ಯತೆ ಮೇರೆಗೆ ರಸ್ತೆ ಸುಧಾರಣೆ ಮಾಡಲಾಗುತ್ತದೆ.
ದಯಾನಂದ ಮಠ, ಎಇಇ, ಲೋಕೋ‍ಪಯೋಗಿ ಇಲಾಖೆ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.