ADVERTISEMENT

ಕಾಂಗ್ರೆಸ್‌‌ ಸಂಘಟನೆಗೆ ‘ಮಿಷನ್‌ ನಾರಿಶಕ್ತಿ’

ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 10 ಜನವರಿ 2021, 13:19 IST
Last Updated 10 ಜನವರಿ 2021, 13:19 IST
ವಿಜಯಪುರ ನಗರದಲ್ಲಿ ಬೃಹತ್ ಗುಂಡಿ ಬಿದ್ದು ನೀರು ತುಂಬಿಕೊಂಡಿರುವ ಜೋಡು ಗುಮ್ಮಟದ ಎದುರಿನ ರಸ್ತೆಯಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ಕಾಗದದ ದೋಣಿಗಳನ್ನು ತೇಲಿಬಿಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು
ವಿಜಯಪುರ ನಗರದಲ್ಲಿ ಬೃಹತ್ ಗುಂಡಿ ಬಿದ್ದು ನೀರು ತುಂಬಿಕೊಂಡಿರುವ ಜೋಡು ಗುಮ್ಮಟದ ಎದುರಿನ ರಸ್ತೆಯಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ಕಾಗದದ ದೋಣಿಗಳನ್ನು ತೇಲಿಬಿಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದರು   

ವಿಜಯಪುರ: ರಾಜ್ಯದ ಹಳ್ಳಿ, ಹಳ್ಳಿಗಳಲ್ಲಿ ಕಾಂಗ್ರೆಸ್‌ ಪಕ್ಷವನ್ನು ಸದೃಡಗೊಳಿಸುವ ಉದ್ದೇಶದಿಂದ ‘ಮಿಷನ್‌ ನಾರಿಶಕ್ತಿ’ ಸಂಘಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್‌ ತಿಳಿಸಿದರು.

ನಗರದ ಕಾಂಗ್ರೆಸ್‌ ಕಚೇರಿಯಲ್ಲಿ ಭಾನುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಿಷನ್‌ ನಾರಿಶಕ್ತಿ’ ಮೂಲಕ ಪ್ರತಿ ಬೂತ್‌ ಮತ್ತು ಬ್ಲಾಕ್‌ ಮಟ್ಟದಲ್ಲಿ ಕಾಂಗ್ರೆಸ್‌ ಅನ್ನು ಸದೃಡವಾಗಿ ಕಟ್ಟಿ ಜನರ ಧ್ವನಿಯನ್ನಾಗಿ ರೂಪಿಸಲಾಗುವುದು ಎಂದರು.

ಪ್ರತಿ ಬೂತ್ ಮಟ್ಟದಲ್ಲಿ 5 ರಿಂದ 10 ಮಹಿಳೆಯರನ್ನು ಒಳಗೊಂಡ ಮಿಷನ್‌ ನಾರಿಶಕ್ತಿ ತಂಡವು ಮನೆ, ಮನೆಗೆ ತೆರಳಿ ಕೇಂದ್ರ, ರಾಜ್ಯ ಸರ್ಕಾರದ ಜನವಿರೋಧಿ ನೀತಿಗಳ ಬಗ್ಗೆ ಹಾಗೂ ಹಿಂದಿನ ಕಾಂಗ್ರೆಸ್‌ ಸರ್ಕಾರಗಳ ಅವಧಿಯಲ್ಲಿ ಆಗಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ಜಾಗೃತಿ ಮೂಡಿಸಲಿದೆ ಎಂದು ಹೇಳಿದರು.

ADVERTISEMENT

ಅನ್ನದಾತರ ಕಡೆಗೆ ನಡಿಗೆ:ನವದೆಹಲಿಯಲ್ಲಿ ನಡೆಯುತ್ತಿರುವ ರೈತರ ಹೋರಾಟವನ್ನು ಬೆಂಬಲಿಸಿ ‘ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರ ನಡಿಗೆ ಅನ್ನದಾತರ ಕಡೆಗೆ’ ಎಂಬ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಮಹಿಳಾ ಕಾರ್ಯಕರ್ತೆಯರು ರೈತರೊಂದಿಗೆ ಹೊಲಕ್ಕೆ ತೆರಳಿ ಅವರೊಂದಿಗೆ ಕೃಷಿ ಕಾರ್ಯದಲ್ಲಿ ತೊಡಗಿ ಬಳಿಕ ಅವರಿಗೆ ಸನ್ಮಾನಿಸುವ ಜೊತೆಗೆ ಕೇಂದ್ರ ಸರ್ಕಾರದ ಕರಾಳ ಕೃಷಿ ಕಾಯ್ದೆಗಳ ಬಗ್ಗೆ ಅರಿವು ಮೂಡಿಸಲಾಗುವುದು ಎಂದು ಹೇಳಿದರು.

ಸಾಮಾಜಿಕ ಜಾಲತಾಣದ ಮೂಲಕ ಸುಳ್ಳು ಸುದ್ದಿ ಹಬ್ಬಿಸುವ ಬಿಜೆಪಿ, ಆರ್‌ಎಸ್‌ಎಸ್‌ಗೆ ಪ್ರತಿಯಾಗಿ ಮಹಿಳಾ ಕಾಂಗ್ರೆಸ್‌ ವತಿಯಿಂದಲೂ ಸಾಮಾಜಿಕ ಜಾಲತಾಣಗಳ ಮೂಲಕವೇಬಿಜೆಪಿ ವೈಫಲ್ಯವನ್ನು ಜನರಿಗೆ ತಿಳಿಸುವ ಮೂಲಕ ಸೂಕ್ತ ಎದುರೇಟು ನೀಡಲಾಗುವುದು ಎಂದರು.

ನೆರವಾದ ಯೋಜನೆಗಳು:ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲಿ ಜಾರಿಯಾದಂತಹ ನರೇಗಾ, ಅನ್ನಭಾಗ್ಯ ಮತ್ತಿತರರ ಯೋಜನೆಗಳು ಕೋವಿಡ್‌ ಸಂಕಷ್ಟದಲ್ಲಿ ಜನರಿಗೆ ಆಸರೆಯಾದವು. ಒಂದು ವೇಳೆ ಈ ಕಾರ್ಯಕ್ರಮಗಳು ಇಲ್ಲವಾಗಿದ್ದರೆ ಬಡವರು, ರೈತರು, ಕೂಲಿಕಾರ್ಮಿಕರು ಮತ್ತಷ್ಟು ಸಂಕಷ್ಟಕ್ಕೆ ಒಳಗಾಗುತ್ತಿದ್ದರು ಎಂದು ಹೇಳಿದರು.

ಮಾಧ್ಯಮಗಳಿಗೆ ಸವಾಲು:‘ದೆಹಲಿಯಲ್ಲಿ ರೈತರು ಪ್ರತಿಭಟನೆ ನಿರತವಾಗಿರುವಾಗ ರಾಹುಲ್‌ ಗಾಂಧಿ ಇಟಲಿ ಪ್ರವಾಸ ಕೈಗೊಂಡಿರುವುದು ಎಷ್ಟು ಸರಿ’ ಎಂದು ಖಾಸಗಿ ಸುದ್ದಿ ವಾಹಿನಿಯೊಂದರಲ್ಲಿ ಚರ್ಚಿಸಿರುವುದು ಎಷ್ಟು ಸರಿ ಎಂದು ಅವರು ಪ್ರಶ್ನಿಸಿದರು.

ದೇಶದ ರೈತರ ಹೋರಾಟಕ್ಕೆ ಸ್ಪಂದಿಸಬೇಕಾದವರು ಪ್ರಧಾನಿಯೋ ಅಥವಾ ವಿರೋಧ ಪಕ್ಷದ ಮುಖಂಡ ರಾಹುಲ್‌ ಗಾಂಧಿಯೋ ಎಂಬ ಕನಿಷ್ಠ ಪ್ರಜ್ಞೆ ಸುದ್ದಿ ವಾಹಿನಿಗೆ ಇಲ್ಲದಿರುವುದು ಖಂಡನೀಯ. ನಿಮಗೆ ಧೈರ್ಯವಿದ್ದರೆ ಈ ಬಗ್ಗೆ ಪ್ರಧಾನಿಯನ್ನು ಪ್ರಶ್ನಿಸಿ ಎಂದು ಸವಾಲು ಹಾಕಿದರು.

ಕೋವಿಡ್‌ ಸಂದರ್ಭದಲ್ಲಿ ಜನರಿಗೆ ಸಹಾಯವಾಗಬೇಕಿದ್ದ, ನೆರವು ನೀಡಬೇಕಾಗಿದ್ದವಿಜಯಪುರ ಸಂಸದರು ಕಾಣಿಯಾಗಿದ್ದಾರೆ ಎಂದು ಹೇಳಿದರು.

ಮಹಿಳಾ ಕಾಂಗ್ರೆಸ್ ವಿಜಯಪುರ ಜಿಲ್ಲಾ ಘಟಕದ ಅಧ್ಯಕ್ಷೆ ವಿದ್ಯಾರಾಣಿ ತುಂಗಳಾ, ಜಯಶ್ರೀ ಮರಾಠೆ, ಕಾಂತಾ ನಾಯಕ, ವಿದ್ಯಾವತಿ ಅಂಕಲಗಿ, ತಿಕೋಟಾ ತಾಲ್ಲೂಕು ಪಂಚಾಯ್ತಿ ಅಧ್ಯಕ್ಷೆ ಪ್ರಭಾವತಿ ನಾಟಿಕರ ಸೇರಿದಂತೆ ಮಹಿಳಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ದೋಣಿ ಹರಿಬಿಟ್ಟು ಆಕ್ರೋಶ
ನಗರದಲ್ಲಿ ಗುಂಡಿ ಬಿದ್ದು ಹದಗೆಟ್ಟಿರುವ ರಸ್ತೆಗಳ ದುರಸ್ತಿಗೆ ಆಗ್ರಹಿಸಿ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಭಾನುವಾರ ವಿನೂತನವಾಗಿ ಪ್ರತಿಭಟನೆ ನಡೆಸಲಾಯಿತು.

ಬೃಹತ್ ಗುಂಡಿ ಬಿದ್ದು ನೀರು ತುಂಬಿಕೊಂಡಿರುವ ನಗರದ ಐತಿಹಾಸಿಕ ಜೋಡು ಗುಮ್ಮಟದ ಎದುರಿನ ರಸ್ತೆಯಲ್ಲಿ ಮಹಿಳಾ ಕಾಂಗ್ರೆಸ್‌ ಕಾರ್ಯಕರ್ತೆಯರು ಕಾಗದದ ದೋಣಿಗಳನ್ನು ತೇಲಿಬಿಟ್ಟು ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸರ್ಕಾರ, ಸ್ಥಳೀಯ ಶಾಸಕರು ಹಾಗೂ ಮಹಾನಗರ ಪಾಲಿಕೆ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪುಷ್ಪಾ ಅಮರನಾಥ್, ರಸ್ತೆಗಳನ್ನು ದುರಸ್ತಿ ಮಾಡಲಾಗದಷ್ಟು ಸರ್ಕಾರ ನಿರ್ಲಕ್ಷ್ಯ ತಾಳಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳು ಬಿಜೆಪಿ ಅವಧಿಯಲ್ಲಿ ನಡೆಯುತ್ತಿಲ್ಲ. ಸರ್ಕಾರ ಸಂಪೂರ್ಣ ನಿಷ್ಕ್ರಿಯವಾಗಿದೆ ಎಂದು ಆರೋಪಿಸಿದರು.‌

ಪ್ರತಿದಿನ ಸಾವಿರಾರು ವಾಹನಗಳು, ಶಾಲಾ, ಕಾಲೇಜು ವಿದ್ಯಾರ್ಥಿಗಳು, ಸಾರ್ವಜನಿಕರು ಸಂಚರಿಸುವ ಮುಖ್ಯ ರಸ್ತೆ ಹದಗೆಟ್ಟು ವರ್ಷವಾದರೂ ಕನಿಷ್ಟ ಗುಂಡಿ ಮುಚ್ಚಿ, ಸಂಚಾರ ಯೋಗ್ಯ ಮಾಡಿಲ್ಲ ಎಂದು ದೂರಿದರು.

ವಿಜಯಪುರದ ರಸ್ತೆಗಳನ್ನು ನೋಡಿದರೆ ಸಾಕು ರಾಜ್ಯ ಬಿಜೆಪಿ ಸರ್ಕಾರದ ಅವಧಿಯಲ್ಲಿ ಅಭಿವೃದ್ಧಿ ಹಳ್ಳ ಹಿಡಿದಿದೆ. ಸರ್ಕಾರ ನಡೆಸಲು ಬಿಜೆಪಿ ಯೋಗ್ಯವಾಗಿಲ್ಲ ಎಂಬುದನ್ನು ಕಾಣಬಹುದಾಗಿದೆ ಎಂದರು.

***

ಪ್ರಧಾನಿಗಳಿಗೆ ನವಿಲಿನ ಜೊತೆ ಆಟ ಆಡಲು ಸಮಯ ಇದೆ.ಆದರೆ, ರೈತರ ಜೊತೆ ಮಾತನಾಡಲು ಸಮಯವಿಲ್ಲದಂತಾಗಿದೆ
-ಪುಪ್ಪಾ ಅಮರನಾಥ್‌
ಅಧ್ಯಕ್ಷೆ, ಕೆಪಿಸಿಸಿ ಮಹಿಳಾ ಘಟಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.