ADVERTISEMENT

ಎಐಎಂಐಎಂಗೂ ಜೆಡಿಎಸ್‌ಗೂ ವ್ಯತ್ಯಾಸವಿಲ್ಲ: ಎಂ.ಬಿ.ಪಾಟೀಲ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2021, 11:30 IST
Last Updated 8 ಡಿಸೆಂಬರ್ 2021, 11:30 IST
ಎಂ.ಬಿ. ಪಾಟೀಲ
ಎಂ.ಬಿ. ಪಾಟೀಲ   

ವಿಜಯಪುರ: ಸಂಸದ ಅಸಾದುದ್ದೀನ್‌ ಓವೈಸಿ ಅವರಎಐಎಂಐಎಂ ಪಕ್ಷಕ್ಕೂ ಜೆಡಿಎಸ್‌ಗೆ ಯಾವುದೇ ವ್ಯತ್ಯಾಸವಿಲ್ಲ.ಓವೈಸಿ ಅವರ ಪಕ್ಷದಂತೆ ಜೆಡಿಎಸ್‌ ಕೂಡ ಬಿಜೆಪಿಯ ‘ಬಿ’ ಟೀಂ ಎಂಬುದರಲ್ಲಿ ಅನುಮಾನವೇ ಇಲ್ಲ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.

ನಗರದಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು,ಬಸವಕಲ್ಯಾಣ, ಸಿಂದಗಿ, ಹಾನಗಲ್‌ ಚುನಾವಣೆಯಲ್ಲಿ ಬಿಜೆಪಿಗೆ ಅನುಕೂಲವಾಗಲಿ ಎಂಬ ಕಾರಣಕ್ಕೆ ಜೆಡಿಎಸ್‌ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸಿತ್ತು. ಜೆಡಿಎಸ್‌ ಪ್ರಬಲವಾಗಿರುವ ಹಾಸನ, ಮಂಡ್ಯ, ಮೈಸೂರಿನಲ್ಲಿ ಏಕೆ ಅಲ್ಪಸಂಖ್ಯಾತ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಬಿಜೆಪಿಗೆ ಸೋಲಿನ ಭಯ: ಬಿಜೆಪಿ ಸರ್ಕಾರವು ಸೋಲಿನ ಭಯದಿಂದ ಜಿಲ್ಲಾ ಮತ್ತು ತಾಲ್ಲೂಕು ಪಂಚಾಯ್ತಿ ಚುನಾವಣೆಯನ್ನು ಬಲವಾದ ಕಾರಣವಿಲ್ಲದೇ ಮುಂದೂಡುತ್ತಾ ಬರುತ್ತಿದೆ ಎಂದು ಆರೋಪಿಸಿದರು.

ADVERTISEMENT

ವಿಧಾನ ಪರಿಷತ್‌ ಚುನಾವಣೆಯಲ್ಲಿ ಕಾಂಗ್ರೆಸ್‌ 15ಕ್ಕೂ ಹೆಚ್ಚು ಸ್ಥಾನಗಳಲ್ಲಿ ಜಯ ಗಳಿಸಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.

ವಿಶೇಷ ಪ್ಯಾಕೇಜ್‌ಗೆ ಆಗ್ರಹ: ಅಕಾಲಿಕ ಮಳೆಯಿಂದ ವಿಜಯಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ದ್ರಾಕ್ಷಿ, ದಾಳಿಂಬೆ, ಲಿಂಬೆ, ತೊಗರಿ ಸಂಪೂರ್ಣ ಹಾನಿಯಾಗಿ ರೈತರಿಗೆ ನಷ್ಠವಾಗಿದ್ದು, ಸರ್ಕಾರ ವಿಶೇಷ ಪ್ಯಾಕೇಜ್‌ ಬಿಡುಗಡೆ ಮಾಡಬೇಕು. ಈ ಕುರಿತು ಅಧಿವೇಶನದಲ್ಲಿ ಸರ್ಕಾರದ ಗಮನ ಸೆಳೆಯಲಾಗುವುದು ಎಂದರು.

ಮಹತ್ವ ಬೇಡ: ಮಾಜಿ ಶಾಸಕ ಬಿ.ಬಿ.ಚಿಮ್ಮನಕಟ್ಟಿ ಅವರಿಗೆ ವಯಸ್ಸಾಗಿದೆ. ಜೊತೆಗೆ ಅನಾರೋಗ್ಯದಲ್ಲಿದ್ದಾರೆ. ಹೀಗಾಗಿ ಅವರು ಏನು ಮಾತನಾಡುತ್ತಾರೋ ಅವರಿಗೆ ತಿಳಿಯುವುದಿಲ್ಲ. ಸಿದ್ದರಾಮಯ್ಯ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿರುವುದಕ್ಕೆ ಹೆಚ್ಚಿನ ಮಹತ್ವಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.