ADVERTISEMENT

ಬಸವ ಧರ್ಮವಿದ್ದಲ್ಲಿ ಯುದ್ಧವೇ ಇಲ್ಲ: ಸಚಿವ ಎಂ.ಬಿ. ಪಾಟೀಲ‌

​ಪ್ರಜಾವಾಣಿ ವಾರ್ತೆ
Published 7 ಮೇ 2025, 13:50 IST
Last Updated 7 ಮೇ 2025, 13:50 IST
ಬಬಲೇಶ್ವರ ತಾಲ್ಲೂಕಿನ ಧನ್ಯಾಳದಲ್ಲಿ ವಿಶ್ವಗುರು ಬಸವೇಶ್ವರರ ಮೂರ್ತಿಯನ್ನು‌‌ ಉದ್ಘಾಟಿಸಿದ ಬಳಿಕ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು
ಬಬಲೇಶ್ವರ ತಾಲ್ಲೂಕಿನ ಧನ್ಯಾಳದಲ್ಲಿ ವಿಶ್ವಗುರು ಬಸವೇಶ್ವರರ ಮೂರ್ತಿಯನ್ನು‌‌ ಉದ್ಘಾಟಿಸಿದ ಬಳಿಕ ಸಚಿವ ಎಂ.ಬಿ. ಪಾಟೀಲ ಮಾತನಾಡಿದರು   

ಬಬಲೇಶ್ವರ: ‘ದಯವೇ ಧರ್ಮದ ಮೂಲವಯ್ಯ’ ಎಂಬ ತಿರುಳು ಹೊಂದಿರುವ ಬಸವ ಧರ್ಮ ಪಾಲನೆಯಾದರೆ ವಿಶ್ವದಲ್ಲಿ ಯುದ್ಧದ ವಾತಾವರಣವೇ ಇರದು. ಮುಂದಿನ ದಿನಗಳಲ್ಲಿ ಬಸವ ಭಾರತವಾಗಲಿದೆ. ಆಗ ದೇಶದಲ್ಲಿ ಕಾಯಕ, ದಾಸೋಹ, ಸಮಾನತೆ, ಸಾಮರಸ್ಯ ನೆಲೆಸಲಿದೆ’ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ‌ ಆಶಯ ವ್ಯಕ್ತಪಡಿಸಿದರು.

ತಾಲ್ಲೂಕಿನ ಧನ್ಯಾಳ ಗ್ರಾಮದಲ್ಲಿ ಬುಧವಾರ ವಿಶ್ವಗುರು ಬಸವೇಶ್ವರರ ಮೂರ್ತಿ ಅನಾವರಣ ಮಾಡಿ ಅವರು ಮಾತನಾಡಿದರು.

‘ಬಸವಣ್ಣನವರು‌ ಲಿಂಗಾಯತ ಧರ್ಮ ಸ್ಥಾಪಿಸಿದ 12ನೇ ಶತಮಾನದಿಂದ 1881ರ ವರಗೆ ಲಿಂಗಾಯತ ಪ್ರತ್ಯೇಕ ಧರ್ಮವಾಗಿತ್ತು. ಆದರೆ, 1881ರಲ್ಲಿ ಮೈಸೂರು ಅರಸರು ಲಿಂಗಾಯತರನ್ನು ಪ್ರತ್ಯೇಕ ಧರ್ಮದ ಕಾಲಂನಿಂದ ತೆಗೆದು ಹಿಂದೂ ಧರ್ಮದ ಶೂದ್ರ ವರ್ಣದಲ್ಲಿ ಸೇರಿಸಿದರು’ ಎಂದು ಅವರು ಹೇಳಿದರು.

ADVERTISEMENT

ಧನ್ಯಾಳ ಗ್ರಾಮದಲ್ಲಿ ಮಲ್ಲಿಕಾರ್ಜುನ ದೇವಸ್ಥಾನ ಅಭಿವೃದ್ಧಿಗೆ ₹10 ಲಕ್ಷ ಆರ್ಥಿಕ ನೆರವು ನೀಡುವುದಾಗಿ ತಿಳಿಸಿದರು.

ಕೂಡಲ‌ಸಂಗಮ ಲಿಂಗಾಯತ ಪಂಚಮಸಾಲಿ ಪೀಠದ ಬಸವಜಯ ಮೃತ್ಯುಂಜಯ ಸ್ವಾಮೀಜಿ ಮಾತನಾಡಿ, ‘ಮಠದಲ್ಲಿ ಪ್ರಸಾದ ಸೇವಿಸಿರುವುದನ್ನು ಜನರು ಮರೆಯಬಹುದು. ಆದರೆ, ಹೊಲಗಳಿಗೆ ನೀರು ಕೊಟ್ಟವರನ್ನು ಎಂದೂ ಮರೆಯಬಾರದು. ಅನ್ನದಾತರು‌ ಸದಾ ಅವರ ಬೆನ್ನಿಗೆ ನಿಲ್ಲಬೇಕು. ತಾವು ವಹಿಸಿಕೊಂಡ ಖಾತೆ, ಪ್ರತಿನಿಧಿಸುವ ಮತಕ್ಷೇತ್ರ ಹಾಗೂ ಧರ್ಮಕ್ಕೆ ನ್ಯಾಯ ಒದಗಿಸುವ ನಾಯಕರ ಜೊತೆ ನಾವೆಲ್ಲರೂ ಸದಾ ಇರಬೇಕು’ ಎಂದು ಹೇಳಿದರು.

ಮುದಗಲ್ ತಿಮ್ಮಾಪೂರದ ಕಲ್ಯಾಣಾಶ್ರಮ ಮಹಾಂತೇಶ್ವರ ಮಠದ ಮಹಾಂತ ಸ್ವಾಮೀಜಿ ಮಾತನಾಡಿ, ‘ವಿಶ್ವಗುರು ಬಸವಣ್ಣನವರು ತಾತ್ವಿಕ ತಳಹದಿಯ ಮೇಲೆ ಸಾತ್ವಿಕ ಸಮಾಜ ಕಟ್ಟಿದ್ದಾರೆ. ರಾಷ್ಟ್ರ ಮತ್ತು ವಿಶ್ವ ಉಳಿಯಬೇಕಾದರೆ ಬಸವಾದಿ ಶರಣರ ತತ್ವಗಳನ್ನು ಜೀವನದಲ್ಲಿ, ಮನೆಮನೆಗಳಲ್ಲಿ ಅಳವಡಿಸಿಕೊಳ್ಳಬೇಕು’ ಎಂದರು.

ಗ್ರಾಮದ ಮುಖಂಡ ಚಂದ್ರಶೇಖರ ಗಂಟೆಪ್ಪಗೋಳ, ವಿಜಯಪುರ ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮೀಜಿ, ನಿಡೋಣಿ ಚನ್ನವೀರೇಶ್ವರ ವಿರಕ್ತಮಠದ ಸಿದ್ದಲಿಂಗೇಶ್ವರ ಸ್ವಾಮೀಜಿ, ಹೆಬ್ಬಾಳಹಟ್ಟಿ ಚಂದ್ರಗಿರಿ ಸದಾಶಿವ ಮಠದ ವೇದಮೂರ್ತಿ ಸಿದ್ದಲಿಂಗಯ್ಯ ಹಿರೇಮಠ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.