ADVERTISEMENT

ಶಾಸಕ ಯತ್ನಾಳಗೆ ಕೊಲೆ ಬೆದರಿಕೆ: ಕಿಡಿಗೇಡಿಗಳ ಕೃತ್ಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2025, 23:45 IST
Last Updated 11 ಏಪ್ರಿಲ್ 2025, 23:45 IST
ಬಸನಗೌಡ ಪಾಟೀಲ ಯತ್ನಾಳ
ಬಸನಗೌಡ ಪಾಟೀಲ ಯತ್ನಾಳ   

ವಿಜಯಪುರ: ‘ಮುಹಮ್ಮದ್‌ ಪೈಗಂಬರ್‌ ಅವರಿಗೆ ಅವಮಾನಿಸಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳಗೆ ಏಪ್ರಿಲ್‌ 15 ಅಂತಿಮ ದಿನ’ ಎಂಬ ಸಂದೇಶವುಳ್ಳ ಆಡಿಯೊ ಶುಕ್ರವಾರ ‘ವಾಟ್ಸ್‌ ಆ್ಯಪ್‌’ನಲ್ಲಿ ಹರಿದಾಡಿದೆ.

ಹೀಗಾಗಿ, ಯತ್ನಾಳ ಅವರ ಬೆಂಬಲಿಗ ಗಿರೀಶ ಭಂಡಾರಕರ್‌ ಎಂಬುವರು, ‘ಯತ್ನಾಳ ಅವರಿಗೆ ಕೇಂದ್ರ ಸರ್ಕಾರ ‘ವೈ ಪ್ಲಸ್‌ ಶ್ರೇಣಿಯ ಭದ್ರತೆ ಒದಗಿಸಬೇಕು’ ಎಂದು ಪ್ರಧಾನಿ ಮೋದಿ ಅವರಿಗೆ ಇ–ಮೇಲ್‌ ಮೂಲಕ ಕೋರಿದ್ದಾರೆ.

ಸಂದೇಶ ಏನು?: ‘ವಿಜಯಪುರದ ಆಲಂಗೀರ್‌ ಸಭಾಂಗಣದಲ್ಲಿ ಎಂಎಂಸಿ ಸಭೆ ನಡೆದಿದ್ದು, ಮುಸ್ಲಿಂ ಸಮಾಜದ ಹಿರಿಯರೆಲ್ಲರೂ ಸೇರಿ ಯತ್ನಾಳ ಬಂಧನಕ್ಕೆ ಆಗ್ರಹಿಸಿ ಏಪ್ರಿಲ್‌ 15ರಂದು ವಿಜಯಪುರ ಬಂದ್‌ ನಡೆಸಲು ನಿರ್ಧರಿಸಿದ್ದೇವೆ. ಅಂದು ಒಂದು ಲಕ್ಷಕ್ಕೂ ಅಧಿಕ ಜನ ಸೇರಲಿದ್ದೇವೆ. ಅಂಬೇಡ್ಕರ್‌ ವೃತ್ತದಿಂದ ರ‍್ಯಾಲಿ ಆರಂಭಿಸಿ, ಯತ್ನಾಳ ಮನೆಗೆ ಮುತ್ತಿಗೆ ಹಾಕುತ್ತೇವೆ. ಅಂದು ಯತ್ನಾಳಗೆ ಅಂತಿಮ ದಿನವಾಗಲಿದೆ, ಮುಸ್ಲಿಮರು ಸಜ್ಜಾಗಿದ್ದೇವೆ’ ಎಂದು ಎಚ್ಚರಿಕೆ ಸಂದೇಶದಲ್ಲಿ ನೀಡಲಾಗಿದೆ. 

ADVERTISEMENT

ಬೆದರಿಕೆ ಸಂದೇಶ ನಕಲಿ: ‘ವಿಜಯಪುರದಲ್ಲಿ ಯತ್ನಾಳ ವಿರುದ್ಧ ಮುಸ್ಲಿಮರಿಂದ ಯಾವುದೇ ಸಭೆ ನಡೆದಿಲ್ಲ. ಏಪ್ರಿಲ್‌ 15ರಂದು ವಿಜಯಪುರ ಬಂದ್‌ಗೆ ಕರೆ ನೀಡಿಲ್ಲ. ಸಮಾಜದ ಹೆಸರು ಕೆಡಿಸಲು ಯತ್ನಾಳ ಬೆಂಬಲಿಗರು ನಕಲಿ ಆಡಿಯೊ ಸಂದೇಶ ಹರಿಬಿಟ್ಟಿದ್ದಾರೆ. ಈ ಬಗ್ಗೆ ತನಿಖೆಯಾಗಲಿ’ ಎಂದು ಮುಸ್ಲಿಂ ಸಮಾಜದ ಮುಖಂಡ, ವಕೀಲ ಆಸೀಫ್‌ವುಲ್ಲಾ ಖಾದ್ರಿ ತಿಳಿಸಿದ್ದಾರೆ.

ಕಿಡಿಗೇಡಿಗಳ ಕೃತ್ಯ: ‘ಮೂರು ದಿನಗಳ ಹಿಂದೆ ಕಿಡಿಗೇಡಿಗಳು ಈ ಆಡಿಯೊ ಹರಿಬಿಟ್ಟಿದ್ದಾರೆ. ಇದರ ಬಗ್ಗೆ ಖಚಿತ ಮಾಹಿತಿ ಇಲ್ಲ. ಯಾರೂ ಈ ಸಂಬಂಧ ದೂರು ನೀಡಿಲ್ಲ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ‘ಪ್ರಜಾವಾಣಿ’ಗೆ ತಿಳಿಸಿದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.