ADVERTISEMENT

ಪ್ರಾಥಮಿಕ ಆರೋಗ್ಯ ಕೇಂದ್ರ: ರಾಷ್ಟ್ರಮಟ್ಟದ ಪ್ರಶಸ್ತಿ ಅಂತಿಮ ಸುತ್ತಿಗೆ ಆಯ್ಕೆ

ಜಿಲ್ಲೆಯ ಹೆಮ್ಮೆ ತಿಕೋಟಾ ಪ್ರಾಥಮಿಕ ಆರೋಗ್ಯ ಕೇಂದ್ರ

​ಪ್ರಜಾವಾಣಿ ವಾರ್ತೆ
Published 28 ಜೂನ್ 2020, 14:19 IST
Last Updated 28 ಜೂನ್ 2020, 14:19 IST
ತಿಕೋಟಾ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ
ತಿಕೋಟಾ ಪಟ್ಟಣದಲ್ಲಿರುವ ಪ್ರಾಥಮಿಕ ಆರೋಗ್ಯ ಕೇಂದ್ರದ ಕಟ್ಟಡ   

ತಿಕೋಟಾ: ಮೂಲ ಸೌಕರ್ಯ, ಸ್ವಚ್ಛತೆ ಹಾಗೂ ಸಾರ್ವಜನಿಕರಿಗೆ ಸೌಲಭ್ಯ ಒದಗಿಸುತ್ತಿರುವ ಪಟ್ಟಣದ ಪ್ರಾಥಮಿಕ ಆರೋಗ್ಯ ಕೇಂದ್ರವು ರಾಷ್ಟ್ರೀಯ ಆರೋಗ್ಯ ಗುಣಮಟ್ಟ ಭರವಸೆ ಪ್ರಶಸ್ತಿಯ ಅಂತಿಮ ಸುತ್ತಿಗೆ ಆಯ್ಕೆಯಾಗಿದೆ.

ಆಸ್ಪತ್ರೆಯಲ್ಲಿ 33 ಜನ ಸಿಬ್ಬಂದಿ ಇದ್ದು, ಉತ್ತಮ ಪರಿಸರ ಹಾಗೂ ಸ್ವಚ್ಛತೆಯಿಂದ ಕೂಡಿದೆ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಕುಳಿತುಕೊಳ್ಳಲುಆಸನ ವ್ಯವಸ್ಥೆ ಹಾಗೂ ಪ್ರತ್ಯೇಕ ಚಿಕಿತ್ಸಾ ಘಟಕವನ್ನೂ ಹೊಂದಿದೆ. ಗರ್ಭಿಣಿಯರಿಗೆ ಲೇಬರ್ ಕೋಣೆ, ಒಪಿಡಿ, ಹಾಲುಣಿಸುವ ಕೋಣೆ, ಡ್ರೆಸ್ಸಿಂಗ್‌ ಕೋಣೆ, ಕಂಪ್ಯೂಟರ್ ಕೋಣೆ, ಲ್ಯಾಬ್, ಡ್ರಗ್ಸ್‌ ಕೊಠಡಿ, ಪೋಸ್ಟ್‌ ಮಾರ್ಟಮ್‌ ಕೊಠಡಿ, ಕ್ಷಯ ರೋಗ ಘಟಕ, ನೇತ್ರ ತಪಾಸಣೆ ವಿಭಾಗ, ಸಭಾಂಗಣ ಹಾಗೂ ಬಾಣಂತಿಯರಿಗೆ ಪ್ರತ್ಯೇಕ ಕೋಣೆಗಳಿದ್ದು, ಸೊಳ್ಳೆ ಪರದೆ ಅಳವಡಿಸಿದ್ದಾರೆ.

ರೋಗಿಗಳಿಗೆ ಆರು ಬೆಡ್ ವ್ಯವಸ್ಥೆ ಇದ್ದು, ಬಾಣಂತಿಯರು ಹಾಗೂ ಶಸ್ತ್ರಚಿಕಿತ್ಸೆಗೆ ಒಳಗಾದ ಮಕ್ಕಳಿಗೆ ಪ್ರತ್ಯೇಕ ಬೆಡ್ ವ್ಯವಸ್ಥೆಯಿದೆ. ಸಿಬ್ಬಂದಿಯು ನಿಗದಿ ದಿನಗಳಂದು ಕೊಡ್ ಪ್ರಕಾರ ಬಣ್ಣದ ಬಟ್ಟೆ ಹಾಕಿಕೊಳ್ಳುತ್ತಾರೆ. ಆಸ್ಪತ್ರೆಯಲ್ಲಿ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ. ಹೊಸದಾಗಿ ₹2 ಕೋಟಿ ವೆಚ್ಚದಲ್ಲಿ ನೂತನ ಆಸ್ಪತ್ರೆ ಕಟ್ಟಡ ಈಚೆಗೆ ಉದ್ಘಾಟನೆಗೊಂಡಿದೆ.

ADVERTISEMENT

ಆಸ್ಪತ್ರೆಯ ಆವರಣದಲ್ಲಿ 200ಕ್ಕೂಹೆಚ್ಚುಸಸಿಗಳನ್ನು ನೆಟ್ಟು ಪೋಷಿಸಲಾಗುತ್ತಿದೆ. ಉತ್ತಮ ಕೈತೋಟ ಹೊಂದಿದ್ದು, ಆಯುರ್ವೇದಿಕ್ ಗಿಡಮೂಲಿಕೆಗಳನ್ನು ಬೆಳೆಸಲಾಗಿದೆ. ಆವರಣದಲ್ಲಿ ಜೈವಿಕ ಗೊಬ್ಬರ ತಯಾರಿಕಾ ಘಟಕವಿದೆ. ಆಸ್ಪತ್ರೆಯಲ್ಲಿನಾಲ್ಕುಅಗ್ನಿನಂದಕಗಳನ್ನು ಇಡಲಾಗಿದೆ. ಆಸ್ಪತ್ರೆಯ ತಾಜ್ಯ ವಿಲೇವಾರಿ ಮಾಡಲು ಪ್ರತ್ಯೇಕ ಕೋಣೆಯ ವ್ಯವಸ್ಥೆ ಇದೆ. ಯಾವುದೇ ಸೊಂಕು ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಸಿರಿಂಜ್‌, ಬ್ಯಾಂಡೇಜ್‌ ಹಾಗೂ ನಿರುಪಯುಕ್ತ ವಸ್ತುಗಳ ಸಂಗ್ರಹ ಹಾಗೂ ವಿಲೇವಾರಿಗೆ ಆದ್ಯತೆ ಕೊಡಲಾಗುತ್ತಿದೆ.

ಪ್ರಶಸ್ತಿಗೆ ಭಾಜನ
2018–19ರಲ್ಲಿ ಈ ಆಸ್ಪತ್ರೆಗೆ ಆರೋಗ್ಯ ಸೌಲಭ್ಯ, ದುರಸ್ತಿ, ನೈರ್ಮಲ್ಯ ಹಾಗೂ ಶುಚಿತ್ವ ಕಾಪಾಡುವಿಕೆ, ತ್ಯಾಜ್ಯ ವಿಲೇವಾರಿ, ಸೋಂಕು ನಿಯಂತ್ರಣ , ಚಿಕಿತ್ಸೆ ಹಾಗೂ ಗುಣಮಟ್ಟ ಸುಧಾರಣೆ ನೀಡುವ ’ಕಾಯಕಲ್ಪ ಪ್ರಶಸ್ತಿ’ಯನ್ನುಕೇಂದ್ರಸರ್ಕಾರ, ರಾಜ್ಯ ಸರ್ಕಾರ ಹಾಗೂ ವಿಜಯಪುರ ಜಿಲ್ಲಾ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ದೊರೆತಿತ್ತು. ಅಲ್ಲದೇ ಆಸ್ಪತ್ರೆ ಉತ್ಕೃಷ್ಟ ಗುಣಮಟ್ಟ ಕಾಯ್ದುಕೊಂಡ ಪ್ರಯುಕ್ತ 2019-20ರಲ್ಲಿ ರಾಜ್ಯ ಗುಣಮಟ್ಟ ಖಾತ್ರಿ ಸಮಿತಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆ, ಕರ್ನಾಟಕ ಸರ್ಕಾರದ ಎನ್.ಕ್ಯೂ.ಎ.ಎಸ್ ವತಿಯಿಂದ ರಾಜ್ಯ ಪ್ರಮಾಣ ಪತ್ರ ಪ್ರಶಸ್ತಿಗೂ ಭಾಜನವಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.