ADVERTISEMENT

ವಿಜಯಪುರ, ಆಲಮಟ್ಟಿಗೆ ಪ್ರವಾಸಿಗರ ಲಗ್ಗೆ

ಗೋಳಗುಮ್ಮಟ, ಇಬ್ರಾಹಿಂರೋಜಾ, ಆಲಮಟ್ಟಿ ಉದ್ಯಾನ ಆಕರ್ಷಣೆ

ಬಸವರಾಜ ಸಂಪಳ್ಳಿ
Published 1 ಜನವರಿ 2026, 7:51 IST
Last Updated 1 ಜನವರಿ 2026, 7:51 IST
ವಿಜಯಪುರ ನಗರದ ಐತಿಹಾಸಿಕ ಗೋಳಗುಟ್ಟ ವೀಕ್ಷಣೆಗೆ ಬುಧವಾರ ಬಂದಿದ್ದ ಪ್ರವಾಸಿಗರು– ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ
ವಿಜಯಪುರ ನಗರದ ಐತಿಹಾಸಿಕ ಗೋಳಗುಟ್ಟ ವೀಕ್ಷಣೆಗೆ ಬುಧವಾರ ಬಂದಿದ್ದ ಪ್ರವಾಸಿಗರು– ಪ್ರಜಾವಾಣಿ ಚಿತ್ರ: ಸಂಜೀವ ಅಕ್ಕಿ   

ವಿಜಯಪುರ: ವಿಶ್ವ ಪ್ರಸಿದ್ಧ ಗೋಳಗುಮ್ಮಟ, ಇಬ್ರಾಹಿಂರೋಜಾ, ಬಾರಾ ಕಮಾನ್‌, ಜೋಡು ಗುಮ್ಮಟ, ಬಸವನ ಬಾಗೇವಾಡಿಯ ಬಸವ ಸ್ಮಾರಕ, ಆಲಮಟ್ಟಿಯ ಜಲಾಶಯ, ಉದ್ಯಾನವನ್ನು ಕಣ್ತುಂಬಿಕೊಳ್ಳಲು ರಾಜ್ಯ, ಹೊರರಾಜ್ಯದ ಪ್ರವಾಸಿಗರು ಜಿಲ್ಲೆಗೆ ಲಗ್ಗೆ ಇಟ್ಟಿದ್ದಾರೆ.

ಹೊಸ ವರ್ಷ ಹಾಗೂ ಶೈಕ್ಷಣಿಕ ಪ್ರವಾಸದ ಹಿನ್ನೆಲೆಯಲ್ಲಿ‌ ಒಂದು ವಾರದಿಂದ ‘ಸ್ಮಾರಕಗಳ ನಗರಿ’ ವಿಜಯಪುರ ಮತ್ತು ‘ಉದ್ಯಾನ‌ನಗರಿ’ ಆಲಮಟ್ಟಿಗೆ ಭೇಟಿ ನೀಡುವ ಪ್ರವಾಸಿಗರ ಸಂಖ್ಯೆ ದುಪ್ಪಟ್ಟಾಗಿದೆ. ಒಂದು ವಾರದಲ್ಲಿ 25 ಸಾವಿರಕ್ಕೂ ಅಧಿಕ ಪ್ರವಾಸಿಗರು ಆಲಮಟ್ಟಿಗೆ ಭೇಟಿ ನೀಡಿದ್ದಾರೆ.

ಹಗಲು ಮೈಸುಡುವ ಬಿಸಿಲು, ರಾತ್ರಿ ಮೈನಡುಗಿಸುವ ಚಳಿಯನ್ನು ಲೆಕ್ಕಿಸದೇ ಪ್ರವಾಸಿಗರು ಜಿಲ್ಲೆಗೆ ದಾಂಗುಡಿ ಇಟ್ಟಿದ್ದಾರೆ. ಹೋಟೆಲ್‌, ವಸತಿಗೃಹಗಳು, ಖಾನಾವಳಿಗಳು ‍ಪ್ರವಾಸಿಗರಿಂದ ತುಂಬಿತುಳುಕುತ್ತಿವೆ.

ಆಲಮಟ್ಟಿಯಲ್ಲಿ ವಸತಿ, ಪಾರ್ಕಿಂಗ್ ಸಮಸ್ಯೆ ಎದುರಾಗಿದೆ. ಸಂಜೆಯಾದೊಡನೆ ಆಲಮಟ್ಟಿಗೆ ಪ್ರವಾಸಿಗರು ಲಗ್ಗೆ ಇಡುತ್ತಿದ್ದು, ಬಸ್, ಖಾಸಗಿ ವಾಹನಗಳ ದರ್ಬಾರ್ ಹೆಚ್ಚಾಗಿದೆ.

ವಸತಿಗೃಹಗಳು ಭರ್ತಿ

ವರ್ಷಾಂತ್ಯದ ಹಿನ್ನೆಲೆಯಲ್ಲಿ ವಿಜಯಪುರ ಮತ್ತು ಆಲಮಟ್ಟಿಯ ಬಹುತೇಕ ವಸತಿಗೃಹಗಳು, ಹೋಟೆಲ್‌ಗಳು ಮುಂಗಡವಾಗಿಯೇ ಬುಕ್ ಆಗಿವೆ. ವಸತಿ ಗೃಹಗಳ ಶುಲ್ಕವೂ ಹೆಚ್ಚಿಗೆಯಾಗಿದೆ. ಇಲ್ಲಿಯೇ ಇದ್ದು ಪರಿಸರ ತಾಣದಲ್ಲಿ ಮೋಜು ಮಸ್ತಿಯೊಂದಿಗೆ ಹೊಸ ವರ್ಷಾಚರಣೆ ಮಾಡಲು ಪ್ರವಾಸಿಗರು, ಯುವಕರ ತಂಡ ‌ಲಗ್ಗೆ ಇಟ್ಟಿದೆ.

ಕುಡಿವ ನೀರಿನ ಸಮಸ್ಯೆ

ಶೈಕ್ಷಣಿಕ ಪ್ರವಾಸಕ್ಕಾಗಿ ರಾಜ್ಯದ ನಾನಾ ಕಡೆಗಳಿಂದ ಮಕ್ಕಳು ಪ್ರವಾಸಕ್ಕೆ ಬರುತ್ತಿದ್ದು, ಆಲಮಟ್ಟಿಯ ಪಾರ್ಕಿಂಗ್ ಲಾಟ್ ಸೇರಿದಂತೆ ನಾನಾ ಕಡೆ ಕುಳಿತು ಊಟ ಮಾಡುತ್ತಾರೆ. ಆದರೆ, ಎಲ್ಲಿಯೂ ಸಮರ್ಪಕ, ಸಾಕಷ್ಟು ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಮಕ್ಕಳು ಕುಡಿಯುವ ನೀರಿಗೆ ಪರದಾಡುತ್ತಿದ್ದಾರೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದರು.

ಕೆಬಿಜೆಎನ್ಎಲ್ ಹಿರಿಯ ಅಧಿಕಾರಿಗಳು ಉದ್ಯಾನದ ಹೊರಗಡೆ ಎಲ್ಲೆಡೆ ಸಂಚರಿಸಿ ಮೂಲ ಸೌಕರ್ಯ ಕಲ್ಪಿಸಬೇಕೆಂದು ಅವರು ಆಗ್ರಹಿಸಿದರು.

ಶೈಕ್ಷಣಿಕ ಪ್ರವಾಸಕ್ಕೆ ಆಗಮಿಸುವ ಶಾಲಾ ಮಕ್ಕಳಿಗೆ ವಸತಿ ವ್ಯವಸ್ಥೆ ಇಲ್ಲದ್ದರಿಂದ ಸುತ್ತಮುತ್ತಲಿನ ದೇವಾಲಯ, ಶಾಲೆಯಲ್ಲಿ ತಂಗುತ್ತಿದ್ದಾರೆ.

ವಾಹನಗಳ ಪಾರ್ಕಿಂಗ್ ಹಾಗೂ ಕುಡಿಯುವ ನೀರಿನ ಸಮಸ್ಯೆ ಹೆಚ್ಚಿದೆ ತಕ್ಷಣ ಕ್ರಮ ಕೈಗೊಳ್ಳಬೇಕು.
– ಶೇಖರ, ಬಳ್ಳಾರಿ ಪ್ರವಾಸಿಗ
ಪಾರ್ಕಿಂಗ್ ಸಮಸ್ಯೆಯ ಬಗ್ಗೆ ಗೊತ್ತಿದ್ದು ಅದಕ್ಕಾಗಿ ಒಂದು ಶಾಶ್ವತ ಕ್ರಮ ಕೈಗೊಳ್ಳಲಾಗುವುದು.
– ಡಿ. ಬಸವರಾಜ, ಮುಖ್ಯ ಎಂಜಿನಿಯರ್ ಕೆಬಿಜೆಎನ್ಎಲ್ ಆಲಮಟ್ಟಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.