ಬಸವನಬಾಗೇವಾಡಿ: ಪಟ್ಟಣದಲ್ಲಿ ಬಸವೇಶ್ವರ ಜಾತ್ರೆ ನಿಮಿತ್ತ ಗೆಳೆಯರ ಬಳಗ ಹಾಗೂ ಕರವೇ ಸಂಘಟನೆಯಿಂದ ತೆಲಗಿ ರಸ್ತೆಯಲ್ಲಿರುವ ನಂದಿ ತರಕಾರಿ ಮಾರುಕಟ್ಟೆ ಆವರಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ 55 ಎಚ್. ಪಿ.ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆಯನ್ನು ಕಟ್ಟಡದ ಮೇಲೆ ಕುಳಿತು ವೀಕ್ಷಿಸುತ್ತಿದ್ದಾಗ ಪತ್ರಾಸ್ ಕುಸಿದು ಐವರು ಯುವಕರು ಬಿದ್ದು ಗಾಯಗೊಂಡಿದ್ದಾರೆ.
‘ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನಿಷೇಧಿಸಲಾಗಿದ್ದು, ಯಾವುದೇ ಕಾರಣಕ್ಕೂ ಅನುಮತಿ ನೀಡುವುದಿಲ್ಲ’ ಎಂದು ಪೊಲೀಸ್ ಇಲಾಖೆ ಹಿರಿಯ ಅಧಿಕಾರಿಗಳು ನೋಟಿಸ್ ನೀಡಿದರೂ ಆಯೋಜಕರು ಅದನ್ನು ಪರಿಗಣಿಸದೇ ಟ್ರ್ಯಾಕ್ಟರ್ ಜಗ್ಗುವ ಸ್ಪರ್ಧೆ ನಡೆಸಿದರು.
ತಾಲ್ಲೂಕು ಹಾಗೂ ವಿವಿಧ ಹಳ್ಳಿಗಳಿಂದ ಸಾವಿರಾರು ಯುವಕರು ಜಮಾಯಿಸಿ ಸುತ್ತಮುತ್ತಲಿನ ಕಟ್ಟಡಗಳ ಮೇಲೆ ಕುಳಿತು ವೀಕ್ಷಿಸುತ್ತಿದ್ದರು.
ಅಂಬೇಡ್ಕರ್ ಭವನದ ಪತ್ರಾಸ್ ಮೇಲೆ ಕುಳಿತು ಸ್ಪರ್ಧೆ ವೀಕ್ಷಿಸುವಾಗ ಪತ್ರಾಸ್ ಮುರಿದು ಐವರು ಯುವಕರು ಮೇಲಿಂದ ಕೆಳಗೆ ಬಿದ್ದು ಗಾಯಗೊಂಡಿದ್ದಾರೆ.
ಸಾವಳಗಿ ಗ್ರಾಮದ ಸಿದ್ದು ವಸಂತ ರಾಠೋಡ(32), ಅಶೋಕ ಮಾದರ (23) ಬಸವನಬಾಗೇವಾಡಿ ಪಟ್ಟಣದ ಅಲಿ ಹಾಜೀಸಾಬ ಮುಲ್ಲಾ (22), ವಡವಡಗಿ ಗ್ರಾಮದ ಕಿರಣ ಲಕ್ಷ್ಮಣ ರಾಠೋಡ(22) ಹಾಗೂ ಆಶೀಪ್ ಬಾಗವಾನ (17) ಘಟನೆಯಲ್ಲಿ ಗಾಯಗೊಂಡ ಯುವಕರು. ಗಾಯಗೊಂಡವರಿಗೆ ತಾಲ್ಲೂಕಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. ಈ ಪೈಕಿ ಗಂಭೀರ ಗಾಯಗೊಂಡ ಮೂವರನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗುವುದು ಎಂದು ವೈದ್ಯರು ತಿಳಿಸಿದ್ದಾರೆ.
‘ಘಟನೆ ಕುರಿತು ತನಿಖೆ ಕೈಗೊಂಡು ಆಯೋಜಕರ ಮೇಲೆ ಕಾನೂನುಕ್ರಮ ಜರುಗಿಸಲಾಗುವುದು’ ಎಂದು ಡಿವೈಎಸ್ಪಿ ಬಲ್ಲಪ್ಪ ನಂದಗಾವಿ ಮಾಹಿತಿ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.