
ಆಲಮಟ್ಟಿ: ಕೃಷ್ಣಾ ಮೇಲ್ದಂಡೆ ಯೋಜನೆಯ (ಯುಕೆಪಿ) ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕಾಲುವೆಗೆ ಹಿಂಗಾರು ಹಂಗಾಮಿಗೆ 2026ರ ಏಪ್ರಿಲ್ 3ರವರೆಗೆ ನೀರು ಹರಿಸಲು ಬೆಂಗಳೂರಿನಲ್ಲಿ ಶುಕ್ರವಾರ ಜರುಗಿದ ನೀರಾವರಿ ಸಲಹಾ ಸಮಿತಿ (ಐಸಿಸಿ) ಸಭೆಯಲ್ಲಿ ನಿರ್ಧರಿಸಲಾಯಿತು.
ಬೆಂಗಳೂರಿನ ವಿಕಾಸಸೌಧದಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕಾ ಖರ್ಗೆ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ನಿರ್ಣಯಿಸಲಾಯಿತು.
ಆಲಮಟ್ಟಿ ಹಾಗೂ ನಾರಾಯಣಪುರ ಎರಡೂ ಜಲಾಶಯಗಳಲ್ಲಿ ಬಳಕೆಯೋಗ್ಯ 124 ಟಿಎಂಸಿ ಅಡಿ ನೀರು ಲಭ್ಯವಿದ್ದು, ಇದರಲ್ಲಿ 2026 ರ ಜೂನ್ ವರೆಗೆ ಕುಡಿಯುವ ನೀರು, ಭಾಷ್ಪಿಭವನ, ಕೈಗಾರಿಕೆ, ಉಷ್ಣ ವಿದ್ಯುತ್ ಸ್ಥಾವರ ಸೇರಿದಂತೆ ನಾನಾ ಬಳಕೆಗಾಗಿ 45 ಟಿಎಂಸಿ ಅಡಿ ನೀರು ಅಗತ್ಯವಿದೆ ಎಂದು ಕೆಬಿಜೆಎನ್ ಎಲ್ ಅಧಿಕಾರಿಗಳು ಮಾಹಿತಿ ನೀಡಿದರು.
ಬಾಕಿ ಉಳಿದ 79 ಟಿಎಂಸಿ ಅಡಿ ನೀರನ್ನು ನೀರಾವರಿಗೆ ಬಳಸಿಕೊಳ್ಳಲು ನಿರ್ಧರಿಸಲಾಯಿತು. ಅದರಂತೆ ಸದ್ಯ ದ್ವಿಋತು ಬೆಳೆಗಳಿಗಾಗಿ ನ.16 ರಿಂದ ನ.21 ರವರೆಗೆ ಆರು ದಿನ ಕಾಲುವೆಗೆ ನೀರು ಹರಿಸಿ ನ.22 ರಿಂದ ಡಿ.1 ರವರೆಗೆ 10 ದಿನಗಳ ಕಾಲ ನೀರು ಹರಿಯುವಿಕೆ ಸ್ಥಗಿತಗೊಳಿಸಲು ಸಭೆ ನಿರ್ಧರಿಸಿತು.
ಡಿ.2 ರಿಂದ ಹಿಂಗಾರು ಹಂಗಾಮಿಗೆ ನೀರು:
ಹಿಂಗಾರು ಹಂಗಾಮಿಗೆ ಡಿ.2 ರಿಂದ ಏಪ್ರಿಲ್ 3 ರವರೆಗೆ 14 ದಿನ ಚಾಲು, 10 ದಿನ ಬಂದ್ ಅವಧಿಯ ವಾರಾಬಂಧಿಗೆ ಒಳಪಟ್ಟು ಒಟ್ಟಾರೇ 123 ದಿನಗಳ ಕಾಲ ನೀರು ಹರಿಸಲು ನಿರ್ಧರಿಸಲಾಯಿತು. ಇದರಲ್ಲಿ 73 ದಿನ ಕಾಲುವೆಗೆ ಚಾಲು, 50 ದಿನ ಕಾಲುವೆ ಬಂದ್ ಇರಲಿದೆ. ನಿತ್ಯ ಒಂದು ಟಿಎಂಸಿ ಅಡಿ ನೀರು ಕಾಲುವೆಗೆ ಹರಿಸಲಾಗುತ್ತಿದೆ.
ತಿಮ್ಮಾಪುರ ಗೈರು: ಬಾಗಲಕೋಟೆಯಲ್ಲಿ ಕಬ್ಬಿನ ಗಲಾಟೆ, ನಿಷೇಧಾಜ್ಞೆ ಮತ್ತೀತರ ಕಾರಣಕ್ಕೆ ಬಾಗಲಕೋಟೆ ಜಿಲ್ಲಾ ಉಸ್ತುವಾರಿ ಸಚಿವರು ಆಗಿರುವ, ಐಸಿಸಿಯ ಅಧ್ಯಕ್ಷರು ಆಗಿರುವ ಸಚಿವ ಆರ್.ಬಿ. ತಿಮ್ಮಾಪುರ ಸಭೆಗೆ ಗೈರಾಗಿದ್ದರು. ವಿಡಿಯೋ ಕಾನ್ಫರೆನ್ಸ್ ಮೂಲಕ ಸಭೆಯಲ್ಲಿ ಕೆಲ ಕಾಲ ಭಾಗವಹಿಸಿ, ಸಚಿವ ಪ್ರಿಯಾಂಕಾ ಖರ್ಗೆ ಅವರು ಅಧ್ಯಕ್ಷರಾಗುವಂತೆ ಸೂಚಿಸಿದರು. ಅದರಂತೆ ಖರ್ಗೆ ಶುಕ್ರವಾರ ನಡೆದ ಐಸಿಸಿ ಸಭೆಯ ಅಧ್ಯಕ್ಷತೆ ವಹಿಸಿದ್ದರು.
ಸಭೆಯಲ್ಲಿ ಸಚಿವ ಶರಣಬಸಪ್ಪ ದರ್ಶನಾಪುರ, ಸುರಪುರ ಶಾಸಕ ರಾಜಾ ವೇಣುಗೋಪಾಲನಾಯಕ, ಲಿಂಗಸೂಗೂರು ಶಾಸಕ ಮಾನಪ್ಪ ವಜ್ಜಲ, ಬೀಳಗಿ ಶಾಸಕ ಜೆ.ಟಿ.ಪಾಟೀಲ, ಮುದ್ದೇಬಿಹಾಳ ಶಾಸಕ ಸಿ.ಎಸ್. ನಾಡಗೌಡ, ದೇವರಹಿಪ್ಪರಗಿ ಶಾಸಕ ರಾಜುಗೌಡ ಪಾಟೀಲ, ನಾಗಠಾಣ ಶಾಸಕ ವಿಠ್ಠಲ ಕಟಕಧೋಂಡ, ಸಿಂದಗಿ ಶಾಸಕ ಅಶೋಕ ಮನಗೂಳಿ, ಅಫಜಲಪುರ ಶಾಸಕ ಎಂ.ವೈ. ಪಾಟೀಲ, ವಿಧಾನಪರಿಷತ್ ಸದಸ್ಯ ಹನುಮಂತ ನಿರಾಣಿ, ಕೆಬಿಜೆಎನ್ಎಲ್ ಎಂಡಿ ಕೃಷ್ಣಮೂರ್ತಿ ಕುಲಕರ್ಣಿ, ಐಸಿಸಿ ಸದಸ್ಯ ಕಾರ್ಯದರ್ಶಿ ಪ್ರೇಮಸಿಂಗ್, ಮುಖ್ಯ ಎಂಜಿನಿಯರ್ ಡಿ.ಬಸವರಾಜ ಮತ್ತೀತರರು ಇದ್ದರು.
ಕಾಲುವೆಯ ವೇಳಾಪಟ್ಟಿ:
ಡಿಸೆಂಬರ್ 2 ರಿಂದ ಡಿ.15 ರವರೆಗೆ 14 ದಿನ
ಡಿ.26 ರಿಂದ ಜನವರಿ 8 ರವರೆಗೆ 14 ದಿನ
ಜ.19 ರಿಂದ ಫೆಬ್ರುವರಿ 1ರವರೆಗೆ 14 ದಿನ
ಫೆ.12 ರಿಂದ ಫೆ 25 ರವರೆಗೆ 14 ದಿನ
ಮಾರ್ಚ್ 8 ರಿಂದ ಮಾ.21 ರವರೆಗೆ 14 ದಿನ
ಏಪ್ರಿಲ್ 1 ರಿಂದ ಏ.3 ರವರೆಗೆ 3ದಿನ ಸೇರಿ 73 ದಿನ
ಬಂದ್ ಅವಧಿ: ಡಿ.16 ರಿಂದ ಡಿ.25 ರವರೆಗೆ 10 ದಿನ
ಜ.9ರಿಂದ ಜ.18 ರವರೆಗೆ 10 ದಿನ
ಫೆ. 2ರಿಂದ ಫೆ. 11 ರವರೆಗೆ 10 ದಿನ
ಫೆ.26 ರಿಂದ ಮಾರ್ಚ್ 7 ರವರೆಗೆ 10 ದಿನ
ಮಾರ್ಚ್ 22 ರಿಂದ ಮಾ.31 ರವರೆಗೆ 10 ದಿನ
ಒಟ್ಟು 50 ದಿನ ಕಾಲುವೆಗೆ ನೀರು ಬಂದ್
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.