ADVERTISEMENT

ಉತ್ಕೃಷ್ಟ ಸಾಧನೆಗೆ ಬೇಕು ಖಚಿತ ಗುರಿ: ಮಾತಾ ಕೈವಲ್ಯಮಯಿ

​ಪ್ರಜಾವಾಣಿ ವಾರ್ತೆ
Published 30 ಜುಲೈ 2021, 11:46 IST
Last Updated 30 ಜುಲೈ 2021, 11:46 IST
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ
ಮಾತಾ ಕೈವಲ್ಯಮಯಿ, ಅಧ್ಯಕ್ಷರು, ಕೃಪಾಮಯಿ ಶಾರದಾಶ್ರಮ, ವಿಜಯಪುರ   

ಪ್ರತಿಯೊಬ್ಬ ಮನುಷ್ಯ ತನ್ನ ಜೀವನದಲ್ಲಿ ಯಶಸ್ಸನ್ನು ಪಡೆಯಲು ಸ್ಪಷ್ಟವಾದ, ಖಚಿತವಾದ ಗುರಿ ಬಹಳ ಮುಖ್ಯ. ಅನೇಕ ಮಹತ್ವಾಕಾಂಕ್ಷೆಗಳು ವ್ಯಕ್ತಿಯಲ್ಲಿ ಇರಬಹುದಾದರೂ ಅವೆಲ್ಲವೂ ಗುರಿಯಾಗಲಾರವು. ಅವುಗಳಲ್ಲಿ ಅತ್ಯಂತ ಮಹತ್ವದ್ದು ಮಾತ್ರ ಗುರಿಯ ಪಟ್ಟಕ್ಕೆ ಅರ್ಹತೆ ಪಡೆಯುತ್ತದೆ.

ಶ್ರೀ ರಾಮಕೃಷ್ಣ ಪರಮಹಂಸರು ಹೇಳುವಂತೆ, ಒಬ್ಬ ನೀರಿಗಾಗಿ ಒಂದೆಡೆ ಬಾವಿ ತೋಡತೊಡಗಿದ. ಅಲ್ಲಿಗೆ ಬಂದವರೊಬ್ಬರ ಸಲಹೆಯ ಮೇರೆಗೆ ಆ ಜಾಗವನ್ನು ಬಿಟ್ಟು ಬೇರೆ ಜಾಗದಲ್ಲಿ ತೋಡತೊಡಗಿದ. ಮತ್ಯಾರೋ ಹೇಳಿದರೆಂದು ಆ ಜಾಗವನ್ನು ಬಿಟ್ಟು ಇನ್ನೊಂದು ಕಡೆ ತೋಡತೊಡಗಿದ. ಹೀಗೆ ಅದೆಷ್ಟೇ ಶ್ರಮಿಸಿದರೂ ನೀರಿನ ಒರತೆ ಚಿಮ್ಮಲೇ ಇಲ್ಲ. ಅಲ್ಲಿ, ಇಲ್ಲಿ ಅಷ್ಟಿಷ್ಟು ತೋಡುವ ಬದಲು ಅವನು ಒಂದೆಡೆಯೇ ಎಲ್ಲ ಶ್ರಮ ಹಾಕಿ ಆಳ ಆಳಕ್ಕೆ ತೋಡಿದ್ದಲ್ಲಿ ನೀರು ಬಂದೇ ಬರುತ್ತಿತ್ತಲ್ಲವೇ? ಹಾಗಾಗಿ ಮೊದಲೇ ಚೆನ್ನಾಗಿ ಯೋಚಿಸಿ ಸ್ಪಷ್ಟ ಗುರಿಯೊಂದನ್ನು ನಿರ್ಧರಿಸಿ, ಅದನ್ನು ಸಾಧಿಸಲು ಎಲ್ಲ ಪ್ರಯತ್ನಗಳನ್ನು ಮಾಡಬೇಕು.

ಅಂತ: ಶಕ್ತಿಯನ್ನು ಬಡಿದೆಬ್ಬಿಸಿ, ಧೈರ್ಯೋತ್ಸಾಹಗಳನ್ನು ಧಾರೆ ಎರೆದು, ಹೊಸ ಸಾಧ್ಯತೆಗಳ ಲೋಕದ ಬಾಗಿಲು ತೆರೆಯಿಸುವುದೇ ಗುರಿ. ಇದನ್ನೇ ಸ್ವಾಮಿ ವಿವೇಕಾನಂದರು, ಒಂದು ಯೋಜನೆಯನ್ನು ತೆಗೆದುಕೊಳ್ಳಿ, ನಿಮ್ಮ ಸರ್ವಸ್ವವನ್ನೂ ಅದಕ್ಕೆ ಧಾರೆಯೆರೆದರೆ ಅದ್ಭುತಗಳು ಸೃಷ್ಟಿಯಾಗುತ್ತವೆ ಎಂದಿರುವುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.