ADVERTISEMENT

ಮುದ್ದೇಬಿಹಾಳ ಪಿಎಸ್‌ಐ ಅಮಾನತುಗೊಳಿಸಲು ನಡಹಳ್ಳಿ ಒತ್ತಾಯ

​ಪ್ರಜಾವಾಣಿ ವಾರ್ತೆ
Published 17 ಜನವರಿ 2025, 16:03 IST
Last Updated 17 ಜನವರಿ 2025, 16:03 IST
ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದಲ್ಲಿರುವ ನಡಹಳ್ಳಿಯವರ ಫಾರ್ಮಹೌಸ್‌ನಲ್ಲಿ ಬಿಜೆಪಿ ರೈತಮೋರ್ಚಾ ರಾಜ್ಯಘಟಕದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ನೇತೃತ್ವದಲ್ಲಿ ಈಚೇಗೆ ಶಾಸಕರ ಮನೆ ಎದುರಿಗೆ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಮುಖಂಡರನ್ನು ಶುಕ್ರವಾರ ಸನ್ಮಾನಿಸಲಾಯಿತು. ----
ಮುದ್ದೇಬಿಹಾಳ ಪಟ್ಟಣದ ಮಾರುತಿ ನಗರದಲ್ಲಿರುವ ನಡಹಳ್ಳಿಯವರ ಫಾರ್ಮಹೌಸ್‌ನಲ್ಲಿ ಬಿಜೆಪಿ ರೈತಮೋರ್ಚಾ ರಾಜ್ಯಘಟಕದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ನೇತೃತ್ವದಲ್ಲಿ ಈಚೇಗೆ ಶಾಸಕರ ಮನೆ ಎದುರಿಗೆ ಪ್ರತಿಭಟನೆ ನಡೆಸಿ ಬಂಧನಕ್ಕೊಳಗಾಗಿದ್ದ ಬಿಜೆಪಿ ಮುಖಂಡರನ್ನು ಶುಕ್ರವಾರ ಸನ್ಮಾನಿಸಲಾಯಿತು. ----   

ಮುದ್ದೇಬಿಹಾಳ : ‘ಬಿಜೆಪಿ ಕಾರ್ಯಕರ್ತರ ಮೇಲೆ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿರುವ ಪಿಎಸ್‌ಐ ಸಂಜಯ ತಿಪರೆಡ್ಡಿ ಅವರನ್ನು ಸೇವೆಯಿಂದ ಅಮಾನತುಗೊಳಿಸಬೇಕು. ಅವರು ದಾಖಲಿಸಿರುವ ಸುಳ್ಳು ದೂರು ವಾಪಸ್ ಪಡೆದುಕೊಳ್ಳಬೇಕು. ಇಲ್ಲದಿದ್ದಲ್ಲಿ ರಾಜ್ಯದಾದ್ಯಂತ ಪಕ್ಷದಿಂದ ಉಗ್ರ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ’ ಎಂದು ಬಿಜೆಪಿ ರೈತ ಮೋರ್ಚಾ ರಾಜ್ಯ ಘಟಕದ ಅಧ್ಯಕ್ಷ ಎ.ಎಸ್.ಪಾಟೀಲ್ ನಡಹಳ್ಳಿ ಹೇಳಿದರು.

ಪಟ್ಟಣದ ಮಾರುತಿ ನಗರದಲ್ಲಿ ತಮ್ಮ ಫಾರ್ಮ್‌ಹೌಸ್‌ನಲ್ಲಿ ಈಚೆಗೆ ಶಾಸಕರ ಮನೆ ಎದುರಿಗೆ ಚಾಮರಾಜನಗರ ಹಸುವಿನ ಕೆಚ್ಚಲು ಕತ್ತರಿಸಿ ನಡೆಸಿದ್ದ ಪ್ರತಿಭಟನೆ ವೇಳೆ ಬಂಧಿತರಾಗಿ ಜಾಮೀನಿನ ಮೇಲೆ ಬಿಡುಗಡೆಯಾದ ಬಿಜೆಪಿ ಮುಖಂಡರನ್ನು ಶುಕ್ರವಾರ ಸನ್ಮಾನ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಮತಕ್ಷೇತ್ರದಲ್ಲಿ ಅಭಿವೃದ್ಧಿ ರಾಜಕಾರಣ ಮುಂದಿಟ್ಟುಕೊಂಡು ಸವಾಲು ಹಾಕುವುದನ್ನು ಬಿಟ್ಟು ಹಾಲಿ ಶಾಸಕ ಅಪ್ಪಾಜಿ ನಾಡಗೌಡರು ಪಿಎಸ್‌ಐ ಮುಂದಿಟ್ಟುಕೊಂಡು ಪೊಲೀಸ್‌ ಗೂಂಡಾ ಆಡಳಿತ ನಡೆಸುತ್ತಿದ್ದು ಅವರು ಗೋಮುಖ ವ್ಯಾಘ್ರ’ ಎಂದು ಹರಿಹಾಯ್ದರು.

ADVERTISEMENT

‘ಪೊಲೀಸರಿಗೆ ತೊಂದರೆಯಾದಾಗ ಮುಂಚೂಣಿಯಲ್ಲಿ ನಿಂತು ಹೋರಾಟ ಮಾಡಿದ್ದು ನಡಹಳ್ಳಿ ಎಂಬುದು ಪಿಎಸ್‌ಐ ತಿಪರೆಡ್ಡಿ ಅವರು ಮರೆತಿದ್ದಾರೆ.ಪೊಲೀಸ್‌ ಸೇವೆಯಲ್ಲಿದ್ದ ಕಲ್ಲಪ್ಪ ಹಂಡಿಭಾಗ್ , ಡಿವೈಎಸ್ಪಿ ಗಣಪತಿ ಅವರು ಮೃತಪಟ್ಟಾಗ ಅವರ ಕುಟುಂಬದ ನೆರವಿಗೆ ನಿಂತಿದ್ದೇನೆ. ಪೊಲೀಸ್ ಠಾಣೆಗೆ ಮಾಜಿ ಶಾಸಕರೊಬ್ಬರು ಬಂದಾಗ ಹೇಗೆ ನಡೆದುಕೊಳ್ಳಬೇಕು ಎಂಬುದನ್ನು ನೀವು ತಿಳಿದುಕೊಳ್ಳಬೇಕು’  ಎಂದು ನಡಹಳ್ಳಿ ಹೇಳಿದರು.

ಇದೇ ವೇಳೆ ಬಿಜೆಪಿ ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ, ಯುವ ಘಟಕದ ಅಧ್ಯಕ್ಷ ಗಿರೀಶಗೌಡ ಪಾಟೀಲ್, ಸಂಜೀವ ಬಾಗೇವಾಡಿ ಮಾತನಾಡಿದರು.  ಬಿಜೆಪಿ ಮುಖಂಡ ಮಲಕೇಂದ್ರಗೌಡ ಪಾಟೀಲ್ ಮಾತನಾಡಿ‘ಸುಳ್ಳು ದೂರು ದಾಖಲಿಸಿರುವ ಪಿಎಸ್‌ಐ ಅವರನ್ನು ಅಮಾನತುಗೊಳಿಸಿ ಸಮಾಜಕ್ಕೆ ಸೂಕ್ತ ಸಂದೇಶ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ನೀಡಬೇಕು’ ಎಂದು ಆಗ್ರಹಿಸಿದರು

ಮುಖಂಡ ಗಂಗಾಧರ ನಾಡಗೌಡ ಮಾತನಾಡಿದರು.ಮುಖಂಡರಾದ ಎಂ.ಎಸ್.ಪಾಟೀಲ್, ಪ್ರಭು ಕಡಿ, ಕೆಂಚಪ್ಪ ಬಿರಾದಾರ,ರಾಜಶೇಖರ ಡೊಳ್ಳಿ, ಬಿ.ಪಿ.ಕುಲಕರ್ಣಿ, ಗುರುಲಿಂಗಪ್ಪ ಅಂಗಡಿ, ಮಂಜುನಾಥ ಚಲವಾದಿ, ಸೋಮನಗೌಡ ಬಿರಾದಾರ ಮೊದಲಾದವರು ಇದ್ದರು.
 
ಬೈಕ್ ರ‍್ಯಾಲಿಗೆ ಅನುಮತಿ ನಿರಾಕರಣೆ:

ಮುದ್ದೇಬಿಹಾಳದಲ್ಲಿ ಶುಕ್ರವಾರ ನಡೆಸಲು ಉದ್ದೇಶಿಸಿ ಪೊಲೀಸರಿಗೆ ಬೈಕ್ ರ‍್ಯಾಲಿಗೆ ಅನುಮತಿ ನೀಡಲು ಕೋರಿ ಮನವಿ ಕೊಟ್ಟಿದ್ದರೆ ಅದಕ್ಕೆ ಪೊಲೀಸರು ನೀಡಿರುವ ಕಾರಣಗಳೇ ಅಚ್ಚರಿಗೆ ಕಾರಣವಾಗುತ್ತಿವೆ ಎಂದು ಮಾಜಿ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಹೇಳಿದರು

ಶಾಸಕರ ಮನೆಗೆ ಸೆಗಣಿ ಬಳಿದ ಪ್ರಕರಣದಿಂದ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ಮಧ್ಯೆ ದ್ವೇಷಮಯ ವಾತಾವರಣ ಮತಕ್ಷೇತ್ರದಲ್ಲಿ ನಿರ್ಮಾಣವಾಗಿದ್ದು ಬೈಕ್ ರ‍್ಯಾಲಿಗೆ ಅನುಮತಿ ಕೊಟ್ಟರೆ ರ‍್ಯಾಲಿ ಸಂದರ್ಭದಲ್ಲಿ ಸಾರ್ವಜನಿಕರ ಪ್ರಾಣಹಾನಿ, ಆಸ್ತಿಪಾಸ್ತಿ ಹಾನಿಯಾಗುವ ಸಾಧ್ಯತೆ, ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಸಾಧ್ಯತೆ ಇದೆ ಎಂಬ ಕಾರಣ ನಮೂದಿಸಿದ್ದಾರೆ. ಅಂದರೆ ಪಿಎಸ್‌ಐ ಅವರೇ ಮುಂದೆ ನಿಂತು ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಮಧ್ಯೆ ದ್ವೇಷಮಯ ವಾತಾವರಣ ಹುಟ್ಟು ಹಾಕುತ್ತಿದ್ದಾರೆ ಎಂದು ನಡಹಳ್ಳಿ ಆರೋಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.