
ವಿಜಯಪುರ: ಎಸ್‌ಎಸ್‌ಎಲ್‌ಸಿ ಫಲಿತಾಂಶ ವಿಷಯವಾಗಿ ಅನುದಾನಿತ ಶಾಲೆಗಳ ಶಿಕ್ಷಕರಿಗೆ ಬಡ್ತಿ ತಡೆ ಹಿಡಿದಿರುವುದನ್ನು ರದ್ದುಗೊಳಿಸಿ ಕೂಡಲೇ ಬಡ್ತಿ ಆದೇಶ ನೀಡುವುದು ಸೇರಿದಂತೆ ಅನುದಾನಿತ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಶಿಕ್ಷಕರ ವಿವಿಧ ಸಮಸ್ಯೆಗಳ ನಿವಾರಣೆಗೆ ಆಗ್ರಹಿಸಿ ವಿಜಯಪುರದಲ್ಲಿ ಅನುದಾನಿತ ಪ್ರಾಥಮಿಕ- ಪ್ರೌಢಶಾಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಮಂಗಳವಾರ ಮನವಿ ಸಲ್ಲಿಸಿದರು.
ನೇತೃತ್ವ ವಹಿಸಿದ್ದ ವಿಜಯಪುರ ಜಿಲ್ಲಾ ಅನುದಾನಿತ ಪ್ರೌಢಶಾಲಾ ಮುಖ್ಯೋಪಾಧ್ಯಾಯರ ಮಹಾಮಂಡಳದ ಮುಖಂಡ ಎಚ್.ಜಿ. ತೊನಶ್ಯಾಳ ಮಾತನಾಡಿ, ಎಸ್‌ಎಸ್‌ಎಲ್‌ಸಿಯಲ್ಲಿ ಶೇ.60 ಕ್ಕಿಂತ ಕಡಿಮೆ ಬಂದ ಶಿಕ್ಷಕರಿಗೆ ವಾರ್ಷಿಕ ಬಡ್ತಿ ತಡೆ ಹಿಡಿದಿರುವುದು ಯಾವ ನ್ಯಾಯ? ಸರ್ಕಾರಿ ಶಾಲೆಯ ಶಿಕ್ಷಕರಿಗೆ ಕೇವಲ ನೋಟಿಸ್ ನೀಡಲಾಗಿದೆ, ಆದರೆ ಇದಕ್ಕೆ ವ್ಯತಿರಿಕ್ತವಾಗಿ ಅನುದಾನಿತ ಶಿಕ್ಷಣ ಸಂಸ್ಥೆಗಳ ಶಿಕ್ಷಕರಿಗೆ ಬಡ್ತಿ ಆದೇಶ ಅನುಷ್ಠಾನಗೊಳಿಸಲಾಗಿದೆ, ಇದರಿಂದ ಅನುದಾನಿತ ಶಿಕ್ಷಕರಿಗೆ ದೊಡ್ಡ ತೊಂದರೆ ಸೃಜಿಸಿದೆ ಎಂದರು. ಈ ರೀತಿ ಕೇವಲ ಅನುದಾನಿತ ಶಿಕ್ಷಕರ ಮೇಲೆ ಈ ರೀತಿಯ ಬಡ್ತಿ ತಡೆ ತೂಗುಗತ್ತಿ ಪ್ರಯೋಗಿಸಿರುವುದು ಎಷ್ಟು ಸರಿ? ಈ ವಿಷಯವಾಗಿ ಶಿಕ್ಷಣ ಕ್ಷೇತ್ರವನ್ನು ಪ್ರತಿನಿಧಿಸುವ ವ್ಯಕ್ತಿಗಳು ಸಹ ಧ್ವನಿ ಎತ್ತಿಲ್ಲ ಎಂದರು. ವಿಶೇಷವಾಗಿ ಚಡಚಣ, ವಿಜಯಪುರ ನಗರ, ಗ್ರಾಮೀಣ ವಲಯದಲ್ಲಿ ಬಡ್ತಿ ಪೂರ್ಣ ಪ್ರಮಾಣದಲ್ಲಿ ತಡೆ ಹಿಡಿಯಲಾಗಿದೆ ಎಂದರು. ಅನುಕಂಪ ಆಧರಿಸಿ ನೇಮಕಾತಿ ಪ್ರಕ್ರಿಯೆಯೂ ಸಹ ಚಾಲನೆಯಾಗುತ್ತಿಲ್ಲ, ಈ ಪ್ರಸ್ತಾವನೆ ಇಲಾಖೆಗಳಲ್ಲಿ ಧೂಳು ತಿನ್ನುತ್ತಾ ಬಿದ್ದಿದೆ ಎಂದು ಅಸಮಮಾಧಾನ ವ್ಯಕ್ತಪಡಿಸಿದರು. ಕೂಡಲೇ ಬಡ್ತಿ ತಡೆ ಹಿಡಿದಿರುವುದನ್ನು ವಾಪಾಸ್ಸು ಪಡೆಯಬೇಕು, ಅನುಕಂಪ ಆಧಾರಿತ ನೇಮಕಾತಿಗೆ ಹಸಿರು ನಿಶಾನೆ ತೋರಬೇಕು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ವಿಜಯಪುರ ಜಿಲ್ಲಾ ಅನುದಾನಿತ ಪ್ರಾಥಮಿಕ ಶಿಕ್ಷಕರ ಸಂಘದ ಅಧ್ಯಕ್ಷ ಎಸ್.ಪಿ. ಹಿರೇಕುರುಬರ ಮಾತನಾಡಿದರು. ಪ್ರಮುಖರಾದ ಆರ್.ಬಿ. ಜಾಧವ, ಆರ್.ಎಸ್. ತುಂಗಳ, ಪಿ.ಬಿ. ಅವಟಿಗೇರ, ಎಸ್.ಬಿ. ಬಿರಾದಾರ, ಗಿರೀಶ ಬಿರಾದಾರ, ಎನ್.ಎಂ. ಜಮಾದಾರ, ಡಿ.ಎನ್. ಕಾಳಿ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.