
ವಿಜಯಪುರ ನಗರ ಗಾಂಧಿ ವೃತ್ತದ ಬಳಿ ಇರುವ ಸೇಂಟ್ ಆ್ಯನ್ಸ್ ಚರ್ಚ್‌ನಲ್ಲಿ ಗುರುವಾರ ಧರ್ಮಗುರುಗಳು ವಿಶೇಷ ಪ್ರಾರ್ಥನೆ ಸಲ್ಲಿಸಿದರು
–ಪ್ರಜಾವಾಣಿ ಚಿತ್ರ
ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಾದ್ಯಂತ ಗುರುವಾರ ಕ್ರೈಸ್ತರು ಚರ್ಚ್‌ಗಳಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸುವ ಮೂಲಕ ಸಡಗರ ಸಂಭ್ರಮದಿಂದ ಕ್ರಿಸ್‌ಮಸ್ ಆಚರಿಸಿದರು.
ನಗರದ ಗಾಂಧಿ ವೃತ್ತದ ಬಳಿ ಇರುವ ಸೇಂಟ್ ಆ್ಯನ್ಸ್ ಚರ್ಚ್ ಹಾಗೂ ಕೇಂದ್ರ ಬಸ್ ನಿಲ್ದಾಣದ ಬಳಿ ಇರುವ ಸಿಎಸ್‌ಐ ಚರ್ಚ್, ಕೆಕೆಜಿಎಸ್ ಬಳಿ ಇರುವ ಚರ್ಚ್‌ಗಳನ್ನು ಕ್ರಿಸ್‌ಮಸ್ ಪ್ರಯುಕ್ತ ವಿಶೇಷವಾಗಿ ಆಲಂಕರಿಸಲಾಗಿತ್ತು. ಬಾಲ ಯೇಸುವಿನ ಜನಿಸಿದ ದಿನದ ಸ್ಮರಣೆಗಾಗಿ ಗೋದಲಿಗಳನ್ನು ಸಿದ್ಧಪಡಿಸಿ, ವಿದ್ಯುತ್ ದೀಪಗಳಿಂದ ಆಲಂಕರಿಸಲಾಗಿತ್ತು. ಚರ್ಚ್‌ಗಳ ಎದುರು ಆಲಂಕೃತ ಕ್ರಿಸ್‌ಮಸ್ ಟ್ರೀ ಗಮನ ಸೆಳೆಯಿತು.
ಚರ್ಚ್‌ನಲ್ಲಿ ವಿಶೇಷ ಪ್ರಾರ್ಥನೆ ಸಲ್ಲಿಸಿ, ಕ್ಯಾಂಡಲ್ ಬೆಳಗಿದರು. ಸಾಮೂಹಿಕವಾಗಿ ಏಸುಗೀತೆಗಳನ್ನು ಹಾಡಿದರು ಹಾಗೂ ಬೈಬಲ್ ಅನ್ನು ಪಠಿಸಿದರು. ಧರ್ಮಗುರುಗಳ ಆಶೀರ್ವಾದ ಪಡೆದರು. ಪರಸ್ಪರ ಕ್ರಿಸ್ ಮಸ್ ಶುಭಾಶಯ ವಿನಿಮಯ ಮಾಡಿಕೊಂಡರು.
ಕ್ರಿಸ್‌ಮಸ್ ಹಬ್ಬದ ಪ್ರಯುಕ್ತ ಯುವಕ–ಯುವತಿಯರು ಚರ್ಚ್ ಎದುರು ಸೆಲ್ಫಿ ತೆಗೆದುಕೊಂಡು ಖುಷಿಪಟ್ಟರು. ಸಾಂತಾಕ್ಲಾಸ್ ವೇಷದಲ್ಲಿ ಮಕ್ಕಳು ಗಮನ ಸೆಳೆದರು. ಚರ್ಚ್ ಎದುರು ಬಂದುಗಳು, ಸ್ನೇಹಿತರೊಂದಿಗೆ ಫೋಟೊ ತೆಗೆಸಿಕೊಂಡು ಸಂಭ್ರಮಿಸಿದರು. ವಿವಿಧ ಧರ್ಮಿಯರು ಚರ್ಚ್‌ಗೆ ಭೇಟಿ ನೀಡಿ, ಸಂಭ್ರಮಿಸಿದರು.
ವಿಶೇಷವಾಗಿ ತಯಾರಿಸಿದ್ದ ಕೇಕ್‌ಗಳನ್ನು ವಿತರಿಸಿ, ತಿನ್ನುವ ಮೂಲಕ ಸೌಹಾರ್ದದ ಸಂಕೇತ ಸಾರಿದರು. ತಮ್ಮ ನೆರೆಹೊರೆಯ ಹಾಗೂ ಇತರ ಧರ್ಮೀಯರಿಗೆ ಕೇಕ್ ವಿತರಿಸಿ ಸಂಭ್ರಮಿಸಿದರು. ಸಂಜೆ ವೇಳೆಗೆ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.
ಫಾದರ್ ಜೋಸೆಫ್, ಫಾ.ಪ್ರಾನ್ಸಿಸ್ ಮಿನೇಜಸ್, ಫಾ. ಟಿಯೋಲ್ ಮಚಾದೋ, ಫಾ.ಕಿರಣ್, ಫಾ.ಅಂಥೋನಿ, ಫಾ.ಸಂತೋಷ, ಫಾ.ಲ್ಯಾನ್ಸಿ, ಫಾ.ಸಂತೋಷ ಫರ್ನಾಂಡಿಸ್, ಫಾ.ಜೀವನ್, ಫಾ.ಟಾಮ್, ಫಾ.ಸುಮನ್ ಮೊದಲಾದ ಧರ್ಮಗುರುಗಳು ಆಗಮಿಸಿದ ಭಕ್ತಾದಿಗಳಿಗೆ ಬೋಧನೆ ಹಾಗೂ ಆಶೀರ್ವಾದ ಮಾಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.