
ವಿಜಯಪುರ: ನಗರ ಸೇರಿದಂತೆ ಜಿಲ್ಲೆಯಲ್ಲಿ ಶೀತಗಾಳಿ ಬೀಸತೊಡಗಿದ್ದು, ಮೂರು ದಿನಗಳಿಂದ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ಗೆ ತಗ್ಗಿದೆ. ಮುಂದಿನ ಆರು ದಿನಗಳ ಕಾಲ (ಡಿ.12ರಿಂದ 17ರ ವರೆಗೆ) ತಾಪಮಾನವು ಸಾಮಾನ್ಯಕ್ಕಿಂತ ಕನಿಷ್ಠ 4 ರಿಂದ 6 ಡಿಗ್ರಿ ಸೆಲ್ಸಿಯಸ್ ಕಡಿಮೆ ಆಗುವ ಸಾಧ್ಯತೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮನ್ಸೂಚನೆ ನೀಡಿದೆ.
ಶೀತಗಾಳಿ, ಚಳಿಯ ಪರಿಣಾಮ ಬೆಳಿಗ್ಗೆ, ಸಂಜೆ ವಾಯು ವಿಹಾರಕ್ಕೆ ತೆರಳುವವರ ಸಂಖ್ಯೆಯು ವಿರಳವಾಗಿದೆ. ಅಲ್ಲದೇ, ಬೈಕು, ಸ್ಕೂಟರ್‌ಗಳಲ್ಲಿ ತಿರುಗಾಡುವವರ ಸಂಖ್ಯೆಯೂ ಕಡಿಮೆಯಾಗಿದೆ. ರಾತ್ರಿ ವೇಳೆ ಬಸ್, ಕಾರು, ರೈಲು, ವಾಹನಗಳಲ್ಲಿ ತಿರುಗಾಡುವವರು ಚಳಿಗೆ ಅಂಜಿದ್ದಾರೆ.
ಬೆಚ್ಚಗಿನ ಸ್ವೇಟರ್, ಮಾಪ್ಲರ್, ಟೊಪ್ಪಿ, ಜರ್ಕಿನ್‌ಗಳಿಗೆ ಬೇಡಿಕೆ ಹೆಚ್ಚಿದೆ. ಟಿ, ಕಾಫಿ ಅಂಗಡಿಗಳಲ್ಲಿ ಬೆಳಿಗ್ಗೆ, ಸಂಜೆ ಹೀರುವವರ ಸಂಖ್ಯೆ ದುಪ್ಪಟ್ಟಾಗಿದೆ. ಚಳಿಯಿಂದ ರಕ್ಷಿಸಿಕೊಳ್ಳಲು ಗ್ರಾಮೀಣ ಪ್ರದೇಶದಲ್ಲಿ ಜನರು ಸಂಜೆ, ಬೆಳಿಗ್ಗೆ ಹೊತ್ತಿನಲ್ಲಿ ಬೆಂಕಿಗೆ ಮೈಯೊಡ್ಡಿ ಕಾಯಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ಹಗಲು ಮೈಸುಡುವ ಬಿಸಿಲು, ರಾತ್ರಿ ನಡುಕ ಹುಟ್ಟಿಸುವ ಚಳಿಯಿಂದ ಜನ ಹೈರಾಣಾಗಿದ್ದಾರೆ. ಚಳಿಯ ಪರಿಣಾಮ ಚಿಕ್ಕಮಕ್ಕಳು, ವಯೋವೃದ್ಧರು, ಉಸಿರಾಟ ತೊಂದರೆ ಇರುವವರಿಗೆ ಆರೋಗ್ಯದಲ್ಲಿ ಬಹಳಷ್ಟು ವ್ಯತ್ಯಸವಾಗತೊಡಗಿದೆ. ಶೀತ, ಕೆಮ್ಮು, ಕಫ, ಜ್ವರದಿಂದ ಬಳಲುತ್ತಿರುವವರು ಆಸ್ಪತ್ರೆಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡಿ, ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಘಿ ಚಳಿಗೆ ಮುಖ, ಮೈ, ಕೈ, ತುಟಿ ಸೇರಿದಂತೆ ದೇಹದ ತ್ವಚೆಯಲ್ಲಿ ಬಿರುಕು ಕಾಣಿಸಿಕೊಳ್ಳುತ್ತಿದೆ. ಔಷಧಾಲಯಗಳಲ್ಲಿ ಬಗೆಬಗೆಯ ಕ್ರೀಮ್, ಲೋಷನ್‌ಗಳು ಲಭಿಸುತ್ತಿದ್ದು, ಜನರು ಖರೀದಿಸಿ, ಹಚ್ಚಿಕೊಳ್ಳತೊಡಗಿದ್ದಾರೆ.
ಶೀತ ಮಾರುತದಿಂದ ರಕ್ಷಣೆ ಪಡೆಯಲು ಸಾಕಷ್ಟು ಚಳಿಗಾಲದ ಬಟ್ಟೆಗಳನ್ನು ಉಪಯೋಗಿಸಬೇಕು, ಸಾಧ್ಯವಾದಷ್ಟು ಒಳಾಂಗಣದಲ್ಲಿರಬೇಕು, ಪ್ರಯಾಣ ಕಡಿಮೆ ಮಾಡಬೇಕು, ಒದ್ದೆಯಾಗಿರುವ ಬಟ್ಟೆಗಳನ್ನು ತ್ವರಿತವಾಗಿ ಬದಲಾಯಿಸಬೇಕು, ಕೈಗವಸುಗಳಿಗೆ ಆದ್ಯತೆ ನೀಡಬೇಕು, ನಿಯಮಿತವಾಗಿ ಬಿಸಿ ಪಾನೀಯಗಳನ್ನು ಕುಡಿಯಬೇಕು, ಬೆಚ್ಚಗಿನ, ಬಿಸಿ ನೀರಿನಲ್ಲಿ ಮುಖ ತೊಳೆಯಬೇಕು, ಬಿಸಿ ನೀರಿನಲ್ಲಿ ಸ್ನಾನ ಮಾಡಬೇಕು ಎಂದು ಹವಾಮಾನ ಇಲಾಖೆ ತಜ್ಞರು ಸಲಹೆ ನೀಡಿದ್ದಾರೆ.
ಚಳಿಗಾಲದಲ್ಲಿ ಮದ್ಯಪಾನ ಮಾಡಬಾರದು, ಚಳಿಯಿಂದ ರಕ್ಷಣೆಗಾಗಿ ಮಸಾಜ್ ಮಾಡಬಾರದು, ಇದು ಹೆಚ್ಚಿನ ಹಾನಿಯನ್ನುಂಟುಮಾಡಬಹುದು, ಮೈ ನಡುಕವನ್ನು ನಿರ್ಲಕ್ಷಿಸಬಾರದು ಎಂದು ಅವರು ಮುನ್ನೆಚ್ಚರಿಕೆ ನೀಡಿದ್ದಾರೆ.
ಚಳಿಗಾಲ ಇರುವುದರಿಂದ ಮಕ್ಕಳು ಐಸ್‌ಕ್ರೀಮ್, ತಂಪು ಪಾನೀಯಗಳನ್ನು ಯಾವುದೇ ಕಾರಣಕ್ಕೂ ಸೇವಿಸಬಾರದು. ಇದರಿಂದ ಶೀತ, ಕೆಮ್ಮು, ಕಫ, ಜ್ವರ ಬರುವ ಸಾಧ್ಯತೆ ಹೆಚ್ಚು. ಬೆಳಿಗ್ಗೆ ತಡವಾಗಿ ವಾಯು ವಿಹಾರಕ್ಕೆ ಹೋಗುವುದು ಉತ್ತಮ, ಹೃದಯ ಸಂಬಂಧಿ ಕಾಯಿಲೆ ಇರುವವರು ಹೆಚ್ಚು ಎಚ್ಚರ ವಹಿಸಬೇಕು, ದೇಹವನ್ನು ಬಿಸಿಯಾಗಿ ಇಟ್ಟಿಕೊಳ್ಳಬೇಕು ಎಂದು ತಿಳಿಸಿದ್ದಾರೆ.
ಶೀತಗಾಳಿ ಚಳಿ ಇರುವುದರಿಂದ ಜನರು ಸಂಪೂರ್ಣ ದೇಹವನ್ನು ಬೆಚ್ಚಗಿರಿಸಿಕೊಳ್ಳಬೇಕು ವಾಯು ವಿಹಾರ ತಾತ್ಕಾಲಿಕವಾಗಿ ಕೈಬಿಡುವುದು ಒಳಿತು ತಂಪು ಪಾನೀಯ ಐಸ್ ಕ್ರೀಮ್ ಸೇವಿಸಬಾರದು ಬಿಸಿ ಪದಾರ್ಥಗಳನ್ನು ಸೇವಿಸಬೇಕು ತ್ವಚೆಯ ರಕ್ಷಣೆಗೆ ಲೋಷನ್ ಬಳಸಬೇಕುಡಾ. ಹರೀಶ ಪೂಜಾರಿ ಮುಖ್ಯಸ್ಥರು ಮೆಡಿಷಿನ್ ವಿಭಾಗ ಜಿಲ್ಲಾಸ್ಪತ್ರೆ ವಿಜಯಪುರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.