
ವಿಜಯಪುರ: ಇಂಡಿ ಪಟ್ಟಣದ ಚಿನ್ನಾಭರಣ ಅಂಗಡಿಗಳ ಮೇಲೆ ದಾಳಿ ಮಾಡಿ, ದೌರ್ಜನ್ಯ ಎಸಗಿರುವ ಸಿಂದಗಿ, ಆಲಮೇಲ ಪೊಲೀಸರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ಇಂಡಿ ತಾಲ್ಲೂಕಿನ ಚಿನ್ನ, ಬೆಳ್ಳಿ ವರ್ತಕರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಮನವಿ ಸಲ್ಲಿಸಿದರು.
ಚಿನ್ನಬೆಳ್ಳಿ ವರ್ತಕರ ವಿರುದ್ಧ ಯಾವುದೇ ಅಧಿಕೃತ ದೂರು ದಾಖಲಾಗದೇ ಇದ್ದರೂ ಹಾಗೂ ಯಾವುದೇ ತಪ್ಪು ಮಾಡದೇ ಇದ್ದರು, ಯಾವುದೇ ಕಾನೂನು ಬಾಹಿರ ವ್ಯಾಪಾರ ಮಾಡದೇ ಇದ್ದರೂ ಸಹ ಪೊಲೀಸರು ಕೋರ್ಟ್ ವಾರೆಂಟ್ ಇಲ್ಲದೆಯೇ, ಸಮವಸ್ತ್ರವಿಲ್ಲದೇ, ಯಾವುದೇ ಸೂಚನೆ ಇಲ್ಲದೆಯೇ ಏಕಾಏಕಿ ಅಂಗಡಿಗಳಿಗೆ ನುಗ್ಗಿ ಗ್ರಾಹಕರ ಮುಂದೆಯೇ ಬೈಯ್ದಾಡಿ, ಅಕ್ರಮವಾಗಿ ವಶಕ್ಕೆ ಪಡೆದು ಠಾಣೆಗೆ ಕರೆದೊಯ್ದು ರಾತ್ರಿಯಿಡೀ ಕೂಡಿಹಾಕಿ ದೌರ್ಜನ್ಯ ಎಸಗಿ ನಮ್ಮನ್ನು ಅಪರಾಧಿಗಳ ರೀತಿ ನಡೆಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದರು.
ಚಿನ್ನ–ಬೆಳ್ಳಿ ವರ್ತಕರ ಮೇಲೆ ವಿನಃ ಕಾರಣ ದೂರು ದಾಖಲು ಮಾಡುವುದು, ಕಳ್ಳತನ ಪ್ರಕರಣಗಳ ತನಿಖೆ ನೆಪದಲ್ಲಿ ಚಿನ್ನ ಬೆಳ್ಳಿ ಕೆಲಸಗಾರರ ಮೇಲೆ ದೌರ್ಜನ್ಯ ನಡೆಯುವುದನ್ನು ತಕ್ಷಣ ತಡೆಯಬೇಕು ಎಂದು ಆಗ್ರಹಿಸಿದರು.
ಮಹಾಂತೇಶ ಅರ್ಜುನ, ರಮೇಶ ತೇಲಿ, ರವಿ ಡಂಗಿ, ಶ್ರೀಮಂತ ವಳಸಂಗ, ಪ್ರಕಾಶ ಹತ್ತರಕಿ, ಸಂಗಮೇಶ ಮಠಪತಿ, ಸಚಿನ ಅರ್ಜುಣಗಿ, ಆಕಾಶ ಅರ್ಜುಣಗಿ, ನಿಂಗಣ್ಣಗೌಡ ಖೇಡ, ಬಾಳಾಸಾಬ ವಳಸಂಗ, ದಯಾನಂದ ಪತ್ತಾರ, ದಶರಥ, ದತ್ತು ಕಡಗಬಾವ, ಸುನೀಲ ಅರ್ಜುಣಗಿ, ಶರಣು ತೇಲಿ, ವಿಶ್ವಾರಾಧ್ಯ ಹಿರೇಮಠ, ಆದಿತ್ಯ ಹೊಸಮನಿ, ಬಸವರಾಜ,ದಾನೇಶ ಪೋದ್ದಾರ, ಈರಣ್ಣ ಬರಗುಡಿ ಇದ್ದರು.
ಸಾಕ್ಷಾಧಾರ ಇದ್ದರೆ ಮಹಜರು ಮಾಡಿ
ಚಿನ್ನ–ಬೆಳ್ಳಿ ಜಪ್ತಿ ಮಾಡುವಾಗ ಸಾಕಷ್ಟು ಸಾಕ್ಷಾಧಾರ ಇದ್ದರೆ ಮಾತ್ರ ಪೊಲೀಸರು ಸ್ಥಳ ಮಹಜರು ಮಾಡಬೇಕು ಸಾಕ್ಷಿಗಳ ಸಮ್ಮುಖದಲ್ಲಿ ಅವರ ಸಹಿಯೊಂದಿಗೆ ವಸ್ತುಗಳನ್ನು ವಶಪಡಿಸಿಕೊಳ್ಳಬೇಕು ಅನಾವಶ್ಯಕವಾಗಿ ಚಿನ್ನಾಭರಣ ವರ್ತಕರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ಲಾಕಪ್‌ನಲ್ಲಿ ಇಡಬಾರದು ಕಳವುವಾದ ವಸ್ತುಗಳನ್ನು ಪತ್ತೆ ಹಚ್ಚಲು ಅಂಗಡಿಗೆ ಹೋಗುವಾಗ ಪೊಲೀಸರು ಸಮವಸ್ತ್ರದಲ್ಲಿ ಬರಬೇಕು ಚಿನ್ನಬೆಳ್ಳಿ ವರ್ತಕರ ಸಂಘದ ಪದಾಧಿಕಾರಿಗಳ ಸಮಾಕ್ಷಮ ಪಂಚನಾಮೆ ನಡೆಸಬೇಕು ಎಂದು ಒತ್ತಾಯಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.