ADVERTISEMENT

ಲಾಕ್‌ಡೌನ್‌ ಸಡಿಲಿಕೆ; ವಿಜಯಪುರ ನಿರಾಳ

ಸಹಜತೆಯತ್ತ ಮರಳಿದ ಜಿಲ್ಲೆ; ಮಾರುಕಟ್ಟೆಯಲ್ಲಿ ಜನಜಂಗುಳಿ

​ಪ್ರಜಾವಾಣಿ ವಾರ್ತೆ
Published 21 ಜೂನ್ 2021, 14:14 IST
Last Updated 21 ಜೂನ್ 2021, 14:14 IST
ವಿಜಯಪುರ ನಗರದ ಮಾರುಕಟ್ಟೆಯಲ್ಲಿ ಸೋಮವಾರ ಕಂಡುಬಂದ ಜನಜಂಗುಳಿ–ಪ್ರಜಾವಾಣಿ ಚಿತ್ರ
ವಿಜಯಪುರ ನಗರದ ಮಾರುಕಟ್ಟೆಯಲ್ಲಿ ಸೋಮವಾರ ಕಂಡುಬಂದ ಜನಜಂಗುಳಿ–ಪ್ರಜಾವಾಣಿ ಚಿತ್ರ   

ವಿಜಯಪುರ: ವಿಜಯಪುರ ಜಿಲ್ಲೆಗೂ ಸೋಮವಾರದಿಂದಲೇ ಅನ್ವಯವಾಗುವಂತೆ ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಕೆ ಮಾಡಿರಾಜ್ಯ ಸರ್ಕಾರ ಹೊಸ ಆದೇಶ ಹೊರಡಿಸಿದ ಪರಿಣಾಮ ಜಿಲ್ಲೆಯ ಜನ ನಿರಾಳವಾಗಿದ್ದಾರೆ.

ಕೋವಿಡ್ ಸೋಂಕಿನ ಪ್ರಮಾಣ ಶೇ 5ಕ್ಕಿಂತ ಕಡಿಮೆಯಾಗಿರುವ ಹಿನ್ನೆಲೆಯಲ್ಲಿ ಲಾಕ್‌ಡೌನ್‌ ಸಡಿಲಿಕೆ ಮಾಡಲಾಗಿದ್ದು, ಸೋಮವಾರದಿಂದಲೇ ಅನ್ವಯವಾಗುವಂತೆ ಹಗಲಿನ ವೇಳೆ ಎಲ್ಲ ರೀತಿಯ ವ್ಯಾಪಾರ, ವಹಿವಾಟಿಗೆ ಅವಕಾಶ ಕಲ್ಪಿಸಲಾಗಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಈಗಾಗಲೇ ರಾಜ್ಯದ 17 ಜಿಲ್ಲೆಗಳನ್ನು ಅನ್‌ಲಾಕ್‌ ಮಾಡಲಾಗಿತ್ತು. ಆದರೆ, ಈ ಪಟ್ಟಿಯಲ್ಲಿ ವಿಜಯಪುರ ಜಿಲ್ಲೆ ಸೇರ್ಪಡೆಯಾಗಿರಲಿಲ್ಲ. ಈ ಬಗ್ಗೆ ಸಾರ್ವಜನಿಕ ವಲಯದಿಂದ ತೀವ್ರ ಆಕ್ಷೇಪ, ಅಸಮಾಧಾನ ವ್ಯಕ್ತವಾಗಿತ್ತು.

ADVERTISEMENT

ಜಿಲ್ಲಾಧಿಕಾರಿ ಪಿ.ಸುನೀಲ್‌ಕುಮಾರ್‌ ಅವರು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ಅವರ ಗಮನಕ್ಕೆ ತಂದು, ಸರ್ಕಾರದ ಮೇಲೆ ಒತ್ತಡ ಹೇರುವ ಮೂಲಕ ಅನ್‌ಲಾಕ್‌ ಪಟ್ಟಿಗೆ ವಿಜಯಪುರವನ್ನು ಸೇರ್ಪಡೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.

ಲಾಕ್‌ಡೌನ್‌ ಸಡಿಲಿಕೆ ಪರಿಣಾಮ ವಿಜಯಪುರ ನಗರ ಸೇರಿದಂತೆ ಜಿಲ್ಲೆಯಾದ್ಯಂತ ಎರಡು ತಿಂಗಳ ಬಳಿಕ ಜನಜೀವನ ಸಹಜಸ್ಥಿತಿಗೆ ಮರಳಿದೆ. ಜಿಲ್ಲೆಯಾದ್ಯಂತ ಸರ್ಕಾರಿ ಬಸ್‌ಗಳ ಸಂಚಾರ ಆರಂಭಗೊಂಡಿದ್ದು, ನಗರ ಸಾರಿಗೆ ಸೇರಿದಂತೆ ಜಿಲ್ಲೆ, ಹೊರ ಜಿಲ್ಲೆಗಳಿಗೆ ಬಸ್‌ಗಳು ಸಂಚಾರ ಪುನರಾರಂಭಗೊಂಡಿತು.

ಅಂಗಡಿಗಳು, ಹೋಟೆಲ್‌, ರೆಸ್ಟೋರೆಂಟ್‌ಗಳು ಬಾಗಿಲು ತೆರೆದು ವ್ಯಾಪಾರ–ವಹಿವಾಟು ಆರಂಭಿಸಿದವು. ಆದರೆ, ಭಾನುವಾರದ ಅನ್‌ಲಾಕ್‌ ಪಟ್ಟಿಯಲ್ಲಿ ವಿಜಯಪುರ ಸೇರ್ಪಡೆಯಾಗಿಲ್ಲದೇ ಇದ್ದ ಕಾರಣ ಗೊಂದಲಕ್ಕೊಳಗಾಗಿದ್ದ ಚಿನ್ನಾಭರಣ, ಬಟ್ಟೆ ಅಂಗಡಿಗಳು, ಶೋರೂಂಗಳು, ಮಾಲ್‌ಗಳು ಬಾಗಿಲು ತೆರೆದಿರಲಿಲ್ಲ.

ಉಳಿದಂತೆ ನಗರದ ಮಾರುಕಟ್ಟೆ ಪ್ರದೇಶದಲ್ಲಿ ಜನಜಂಗುಳಿ ಕಂಡುಬಂದಿತು. ಪ್ರಮುಖ ವೃತ್ತಗಳಲ್ಲಿ ಸಂಚಾರ ದಟ್ಟಣೆ ಅಧಿಕವಾಗಿತ್ತು. ಬೀದಿ ಬದಿ ವ್ಯಾಪಾರಸ್ಥರ ಸಂಖ್ಯೆಯೂ ಮೊದಲಿನಂತೆ ಇತ್ತು. ಟಂಟಂ, ಆಟೊಗಳ ಸಂಚಾರವೂ ಹೆಚ್ಚಿನ ಸಂಖ್ಯೆಯಲ್ಲಿತ್ತು.

ಜುಲೈ 5ರ ವರೆಗೆ ಸಂಜೆ 5ರಿಂದ ಮರುದಿನ ಬೆಳಿಗ್ಗೆ 6ರ ವರೆಗೆ ಅಂದರೆ ರಾತ್ರಿ ಕರ್ಫ್ಯೂ ಜಾರಿಯಲ್ಲಿರಲಿದೆ.

336 ಬಸ್‌ ಸಂಚಾರ:

ಬಹುದಿನಗಳ ಬಳಿಕ ಬಸ್‌ ಸಂಚಾರ ಆರಂಭವಾದ ಹಿನ್ನೆಲೆಯಲ್ಲಿ ಚಾಲಕರು ಮತ್ತು ನಿರ್ವಾಹಕರು ತಮ್ಮ ಬಸ್‌ಗಳನ್ನು ಹೂವಿನ ಹಾರ, ಬಾಳೆ ಗಿಡ, ಮಾವಿನ ತೋರಣದಿಂದ ಸಿಂಗರಿಸಿಕೊಂಡು ರಸ್ತೆಗಳಿದಿರುವುದು ಗಮನ ಸೆಳೆಯಿತು.

ವಿಜಯಪುರದಿಂದ ಸಿಂದಗಿ, ಮುದ್ದೇಬಿಹಾಳ, ಬಸವನ ಬಾಗೇವಾಡಿ, ತಾಳಿಕೋಟೆ ಸೇರಿದಂತೆ ಎಲ್ಲ ತಾಲ್ಲೂಕು ಕೇಂದ್ರಗಳಿಗೆ ಹಾಗೂ ಕಲಬುರ್ಗಿ, ಬೆಳಗಾವಿ, ಹುಬ್ಬಳ್ಳಿಗೂ ಬಸ್‌ ಸಂಚಾರ ಆರಂಭವಾಗಿದ್ದರೂ ಸಹ ಪ್ರಯಾಣಿಕರ ಸಂಖ್ಯೆ ಕ್ಷೀಣವಾಗಿತ್ತು.

ಈ ಕುರಿತು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಮಗದ ವಿಜಯಪುರ ವಿಭಾಗೀಯ ಸಂಚಾಲಕ ನಾರಾಯಣಪ್ಪ ಕುರುಬರ, ‘ಮೈಸೂರು, ದಕ್ಷಿಣ ಕನ್ನಡ ಹೊರತು ಪಡಿಸಿ ಉಳಿದಂತೆ ರಾಜ್ಯದ ಎಲ್ಲ ಜಿಲ್ಲೆಗಳಿಗೂ ಬಸ್‌ ಸಂಚಾರ ಆರಂಭವಾಗಿದೆ. ಅಲ್ಲದೇ, ಸೊಲ್ಲಾಪುರ, ಸತಾರ, ಜತ್‌ ಸೇರಿದಂತೆ ಮಹಾರಾಷ್ಟ್ರ ರಾಜ್ಯಕ್ಕೆ 15 ಬಸ್‌ಗಳು ತೆರಳಿವೆ ಎಂದು ಹೇಳಿದರು.

ಒಟ್ಟು 433 ಬಸ್‌ಗಳಲ್ಲಿ 336 ಬಸ್‌ಗಳು ಮೊದಲ ದಿನ ಕಾರ್ಯಾಚರಣೆ ಆರಂಭಿಸಿವೆ. ಎಲ್ಲ ಚಾಲಕರು, ನಿರ್ವಾಹಕರು ಕೋವಿಡ್‌ ಲಸಿಕೆ ಮೊದಲ ಡೋಸ್‌ ಪಡೆದಿದ್ದಾರೆ ಎಂದು ತಿಳಿಸಿದರು.

***

ಎರಡರಿಂದ ಮೂರು ವಾರದಲ್ಲಿ ಕೋವಿಡ್‌ ಮೂರನೇ ಅಲೆ ಅಪ್ಪಳಿಸುವ ಭೀತಿ ಇದೆ. ಜಿಲ್ಲೆಯಲ್ಲಿ ಈಗಿನಂದಲೇ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ
–ಪಿ.ಸುನೀಲ್‌ಕುಮಾರ್‌
ಜಿಲ್ಲಾಧಿಕಾರಿ, ವಿಜಯಪುರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.