ADVERTISEMENT

ವಿಜಯಪುರ | 106 ದಿನ ಪೂರೈಸಿದ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟ

ಸಚಿವರ ಮನೆಗೆ ಮುತ್ತಿಗೆ ಯತ್ನ; ತಡೆದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 1 ಜನವರಿ 2026, 14:20 IST
Last Updated 1 ಜನವರಿ 2026, 14:20 IST
   

ವಿಜಯಪುರ: ವಿಜಯಪುರದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಆಗ್ರಹಿಸಿ ಹಾಗೂ ಸಾರ್ವಜನಿಕ– ಖಾಸಗಿ ಸಹಭಾಗಿತ್ವ (ಪಿಪಿಪಿ) ವಿರೋಧಿಸಿ 106 ದಿನಗಳಿಂದ ಇಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಹೋರಾಟ ಗುರುವಾರ ತೀವ್ರ ಸ್ವರೂಪ ಪಡೆಯಿತು.

ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಅವರ ಸೋಲಾಪುರ ರಸ್ತೆಯಲ್ಲಿರುವ ಮನೆಗೆ ಮುತ್ತಿಗೆ ಹಾಕಲು ಹೋರಾಟಗಾರರು ಮುಂದಾದಾಗ ಪೊಲೀಸರು ಮಾರ್ಗ ಮಧ್ಯೆ ತಡೆಯೊಡ್ಡಿದರು. ಈ ವೇಳೆ ಪೊಲೀಸರು ಮತ್ತು ಹೋರಾಟಗಾರರ ನಡುವೆ ತಳ್ಳಾಟ, ನೂಕಾಟ ನಡೆಯಿತು. 

ಪೊಲೀಸ್‌ಗೆ ಕಪಾಳಮೋಕ್ಷ:

ADVERTISEMENT

ಹೋರಾಟದಲ್ಲಿ ಪಾಲ್ಗೊಂಡಿದ್ದ ಬಸವನ ಬಾಗೇವಾಡಿ ತಾಲ್ಲೂಕಿನ ಪಿ.ಬಿ. ಹುಳಶ್ಯಾಳ ಮಠದ ಸಂಗನ ಬಸವ ಸ್ವಾಮೀಜಿಯವರನ್ನು ಪೊಲೀಸರು ತಡೆಯಲು ಯತ್ನಿಸಿದರು. ಅಲ್ಲದೇ, ಸ್ವಾಮೀಜಿಯವರನ್ನು ತಳ್ಳಾಡಿ ಅವರ ಬಳಿ ಇದ್ದ ಮೊಬೈಲ್‌ ಕಿತ್ತುಕೊಂಡಾಗ ಸಿಟ್ಟಿಗೆದ್ದ ಅವರು ಪೊಲೀಸ್‌ ಒಬ್ಬರಿಗೆ ಕಪಾಳ ಮೋಕ್ಷ ಮಾಡಿದರು. ತಕ್ಷಣ ಪೊಲೀಸರು ಅವರನ್ನು ವಶಕ್ಕೆ ಪಡೆದು, ಪೊಲೀಸ್‌ ವಾಹನದಲ್ಲಿ ಕೂರಿಸಿದರು. 

ರಾಜ್ಯ ಸರ್ಕಾರದ ಜನ ವಿರೋಧಿ ನೀತಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸುಸಜ್ಜಿತ ಸರ್ಕಾರಿ ಜಿಲ್ಲಾ ಆಸ್ಪತ್ರೆಯನ್ನು ಖಾಸಗಿಯವರಿಗೆ ವೈದ್ಯಕೀಯ ಕಾಲೇಜು ಮಾಡಲು ಪಿಪಿಪಿ ಮಾದರಿಯಲ್ಲಿ ಕೊಡಲು ಮುಂದಾಗಿರುವ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು. ಹೋರಾಟವನ್ನು ಹತ್ತಿಕ್ಕಲು ಸಚಿವರು, ಸರ್ಕಾರ ಷಡ್ಯಂತ್ರ ರೂಪಿಸಿರುವುದು ಖಂಡನೀಯ ಎಂದರು.

ಹೋರಾಟ ಸಮಿತಿ ಸದಸ್ಯರಾದ ಅನಿಲ ಹೊಸಮನಿ, ಅರವಿಂದ ಕಲುಲಕರ್ಣಿ, ಭಗವಾನ್‌ ರೆಡ್ಡಿ, ಸಿದ್ದಲಿಂಗ ಬಾಗೇವಾಡಿ, ಭರತ್‌ ಎಚ್‌.ಟಿ., ಮಲ್ಲಿಕಾರ್ಜುನ ಎಚ್‌.ಟಿ., ಅಕ್ರಂ ಮಾಶಾಳಕರ, ಭೋಗೇಶ್‌ ಸೋಲಾಪುರ, ಲಲಿತಾ ಬಿಜ್ಜರಗಿ, ಸುರೇಶ ಬಿಜಾಪುರ, ಶಿವಬಾಳಮ್ಮ, ಗೀತಾ ಎಚ್‌.ಟಿ., ಜಗದೇವ ಸೂರ್ಯವಂಶಿ ಸೇರಿದಂತೆ 30ಕ್ಕೂ ಅಧಿಕ ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದು, ಜಿಲ್ಲೆಯ ಹೊರ್ತಿ, ಝಳಕಿ ಠಾಣೆಗೆ ಕೊರೆದೊಯ್ದು ದಿನವಿಡಿ ಕೂರಿಸಿಕೊಂಡಿದ್ದರು. ಬಳಿಕ ಹೋರಾಟಗಾರರ ವಿರುದ್ಧ ದೂರು ದಾಖಲಿಸಿಕೊಂಡು ಬಿಡುಗಡೆಗೊಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.