ADVERTISEMENT

ವಿಜಯಪುರ ಉಸ್ತುವಾರಿ ಸಚಿವರನ್ನು ಬದಲಾಯಿಸಿ: ಬಸವರಾಜ ಸೂಳಿಭಾವಿ ಆಗ್ರಹ

​ಪ್ರಜಾವಾಣಿ ವಾರ್ತೆ
Published 6 ಜನವರಿ 2026, 11:28 IST
Last Updated 6 ಜನವರಿ 2026, 11:28 IST
<div class="paragraphs"><p>ಎಂ.ಬಿ.ಪಾಟೀಲ,&nbsp;ಬಸವರಾಜ ಸೂಳಿಭಾವಿ</p></div>

ಎಂ.ಬಿ.ಪಾಟೀಲ, ಬಸವರಾಜ ಸೂಳಿಭಾವಿ

   

ವಿಜಯಪುರ: ‘ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟವನ್ನು ಪೊಲೀಸರ ಮೂಲಕ ಹತ್ತಿಕ್ಕಿರುವ ಸಚಿವ ಎಂ.ಬಿ.ಪಾಟೀಲರನ್ನು ಜಿಲ್ಲಾ ಉಸ್ತುವಾರಿಯಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಬಿಡುಗಡೆ ಮಾಡಬೇಕು’ ಎಂದು ಪ್ರಗತಿಪರ ಚಿಂತಕ, ಲೇಖಕ ಬಸವರಾಜ ಸೂಳಿಭಾವಿ ಒತ್ತಾಯಿಸಿದ್ದಾರೆ.

ನಗರದಲ್ಲಿ ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಉಸ್ತುವಾರಿ ಮಂತ್ರಿ ಜಿಲ್ಲೆಯ ಜನರ ಹಿತಾಸಕ್ತಿ ಕಾಯಬೇಕು. ಆದರೆ, ವಿಜಯಪುರ ಜನರ ಹಿತಾಸಕ್ತಿ ಕಾಯದ ಎಂ.ಬಿ.ಪಾಟೀಲರ ಉಸ್ತುವಾರಿ ಜಿಲ್ಲೆಗೆ ಅಗತ್ಯವಿಲ್ಲ’ ಎಂದು ಕಿಡಿಕಾರಿದರು.

ADVERTISEMENT

‘ಜನರ ಹಿತಾಸಕ್ತಿಗಾಗಿ ನಡೆಯುತ್ತಿರುವ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟವನ್ನು ಹತ್ತಿಕ್ಕಿರುವ ಹೊಣೆಗಾರಿಕೆ ಹೊತ್ತುಕೊಂಡು ಎಂ.ಬಿ.ಪಾಟೀಲ ಸ್ವತಃ ಉಸ್ತುವಾರಿಯಿಂದ ಹಿಂದೆ ಸರಿಯಬೇಕು, ಇಲ್ಲವಾದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜನಸಾಮಾನ್ಯರ ಹಿತಾಸಕ್ತಿ ಕಾಯುವ ಬೇರೆ ಮಂತ್ರಿಯನ್ನು ಉಸ್ತುವಾರಿಯಾಗಿ ನೇಮಕ ಮಾಡಬೇಕು’ ಎಂದು ಆಗ್ರಹಿಸಿದರು.

‘ಜಿಲ್ಲಾ ಉಸ್ತುವಾರಿ ಸಚಿವರ ಗೃಹ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಕೊಡಲು ಹೋದ ಬೆರಳೆಣಿಕೆಯಷ್ಟು ಮಂದಿ  ಹೋರಾಟಗಾರನ್ನು ತಡೆಯಲು ಸಮವಸ್ತ್ರ ರಹಿತವಾಗಿ ಪೊಲೀಸರು ದೊಡ್ಡ ಸಂಖ್ಯೆಯಲ್ಲಿ ಹೋಗಿರುವುದರ ಹಿನ್ನೆಲೆ ಏನು? ಎಂಬುದರ ಕುರಿತು ಐಜಿ‍ಪಿಯಿಂದ ಇಲಾಖಾ ತನಿಖೆ ನಡೆಸಬೇಕು’ ಎಂದು ಮುಖ್ಯಮಂತ್ರಿ, ಗೃಹ ಸಚಿವರನ್ನು ಒತ್ತಾಯಿಸಿದರು.

‘ಅಂದು ಪೊಲೀಸರು ಉದ್ದೇಶಪೂರ್ವಕವಾಗಿ ಹೋರಾಟಗಾರರನ್ನು ಪ್ರಚೋಧಿಸಿದ, ಗಲಭೆ ಸೃಷ್ಟಿಸಲು ಯತ್ನಿಸಿದ ಹಾಗೂ ಹೋರಾಟಗಾರರ ಜೊತೆ ದುಂಡಾವರ್ತನೆ ನಡೆಸಿದ ಎಲ್ಲ ಪೊಲೀಸರನ್ನು ಜಿಲ್ಲೆಯಿಂದ ವರ್ಗಾವಣೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಜನವರಿ 9ರಂದು ಜಿಲ್ಲೆಗೆ ಬರುವ ಮುಖ್ಯಮಂತ್ರಿಯವರು ಪಿಪಿಪಿ ಕೈಬಿಟ್ಟಿದ್ದೇವೆ, ಸರ್ಕಾರಿ ವೈದ್ಯಕೀಯ ಕಾಲೇಜು ಸ್ಥಾಪಿಸುತ್ತೇವೆ ಎಂದು ಘೋಷಣೆ ಮಾಡಬೇಕು' ಎಂದು ಒತ್ತಾಯಿಸಿದರು.

‘ಹೋರಾಟಗಾರರ ವಿರುದ್ಧ ದಾಖಲಾಗಿರುವ ಕೇಸನ್ನು ಹಿಂಪಡೆಯಬೇಕು, ಎಲ್ಲ ಹೋರಾಟಗಾರರನ್ನು ಬೇಷರತ್‌ ಬಿಡುಗಡೆ ಮಾಡಬೇಕು’ ಎಂದು ಆಗ್ರಹಿಸಿದರು.

‘ಜ.9ಕ್ಕೆ ವಿಜಯಪುರಕ್ಕೆ ಮುಖ್ಯಮಂತ್ರಿ ಬರುತ್ತಿರುವುದರಿಂದ ಆ ಸಂದರ್ಭದಲ್ಲಿ ಸರ್ಕಾರಿ ವೈದ್ಯಕೀಯ ಕಾಲೇಜು ಹೋರಾಟದ ಟೆಂಟ್‌ ಇರಬಾರದು ಎಂದೇ ಸಚಿವರ ನಿರ್ದೇಶನದಂತೆ ಜಿಲ್ಲಾಡಳಿತ, ಪೊಲೀಸ್‌ ವ್ಯವಸ್ಥಿತವಾಗಿ ಹೋರಾಟವನ್ನು ಪೂರ್ವ ಯೋಜಿತವಾಗಿ ದಮನ ಮಾಡಿದೆ’ ಎಂದು ಆರೋಪಿಸಿದರು.

‘ಪ್ರತಿಭಟನಾಕಾರರ ಟೆಂಟ್‌ ಕಿತ್ತು ಹಾಕಿರುವುದು ಸಂವಿಧಾನ, ಪ್ರಜಾಪ್ರಭುತ್ವ ವಿರೋಧಿ ಕ್ರಮವಾಗಿದೆ. ಮಧ್ಯರಾತ್ರಿ ಹೋಗಿ ಟೆಂಟ್‌ ಕೀಳುವ ಉದ್ದೇಶವೇನಿತ್ತು. ಹೋರಾಟಗಾರರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಏಕೆ? ನೋಟಿಸ್‌ ನೀಡದೇ ಟೆಂಟ್‌ ಕೀಳುವ ಅಧಿಕಾರ ಪೊಲೀಸರಿಗೆ ಕೊಟ್ಟವರು ಯಾರು?’ ಎಂದು ಪ್ರಶ್ನಿಸಿದರು.

‘ಹೋರಾಟಗಾರರ ವಿರುದ್ಧ ಪೊಲೀಸರು ದಾಖಲಿಸಿರುವ ದೂರು ಸಂಪೂರ್ಣ ಸುಳ್ಳಿನಿಂದ ಕೂಡಿದೆ. ಸುಳ್ಳು ದೂರು ದಾಖಲಿಸಿ ಸಿದ್ದರಾಮಯ್ಯ ಸರ್ಕಾರವನ್ನು ಬೆತ್ತಲೆ ಮಾಡುವ ಕೆಲಸ ಪೊಲೀಸರು ಮಾಡಿದ್ದಾರೆ. ಸುಳ್ಳಿನ ಸಂಕಥನ ಕಟ್ಟಿರುವ ಪೊಲೀಸರಿಗೆ ನಾಚಿಕೆಯಾಗಬೇಕು’ ಎಂದರು.

‘ಬಂಧಿತ ಆರು ಜನ ಹೋರಾಟಗಾರರು ಸರ್ಕಾರಿ ಕಾಲೇಜು ಆರಂಭಿಸಬೇಕು ಎಂದು ಆಗ್ರಹಿಸಿ ವಿಜಯಪುರ ದರ್ಗಾ ಜೈಲಿನಲ್ಲೇ ಮಂಗಳವಾರದಿಂದ ಹೋರಾಟವನ್ನು ಆರಂಭಿಸಿದ್ದಾರೆ' ಎಂದು ತಿಳಿಸಿದರು.

ದಲಿತ ವಿದ್ಯಾರ್ಥಿ ಪರಿಷತ್‌ ಅಧ್ಯಕ್ಷ ಶ್ರೀನಾಥ ಪೂಜಾರಿ, ಪ್ರಭುಗೌಡ ಪಾಟೀಲ, ಡಿವಿಪಿ ಜಿಲ್ಲಾ ಘಟಕದ ಅಧ್ಯಕ್ಷ  ಅಕ್ಷಯ್‌ ಅಜಮಾನಿ ಪತ್ರಿಕಾಗೋಷ್ಠಿಯಲ್ಲಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.