
ವಿಜಯಪುರ: ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಕಮಲಾದೇವಿ ಪಾಟೀಲ ಮೆಮೋರಿಯಲ್ ಎಜ್ಯುಕೇಶನಲ್ ಅಸೋಸಿಯೇಶನ್ ಹಾಗೂ ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಸಹಯೋಗದಲ್ಲಿ ‘ವಿಜಯಪುರ ಜಿಲ್ಲೆ- ನಾಡು ನುಡಿ ಚಿಂತನ’ ಕುರಿತು ಒಂದು ದಿನದ ರಾಜ್ಯಮಟ್ಟದ ವಿಚಾರ ಕಮ್ಮಟ ನವೆಂಬರ್ 27ರ ಬೆಳಿಗ್ಗೆ 10ಗಂಟೆಗೆ ಸಾಯಿ ಪಾರ್ಕ್ ಕಾಲೇಜು ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನಾಮ ನಿರ್ದೇಶಿತ ಸದಸ್ಯೆ ದಾಕ್ಷಾಯಿಣಿ ಹುಡೇದ ತಿಳಿಸಿದ್ದಾರೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಪುರುಷೋತ್ತಮ ಬಿಳಿಮಲೆ ಕಾರ್ಯಕ್ರಮ ಉದ್ಘಾಟಿಸಲಿದ್ದು, ಚಾಣಕ್ಯ ಕರಿಯರ್ ಅಕ್ಯಾಡೆಮಿಯ ಸಂಸ್ಥಾಪಕ ಎನ್.ಎಂ.ಬಿರಾದಾರ ಅಧ್ಯಕ್ಷತೆ ವಹಿಸಲಿದ್ದಾರೆ. ಬೆಂಗಳೂರಿನ ನೇಗಿಲಯೋಗಿ ಟ್ರಸ್ಟಿನ ಅಧ್ಯಕ್ಷ ಡಾ.ಎಚ್.ಆರ್.ಸ್ವಾಮಿ ಭಾಗವಹಿಸಲಿದ್ದು, ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಸಂತೋಷ ಹಾನಗಲ್ಲ ಉಪಸ್ಥಿತರಿರಲಿದ್ದಾರೆ.
‘ಆದಿಲ್ ಶಾಹಿ ಸಾಹಿತ್ಯ - ಕನ್ನಡ ಅನುವಾದಗಳು’ ವಿಷಯವಾಗಿ ಕಲಬುರಗಿ ಸಾರಿಗೆ ಇಲಾಖೆಯ ವಿಶ್ರಾಂತ ಅಧೀಕ್ಷಕ ರಿಯಾಜ್ ಅಹ್ಮದ ಬೋಡೆ ವಿಶೇಷ ಉಪನ್ಯಾಸ ನೀಡಲಿದ್ದಾರೆ.
ಅಂದು ಮಧ್ಯಾಹ್ನ 12 ರಿಂದ 1.30ರ ವರೆಗೆ ಗೋಷ್ಠಿ 1ರ ‘ವಚನ ಸಂಗೋಪನೆ ಮತ್ತು ಹಳಕಟ್ಟಿಯವರ ಕೊಡುಗೆ’ ಕುರಿತು ಟಕ್ಕಳಕಿ ಸರ್ಕಾರಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯರಾದ ಬನಶ್ರೀ ಹತ್ತಿ ಹಾಗೂ ‘ಗಡಿ ಭಾಗದ ಕನ್ನಡ ಶಾಲೆಗಳು ಮತ್ತು ಸ್ಥಿತಿಗತಿ’ ಕುರಿತು ಬೆಂಗಳೂರಿನ ಎಂವಿಜೆ ಪದವಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಡಾ.ಮದಗೊಂಡ ಬಿರಾದಾರ ವಿಷಯ ಮಂಡಿಸಲಿದ್ದಾರೆ. ಪ್ರೊ.ವಿ.ಎಂ.ಸುರಪುರ ಅಧ್ಯಕ್ಷತೆ ವಹಿಸಲಿದ್ದಾರೆ.
ಮಧ್ಯಾಹ್ನ 2.30 ರಿಂದ ಸಂಜೆ 4ರ ವರೆಗೆ ನಡೆಯಲಿರುವ ಗೋಷ್ಠಿ 2ರ ‘ಗೋಕಾಕ ಚಳವಳಿ ಮತ್ತು ವಿಜಯಪುರ ಜಿಲ್ಲೆ’ ವಿಷಯವಾಗಿ ಸಿಂದಗಿಯ ವಿಶ್ರಾಂತ ಪ್ರಾಧ್ಯಾಪಕ ಡಾ. ಎಂ.ಎಂ ಪಡಶೆಟ್ಟಿ ಹಾಗೂ ಜಿಲ್ಲೆಯ ಶಿಕ್ಷಣ ಸಂಸ್ಥೆಗಳು ಮತ್ತು ಕನ್ನಡದ ಏಳಿಗೆ ಕುರಿತು ಹಲಸಂಗಿ ಗೆಳೆಯರ ಪ್ರತಿಷ್ಠಾನದ ಸದಸ್ಯರಾದ ದಾಕ್ಷಾಯಿಣಿ ಬಿರಾದಾರ ವಿಷಯ ಮಂಡಿಸುವರು. ಜಂಬಗಿ ಸರ್ಕಾರು ಪ್ರೌಢಶಾಲೆ ಮುಖ್ಯೋಪಾಧ್ಯಾಯರಾದ ರೇಣುಕಾ ವೈ. ಕೊಣ್ಣೂರ ಅಧ್ಯಕ್ಷತೆ ವಹಿಸಲಿದ್ದಾರೆ.
ಅಂದು ಸಂಜೆ 4 ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ರಾಜ್ಯಸಭೆ ಮಾಜಿ ಸದಸ್ಯರೂ ಆದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಡಾ. ಎಲ್. ಹನುಮಂತಯ್ಯ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದು, ಚಾಣಕ್ಯ ಕಲಾ ಮತ್ತು ವಾಣಿಜ್ಯ ಮಹಾವಿದ್ಯಾಲಯದ ಪ್ರಾಚಾರ್ಯ ಡಾ.ಎಸ್.ಟಿ ಮೇರವಾಡೆ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.