
ವಿಜಯಪುರ: ಇಲ್ಲಿಯ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಮಂಗಳವಾರ ರಾಘವೇಂದ್ರ ಸ್ವಾಮಿಗಳವರ 431 ನೇ ವರ್ಧಂತಿ ಉತ್ಸವವನ್ನು ಭಕ್ತಿ ಶ್ರದ್ಧಾಪೂರ್ವಕವಾಗಿ ಆಚರಿಸಲಾಯಿತು.
ಬೆಳಿಗ್ಗೆ ವೃಂದಾವನದ ನಿರ್ಮಾಲ್ಯ ವಿಸರ್ಜನ, ಬಳಿಕ ಪಂಚಾಮೃತ ಅಭಿಷೇಕ, ಭಕ್ತ ಮಂಡಳಿಯಿಂದ ಅಷ್ಟೋತ್ತರ ಪಾರಾಯಣ ನಡೆದವು. ಇದೇ ಸಂದರ್ಭದಲ್ಲಿ ವೃಂದಾವನಕ್ಕೆ ನೂತನ ವಸ್ತ್ರ ಸಮರ್ಪಿಸಲಾಯಿತು.
ನಂತರ ಕನಕಸೇವೆ ನಡೆಯಿತು. ವೇದ ಮಂತ್ರ ವಾದ್ಯಗಳೊಂದಿಗೆ ರಥೋತ್ಸವ ವೈಭವದಿಂದ ಜರುಗಿತು. ಅಲಂಕೃತ ರಥದಲ್ಲಿ ಕುಳ್ಳಿರಿಸಿದ ಪ್ರಲ್ಹಾದರಾಜರ ಪ್ರತಿಮೆ ಕಂಗೊಳಿಸುತ್ತಿತ್ತು. ಭಕ್ತ ಸಂಗೀತ ಮಠದೆಲ್ಲೆಡೆ ಮಾರ್ದನಿಸಿತು. ಮಠವನ್ನು ತಳಿರು ತೋರಣ ಬಾಳೆ ದಿಂಡುಗಳಿಂದ ಅಲಂಕರಿಸಲಾಗಿತ್ತು.
ಮಠದಲ್ಲಿ ಏಳು ದಿನಗಳ ಕಾಲ ಹುಬ್ಬಳ್ಳಿಯ ಪ್ರವಚನ ಪಂಡಿತ ಗೋಪಿನಾಥಾಚಾರ್ಯ ಗಲಗಲಿ ಅವರಿಂದ ಪ್ರವಚನ ಸಪ್ತಾಹದ ಮಂಗಳ ಜರುಗಿತು.
ಗೋಪಿನಾಥಾಚಾರ್ಯ ಗಲಗಲಿ ಮಾತನಾಡಿ, ಗುರುಸಾರ್ವಭೌಮರನ್ನು ಜ್ಞಾನ ದೀಪ ಪ್ರಕಾಶಿಸಿದವರು, ಭಕ್ತರು ಭಕ್ತಿಯಿಂದ ಕರೆದಲ್ಲಿ ರಾಯರು ಖಂಡಿತವಾಗಿ ಬರುವರು. ಗುರುರಾಯರು ಅನೇಕರ ಮೇಲೆ ದಯೆ ತೋರಿಸಿರುವರು’ ಎಂದರು.
ಗೋರಖಪುರ ಸಂಪ್ರದಾಯದ ಭಿಕ್ಷುಕನ ಕಥೆಯನ್ನು ಮೂಲವಾಗಿಟ್ಟುಕೊಂಡ ರಚಿಸಿದ ಅಲಖ್ ನಿರಂಜನ ಕಾವ್ಯವನ್ನು ರಸವತ್ತಾಗಿ ವಿವರಿಸಿದ ಪಂಡಿತರು, ಅಧ್ಯಾತ್ಮ ಪರಂಪರೆಯನ್ನು ಜೀವಂತವಾಗಿರಿಸಿಕೊಂಡುದರಲ್ಲಿ ಸಾಧು ಸಂತರ ಪ್ರಯತ್ನ ಶ್ಲಾಘನೀಯ ಎಂದರು.
ಹುಬ್ಬಳ್ಳಿಯ ಆನಂದರಾವ್ ನಾಯಕ, ಮಠದ ವಿಚಾರಣಾಕರ್ತಾ ಗೋಪಾಲ ನಾಯಕ ದಂಪತಿ ಅವರು ಪಂಡಿತ್ ಗೋಪಿನಾಥಾಚಾರ್ಯ ಗಲಗಲಿ ಅವರಿಗೆ ಗುರುಕಾಣಿಕೆ ನೀಡಿ ಗೌರವಿಸಿದರು.
ಗೋಪಾಲ ನಾಯಕ ಮಾತನಾಡಿ, ನಂಜನಗೂಡು ಮಠ ಸ್ಥಾಪನೆಯಾಗಿ 20 ವರ್ಷಗಳಾಗಿದ್ದು, ಅದರ ಇತಿಹಾಸ ವಿವರಿಸಿದರು.
ಗುರುರಾಯರು ತಮ್ಮ ಜೀವಿತದ ಅವಧಿಯಲ್ಲಿ ವಿಜಯಪುರಕ್ಕೆ ಕೃಷ್ಣೆಯ ತಟದಲ್ಲಿ ಬಂದು ಹೋಗಿದ್ದರ ಕುರಿತು ಪ್ರಸ್ತಾಪಿಸಿದರು.
ಪಂಡಿತ್ ಮಧ್ವೇಶಾಚಾರ್ಯ ಜೋಶಿ (ಮುತ್ತಗಿ) ಪ್ರಶ್ನೋತ್ತರ ನಡೆಸಿಕೊಟ್ಟು, ಪ್ರವಚನಕಾರರನ್ನು ಪರಿಚಯಿಸಿದರು. ಪಂಡಿತ್ ಪ್ರಣವಾಚಾರ್ಯ ಕಟ್ಟಿ ಮಾತನಾಡಿದರು. ಪ್ರವಚನಕಾರರನ್ನು ನಗರದ ಗಾಯತ್ರಿ ಸಮೂಹದ ಪರವಾಗಿ ಸನ್ಮಾನಿಸಲಾಯಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.