
ವಿಜಯಪುರ: ಗ್ರಾಮ ಪಂಚಾಯಿತಿ ಮಟ್ಟದಲ್ಲಿ ತೆರಿಗೆ ವಸೂಲಾತಿ ವಿಷಯದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಗ್ರೇಡ್-1, ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ತಮ್ಮ ತಮ್ಮ ಗ್ರಾಮ ಪಂಚಾಯಿತಿಗಳ ಕರ ವಸೂಲಾತಿ ಸಿಬ್ಬಂದಿಯೊಂದಿಗೆ ಮುತುವರ್ಜಿ ವಹಿಸಿ ಅಭಿಯಾನದ ರೂಪದಲ್ಲಿ ಆದ್ಯತೆಯ ಮೇರೆಗೆ ಪ್ರಗತಿ ಸಾಧಿಸಬೇಕು. ಒಂದು ವೇಳೆ ನಿಗದಿಪಡಿಸಿದ ಗುರಿ ಸಾಧಿಸದಿದ್ದಲ್ಲಿ ಕಟ್ಟುನಿಟ್ಟಿನ ಕ್ರಮವಹಿಸಲಾಗುವುದು ಎಂದು ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ ಹೇಳಿದರು.
ಜಿಲ್ಲಾ ಪಂಚಾಯಿತಿ ಸಭಾ ಭವನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಕರ ವಸೂಲಾತಿ ಕುರಿತು ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿದರು.
ಗ್ರಾಮ ಪಂಚಾಯಿತಿಗಳು ಸರ್ಕಾರದ ಅನುದಾನಕ್ಕಿಂತ ಸ್ಥಳೀಯವಾಗಿ ಸಂಗ್ರಹವಾಗುವ ಸಂಪನ್ಮೂಲಗಳ ಮೇಲೆ ನೌಕರರ ವೇತನ, ಕುಡಿಯುವ ನೀರು, ಬೀದಿ ದೀಪಗಳ ನಿರ್ವಹಣೆ, ಸ್ವಚ್ಛತೆ ಮತ್ತಿತರ ಕಾರ್ಯಗಳಿಗೆ ಅನುದಾನ ಬಳಸಬೇಕಾಗುತ್ತದೆ ಎಂದರು.
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಹಲವಾರು ಯೋಜನೆಗಳು ಜಾರಿಯಲ್ಲಿವೆ. ಈ ಎಲ್ಲ ಯೋಜನೆಗಳ ಸೌಲಭ್ಯಗಳನ್ನು ಸಕಾಲದಲ್ಲಿ ಗ್ರಾಮೀಣ ಜನರಿಗೆ ತಲುಪಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಮತ್ತು ಗ್ರಾಮ ಪಂಚಾಯಿತಿಗಳನ್ನು ಸಬಲೀಕರಣಗೊಳಿಸುವುದೂ ನಮ್ಮ ಜವಾಬ್ದಾರಿಯಾಗಿದೆ. ನಮ್ಮ ಜವಾಬ್ದಾರಿಯನ್ನು ಅವಕಾಶ ಎಂದು ತಿಳಿದು, ಈ ಅವಕಾಶವನ್ನು ಉಪಯೋಗಿಸಿಕೊಂಡು ನಾವು ಗ್ರಾಮೀಣ ಮಟ್ಟದ ಜನರಿಗೆ ಮೀಸಲಿರುವ ಸೇವೆಗಳನ್ನು ಅವರಿಗೆ ತಲುಪಿಸಿದರೆ ಮಾತ್ರ ನಾವು ಯಶಸ್ವಿ ಕಾಣುತ್ತೇವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿಯ ಎಲ್ಲಾ ಸಿಬ್ಬಂದಿ ನಿಗದಿತ ಸಮಯಾನುಸಾರ ಕಚೇರಿಗೆ ಹಾಜರಾಗಿ ಇ-ಹಾಜರಾತಿ ಮೂಲಕ ಕಡ್ಡಾಯವಾಗಿ ತಮ್ಮ ಹಾಜರಾತಿ ದಾಖಲಿಸಬೇಕು. ಪಂಚಾಯಿತಿಯ ಕಾರ್ಯದರ್ಶಿ ಗ್ರೇಡ್-1 ಮತ್ತು ಗ್ರೇಡ್-2 ಹಾಗೂ ದ್ವಿತೀಯ ದರ್ಜೆ ಲೆಕ್ಕ ಸಹಾಯಕರು ತಮಗೆ ವಹಿಸಿರುವ ಕರ್ತವ್ಯ ಅರಿತು ಕಾರ್ಯ ನಿರ್ವಹಿಸಬೇಕು ಎಂದು ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಆಡಳಿತ ಶಾಖೆಯ ಅಧೀಕ್ಷಕರಾದ ತಹಸೀನ ಗುಣಕಿ, ಜಿ.ಪಂ. ಸಿಬ್ಬಂದಿ ಸಂತೋಷ ಪೂಜಾರಿ, ಶಿವರಾಜಕುಮಾರ ಹೊನವಾಡ, ಭೀಮಾಶಂಕರ ಬಿರಾದಾರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.